ADVERTISEMENT

ಯುದ್ಧ, ಭಯೋತ್ಪಾದನೆ ತಡೆಗೆ ಗಾಂಧಿ ತತ್ವವೇ ಅಸ್ತ್ರ: ರಾಮಚಂದ್ರ ಗುಹಾ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2023, 16:27 IST
Last Updated 27 ನವೆಂಬರ್ 2023, 16:27 IST
ಬೆಂಗಳೂರಿನಲ್ಲಿ ಸೋಮವಾರ ನಡೆದ 36ನೇ ಲಾ ಏಷಿಯಾ ಸಮ್ಮೇಳನದಲ್ಲಿ ಅಂಕಣಕಾರ ರಾಮಚಂದ್ರ ಗುಹಾ ಮಾತನಾಡಿದರು -ಪ್ರಜಾವಾಣಿ ಚಿತ್ರ.
ಬೆಂಗಳೂರಿನಲ್ಲಿ ಸೋಮವಾರ ನಡೆದ 36ನೇ ಲಾ ಏಷಿಯಾ ಸಮ್ಮೇಳನದಲ್ಲಿ ಅಂಕಣಕಾರ ರಾಮಚಂದ್ರ ಗುಹಾ ಮಾತನಾಡಿದರು -ಪ್ರಜಾವಾಣಿ ಚಿತ್ರ.   

ಬೆಂಗಳೂರು: ವಿಶ್ವದಲ್ಲಿ ಯುದ್ಧದ ಕಾರ್ಮೋಡ, ಭಯೋತ್ಪಾದನಾ ಕೃತ್ಯಗಳು ನಡೆದಾಗಲೆಲ್ಲ ಗಾಂಧೀಜಿಯವರ ಅಹಿಂಸಾ ತತ್ವ ಮುನ್ನೆಲೆಗೆ ಬರುತ್ತದೆ. ಹಾಗಾಗಿಯೇ, ಗಾಂಧಿ ಇಂದಿಗೂ ಪ್ರಸ್ತುತವಾಗಿದ್ದಾರೆ ಎಂದು ಅಂಕಣಕಾರ ರಾಮಚಂದ್ರ ಗುಹಾ ಹೇಳಿದರು.

ಬಾರ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ಸೋಮವಾರ ಹಮ್ಮಿಕೊಂಡಿದ್ದ ಲಾಏಷಿಯಾ 36ನೇ ಸಮ್ಮೇಳನದಲ್ಲಿ ‘ಮಹಾತ್ಮ ಗಾಂಧಿ ಇಂದಿಗೂ ಏಕೆ ಪ್ರಸ್ತುತ’ ವಿಷಯ ಕುರಿತ ಚರ್ಚೆಯಲ್ಲಿ ಅವರು ಮಾತನಾಡಿದರು. 

‘ಇಂದು 21ನೇ ಶತಮಾನದ ಬಹುದೊಡ್ಡ ಅಪಾಯವಾಗಿ ಪರಿಣಮಿಸಿರುವ ಭಯೋತ್ಪಾದನೆಯನ್ನು ಹಿಮ್ಮೆಟ್ಟಿಸಲು ನಮಗೆ ಗಾಂಧಿಯ ಹೆಜ್ಜೆಗಳು ನೆನಪಾಗುತ್ತಿವೆ. ಅವರ ಆದರ್ಶ, ತಂತ್ರ,  ಕಾರ್ಯಯೋಜನೆ ಉಪಯೋಗಕ್ಕೆ ಬರುತ್ತಿವೆ’ ಎಂದರು. 

ADVERTISEMENT

‘ವಕೀಲ ವೃತ್ತಿಯಲ್ಲಿ ಅಂದು ಯಶಸ್ಸು ಕಾಣದ್ದರಿಂದಲೇ ಗಾಂಧೀಜಿ ಮಹಾತ್ಮರಾಗಲು ವೇದಿಕೆ ದೊರಕಿತು. ಮಾನವ ಇತಿಹಾಸದಲ್ಲೇ ಅತ್ಯಂತ ವಿಫಲ ವಕೀಲರಾಗಿದ್ದಕ್ಕೆ ಭಾರತೀಯರು ಕೃತಜ್ಞರಾಗಿರಬೇಕು. ವಕೀಲರಾಗಿ ಸಾಧನೆ ಮಾಡಲು ಅನುವು ಮಾಡಿಕೊಡದ ಬಾಂಬೆ ಹೈಕೋರ್ಟ್‌ಗೂ ಧನ್ಯವಾದ ಹೇಳಬೇಕು. ವಕೀಲರಾಗಿ ಅವರು ಸಾಧನೆ ಮಾಡಿದ್ದರೆ ಇವತ್ತು ಗಾಂಧಿ ಕುರಿತು ಜಗತ್ತು ಮಾತನಾಡುತ್ತಲೇ ಇರಲಿಲ್ಲ’ ಎಂದರು.

ಈ ಕಾಲ ಘಟ್ಟದಲ್ಲೂ ಗಾಂಧಿ ಪ್ರಸ್ತುತರಾಗಲು ಅವರ ಅಹಿಂಸಾತ್ಮಕ ಹಾಗೂ ಸಾಮೂಹಿಕ ಹೋರಾಟವೇ ಕಾರಣ. ಬಲ ಪ್ರಯೋಗಿಸದೆ ಅನ್ಯಾಯದ ಅಧಿಕಾರವನ್ನು ವಿರೋಧಿಸುವ ವಿಧಾನವನ್ನು ಇಡೀ ಜಗತ್ತಿಗೆ ಪರಿಚಯಿಸಿದರು. ಅವರ ಈ ಕಾರ್ಯತಂತ್ರವನ್ನು ಸತ್ಯಾಗ್ರಹ, ಸತ್ಯದ ಶಕ್ತಿ ಎಂದು ಕರೆಯಲಾಯಿತು. ಬದಲಾವಣೆಗಾಗಿ ಬಲಪ್ರಯೋಗ ಎನ್ನುವ ಶತಶತಮಾನದ ಪರಿಕಲ್ಪನೆಗೆ ಹೊಸ ಆಯಾಮ ನೀಡಿದರು. ಶಾಂತಿ ಮಾರ್ಗದಿಂದಲೂ ಬದಲಾವಣೆ ಸಾಧ್ಯ ಎನ್ನುವುದನ್ನು ಜಗತ್ತಿಗೆ ತೋರಿಸಿಕೊಟ್ಟರು ಎಂದು ಸ್ಮರಿಸಿದರು.

ಅಸಮಾನತೆ ಪ್ರತಿಪಾದಿಸುವ ಕಾನೂನುಗಳು, ಆಚರಣೆಗಳು ಹಾಗೂ ಪದ್ಧತಿಗಳನ್ನು ಶಾಂತಿಯುತವಾಗಿ ಮತ್ತು ಸಾಮೂಹಿಕವಾಗಿ ಪ್ರಶ್ನಿಸುವ ಮತ್ತು ಪ್ರತಿಭಟಿಸುವ ಒಂದು ವಿನೂತನ ಕ್ರಮ, ತಂತ್ರವನ್ನು  ಜನರ ಮುಂದಿಟ್ಟರು. ‘ಸತ್ಯಾಗ್ರಹ’ ಎನ್ನುವ ವಿಚಾರಕ್ಕೆ ಮೊಟ್ಟ ಮೊದಲ ಬಾರಿ ಚಳವಳಿಯ ಸ್ಪಷ್ಟರೂಪ ನೀಡಿದರು. ಇಂತಹ ಪರಿಕಲ್ಪನೆ ಅವರಿಗೆ ಮೂಡಿದ್ದು ದಕ್ಷಿಣ ಆಫ್ರಿಕಾದಲ್ಲಿ. ಗಾಂಧಿ ಮುಂದಾಳತ್ವದಲ್ಲಿ  ಅಲ್ಲಿನ ಜನಾಂಗೀಯ ವಿರೋಧಿ ಕಾನೂನುಗಳನ್ನು ಅಹಿಂಸಾತ್ಮಕವಾಗಿ, ಸಾಮೂಹಿಕವಾಗಿ ವಿರೋಧಿಸಿದರು ಎಂದು ಇತಿಹಾಸ ಮೆಲುಕುಹಾಕಿದರು.

ದೇಶದ ಒಳಗಿನ ಕುಂದು– ಕೊರತೆ, ದೋಷಗಳನ್ನೂ ಗಾಂಧಿ ಅರಿತಿದ್ದರು. ದೇಶದಲ್ಲಿ ಕೆಲವು  ಸಮಸ್ಯೆಗಳಿವೆ. ಅವುಗಳಿಗೆ ತುರ್ತು ಪರಿಹಾರ ಬೇಕು ಎನ್ನುವ ವಾಸ್ತವದ ಅರಿವು ಅವರಿಗಿತ್ತು. ಮಹಿಳೆಯರು, ಅಸ್ಪೃಶ್ಯರನ್ನು ದೇಶ ನಡೆಸಿಕೊಳ್ಳುತ್ತಿರುವ ಬಗ್ಗೆ ಅಸಮಾಧಾನವಿತ್ತು. ಈ ತಾರತಮ್ಯವನ್ನು ತೊಡೆದು ಹಾಕಲು ಅವರು ತಮ್ಮ ಜೀವಿತಾವಧಿಯಲ್ಲಿ ಸಾಕಷ್ಟು ಪ್ರಯತ್ನಿಸಿದರು. ಸಮಾಜದ ಮುಖ್ಯವಾಹಿನಿಗೆ ತರಲು ರಚನಾತ್ಮಕ ಪ್ರಯತ್ನಗಳನ್ನು ಮಾಡಿದರು ಎಂದರು.

ತಾನೂ ಒಬ್ಬ ಹಿಂದೂವಾಗಿ, ಕೆಲವೊಮ್ಮೆ ಸನಾತನ ಹಿಂದೂ ಆಚರಣೆಗಳನ್ನು ಪಾಲಿಸಿದರೂ ಭಾರತ ಹಿಂದೂ ರಾಷ್ಟ್ರವಲ್ಲ, ಅದೊಂದು ಬಹುಸಂಸ್ಕೃತಿ ಹಾಗೂ ಬಹುಧರ್ಮಗಳ ರಾಷ್ಟ್ರ ಎಂದು ಪ್ರತಿಪಾದಿಸಿದರು. ಹಿಂದೂ–ಮುಸ್ಲಿಮರ ನಡುವೆ ಸಮನ್ವಯತೆ ಸಾಧಿಸಲು ತಮ್ಮ ಇಡೀ ಬದುಕು ಸವೆಸಿದರು ಎಂದು ಹೇಳಿದರು. ಲಾಏಷಿಯಾ ನಿಯೋಜಿತ ಅಧ್ಯಕ್ಷ ಶ್ಯಾಮ್ ದಿವಾನ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.