ADVERTISEMENT

ಶೀರೂರು ಶ್ರೀಗಳ ಅಂತಿಮ ದರ್ಶನ ಪಡೆದ ಭಕ್ತರು

ಮೂಲ ಮಠಕ್ಕೆ ಪಾರ್ಥಿವ ಶರೀರ

​ಪ್ರಜಾವಾಣಿ ವಾರ್ತೆ
Published 19 ಜುಲೈ 2018, 13:30 IST
Last Updated 19 ಜುಲೈ 2018, 13:30 IST
ಶೀರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಪಾರ್ಥಿವ ಶರೀರ
ಶೀರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಪಾರ್ಥಿವ ಶರೀರ   

ಉಡುಪಿ: ಶೀರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ಪಾರ್ಥಿವ ಶರೀರವನ್ನು ಮರಣೊತ್ತರ ಪರೀಕ್ಷೆಯ ಬಳಿಕ ಗುರುವಾರ ಸಂಜೆ ಶೀರೂರು ಮಠಕ್ಕೆ ತರಲಾಯಿತು.

ಶ್ರೀಗಳ ಪಾರ್ಥಿವ ಶರೀರಕ್ಕೆ ಮಧ್ವ ಸರೋವರದಲ್ಲಿ ಸ್ನಾನ ಮಾಡಿಸಿ, ಕೃಷ್ಣಮಠಕ್ಕೆ ತರಲಾಯಿತು. ಕೃಷ್ಣನ ದರ್ಶನ ಮಾಡಿ, ಶೀರೂರು ಮಠದ ಗುಡಿಯ ಮುಂಭಾಗದಲ್ಲಿ ಇರಿಸಿ ಪೂಜೆ ಸಲ್ಲಿಸಿದ ಬಳಿಕ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಯಿತು. ಭಕ್ತರು, ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಶ್ರೀಗಳ ಅಂತಿಮ ದರ್ಶನ ಪಡೆದರು.

ಹಿರಿಯಡ್ಕದಲ್ಲಿರುವ ಮೂಲ ಮಠದಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆಗಳು ನಡೆದಿದ್ದು, ಪಾರ್ಥಿವ ಶರೀರವನ್ನು ಅಲ್ಲಿಗೆ ಕೊಂಡೊಯ್ಯಲಾಗುತ್ತದೆ.

ಬಿಗಿ ಭದ್ರತೆ: ಶೀರೂರು ಮೂಲ ಮಠಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಮೂರು ದಿನಗಳ ಕಾಲ ಮಠ ಪೊಲೀಸ್ ಸುಪರ್ದಿಯಲ್ಲಿರಲಿದ್ದು, ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮೂಲ ಮಠದತ್ತ ಪಾರ್ಥಿವ ಶರೀರ

ಉಡುಪಿ ಮಠದ ಸಂಪ್ರದಾಯದಂತೆ ಅಂತ್ಯಸಂಸ್ಕಾರ: ಉಡುಪಿ ಮಠದ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಸಲಾಗುತ್ತದೆ. ಪಾರ್ಥಿವ ಶರೀರವನ್ನು ಶೀರೂರು ಮಠದ ಬಳಿ ತಂದು ಗುಡಿಯ ಮುಂಭಾಗದಲ್ಲಿ ಇರಿಸಿ ಪೂಜೆ ಸಲ್ಲಿಸಲಾಗಿದೆ. ನಂತರ ಪಾರ್ಥಿವ ಶರೀರವನ್ನು ಮೂಲ ಮಠಕ್ಕೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ಅವರ ಪೂಜಾ ಸಾಮಾಗ್ರಿಗಳನ್ನು ಅವರ ಶರೀರದ ಜೊತೆ ಇರಿಸಿ ಬೃಂದಾವನ ನಿರ್ಮಿಸಿ ಅದರಲ್ಲಿ ಉಪ್ಪು, ಹತ್ತಿ, ಕಾಳುಮೆಣಸು, ಕರ್ಪೂರಗಳನ್ನು ತುಂಬಿಸಿ ಸಮಾಧಿ ಮಾಡಲಾಗುತ್ತದೆ. ಶಿಷ್ಯ ಸ್ವೀಕಾರ ಸಂದರ್ಭದಲ್ಲಿ ಏನೆಲ್ಲಾ ವಿಧಿ ವಿಧಾನಗಳು ನಡೆಯುತ್ತವೆಯೋ ಅದೇ ವಿಧಿ ವಿಧಾನಗಳನ್ನು ನಡೆಸಲಾಗುತ್ತದೆ. ಅಷ್ಠ ಮಠಗಳ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನ, ಶಿಷ್ಯ ಸ್ವೀಕಾರ ವಿಚಾರ ಎಲ್ಲವೂ ದ್ವಂದ್ವ ಮಠಕ್ಕೆ ಸೇರುತ್ತದೆ. ಶೀರೂರು ಮಠಕ್ಕೆ ದ್ವಂದ್ವ ಮಠ ಸೋದೆ ಮಠ. ಈ ಹಿನ್ನೆಲೆಯಲ್ಲಿ ಎಲ್ಲಾ ವಿಧಿ ವಿಧಾನಗಳನ್ನು ಸೋದೆ ಮಠ ನಡೆಸಲಿದೆ.

ADVERTISEMENT

ಇನ್ನಷ್ಟು ಸುದ್ದಿಗಳು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.