ಬೆಂಗಳೂರು: ಕರ್ನಾಟಕ–ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ. ರಾಜ್ಯದ ತಂಟೆಗೆ ಯಾರೇ ಬಂದರೂ ಸರ್ಕಾರ ತಕ್ಕ ಉತ್ತರ ನೀಡಲಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಹೇಳಿದರು.
ವಿಧಾನ ಪರಿಷತ್‌ನ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಬಿ.ಕೆ. ಹರಿಪ್ರಸಾದ್ ಅವರು ಎತ್ತಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ನಾಡು, ನುಡಿ, ಗಡಿ ವಿಚಾರದಲ್ಲಿ ತಕರಾರು ಸಹಿಸುವುದಿಲ್ಲ. ಇಂತಹ ಕಿರಿಕ್ ನೋಡಿಕೊಂಡು ಕೈಕಟ್ಟಿ ಕೂರುವುದಿಲ್ಲ. ಮಹಾರಾಷ್ಟ್ರ ಸರ್ಕಾರ ಗಡಿ ಭಾಗದ ಜನರ ವಿಷಯದಲ್ಲಿ ಅನಗತ್ಯ ರಾಜಕೀಯ ಮಾಡುತ್ತಿದೆ ಎಂದು ದೂರಿದರು.
‘ಎಷ್ಟೇ ಅಡ್ಡಿಗಳು ಎದುರಾದರೂ ನಾವು ಸಮಾಧಾನದಿಂದ ಇದ್ದೇವೆ. ಅದನ್ನೇ ನೆರೆ ರಾಜ್ಯಗಳು ದೌರ್ಬಲ್ಯ ಎಂದು ಭಾವಿಸಬಾರದು. ಕಾನೂನು ಹೋರಾಟಕ್ಕೆ ರಾಜ್ಯವೂ ಸಿದ್ಧವಾಗಿದೆ’ ಎಂದರು.
ಬಿ.ಕೆ. ಹರಿಪ್ರಸಾದ್ ಮಾತನಾಡಿ, ಗಡಿ ಭಾಗದ ಮರಾಠಿ ಭಾಷಿಕರ ಬೇಡಿಕೆ ಕುರಿತು ಮಹಾರಾಷ್ಟ್ರ ಸರ್ಕಾರ ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಅಧಿಕಾರಿಗಳ ಜತೆ ಚರ್ಚೆ ನಡೆಸಿದೆ. ಗಡಿ ಭಾಗದ 865 ಹಳ್ಳಿಗಳ ಮರಾಠಿ ಭಾಷಿಕರ ಬೆನ್ನಿಗೆ ದೃಢವಾಗಿ ನಿಲ್ಲುವ ಹಾಗೂ ನ್ಯಾಯಾಲಯದ ಹೋರಾಟ ಮಾಡುವುದಾಗಿ ಹೇಳಿಕೆ ನೀಡಿದೆ. ಆರೋಗ್ಯ ವಿಮೆಯಡಿ ಮುಖ್ಯಮಂತ್ರಿ ವೈದ್ಯಕೀಯ ಸಹಾಯ ನಿಧಿಯ ಸೌಲಭ್ಯ ಪಡೆಯಲು ತಹಶೀಲ್ದಾರ್ ಶ್ರೇಣಿಯ ಅಧಿಕಾರಿಗಳನ್ನು ನೇಮಿಸಿದೆ. ದ್ವಿಭಾಷಾ ಅಧಿಕಾರಿಗಳನ್ನು ನೇಮಿಸುವಂತೆ ಕರ್ನಾಟಕಕ್ಕೆ ಪತ್ರ ಬರೆಯುವುದಾಗಿ ಹೇಳಿದೆ. ಇಂತಹ ಹಸ್ತಕ್ಷೇಪ ನಿಯಂತ್ರಿಸಿ, ಗಡಿ ಭಾಗದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.