ADVERTISEMENT

ಪ್ರತಾಪಸಿಂಹ ವಿರುದ್ಧ ಮಾಧ್ಯಮ ಗೋಷ್ಠಿ ನಡೆಸದಂತೆ ಲಕ್ಷ್ಮಣ್‌ಗೆ ಹೈಕೋರ್ಟ್ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 17:03 IST
Last Updated 8 ಮಾರ್ಚ್ 2024, 17:03 IST
ಅಂಗವಿಕಲ ಶಿಕ್ಷಕರ ಮೀಸಲು ಭರ್ತಿ ಹೈಕೋರ್ಟ್ ನೋಟಿಸ್‌
ಅಂಗವಿಕಲ ಶಿಕ್ಷಕರ ಮೀಸಲು ಭರ್ತಿ ಹೈಕೋರ್ಟ್ ನೋಟಿಸ್‌   

ಬೆಂಗಳೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ವಿರುದ್ಧ ಮಾಧ್ಯಮ ಗೋಷ್ಠಿ ನಡೆಸದಂತೆ ಹಾಗೂ ಯಾವುದೇ ಮಾಧ್ಯಮಗಳ ಮೂಲಕ ಮಾನಹಾನಿ ಹೇಳಿಕೆ ಪ್ರಕಟಿಸದಂತೆ ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ಅವರಿಗೆ ಹೈಕೋರ್ಟ್ ನಿರ್ಬಂಧ ವಿಧಿಸಿದೆ.

ಈ ಸಂಬಂಧ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಇದೇ 6ರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಪ್ರತಾಪ್ ಸಿಂಹ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ನಟರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

ವಿಚಾರಣೆ ವೇಳೆ ಪ್ರತಾಪ ಸಿಂಹ ಪರ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್, “ಕಾಂಗ್ರೆಸ್ ಮುಖಂಡರಾದ ಲಕ್ಷ್ಮಣ್ ಅವರು ಮೇಲಿಂದ ಮೇಲೆ ಪ್ರತಾಪ್ ಸಿಂಹ ವಿರುದ್ಧ ದೋಷಪೂರಿತ ಮತ್ತು ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಮಾಧ್ಯಮ ಗೋಷ್ಠಿ ನಡೆಸುವ ಮೂಲಕ ಪುಕಾರು ಎಬ್ಬಿಸುವ ಆರೋಪಗಳನ್ನು ಮಾಡುತ್ತಿದ್ದಾರೆ. ಇವು ಮುದ್ರಣ, ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿವೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಈ ಆರೋಪಗಳು ಪ್ರತಾಪ್ ಸಿಂಹ ಅವರ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುವುದಲ್ಲದೇ ಅವರ ರಾಜಕೀಯ ಬದುಕಿಗೂ ಹಾನಿ ಉಂಟು ಮಾಡುತ್ತವೆ” ಎಂದರು.

ADVERTISEMENT

‘ಲಕ್ಷ್ಮಣ್ ಅವರು ಇದುವರೆಗೂ ಯಾವುದೇ ಸಕ್ಷಮ ಪ್ರಾಧಿಕಾರ ಅಥವಾ ನ್ಯಾಯಾಲಯದಲ್ಲಿ ಪ್ರತಾಪ್ ಸಿಂಹ ವಿರುದ್ಧ ದೂರು ದಾಖಲು ಮಾಡಿಲ್ಲ. ವಾಕ್ ಸ್ವಾತಂತ್ರ್ಯ ಬಳಸಿ ಪ್ರತಾಪ್ ಸಿಂಹ ಅವರ ವರ್ಚಸ್ಸಿಗೆ ಹಾನಿಯುಂಟು ಮಾಡುತ್ತಿದ್ದಾರೆ. ಮಾನಹಾನಿಯ ಮಾಧ್ಯಮ ಗೋಷ್ಠಿ ನಡೆಸಿದ್ದಕ್ಕಾಗಿ ಲಕ್ಷ್ಮಣ್ ವಿರುದ್ಧ ಪ್ರತಾಪ್ ಸಿಂಹ ಅವರು ಈಗಾಗಲೇ ಎರಡು ಖಾಸಗಿ ದೂರುಗಳನ್ನು ದಾಖಲಿಸಿದ್ದು, ಅವುಗಳು ವಿಚಾರಣೆಗೆ ಬಾಕಿ ಇವೆ’ ಎಂದು ವಿವರಿಸಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ಈ ಮೇಲ್ಮನವಿ ಇತ್ಯರ್ಥವಾಗುವತನಕ ಪ್ರತಿವಾದಿ ಲಕ್ಷ್ಮಣ್ ಅವರು ಅರ್ಜಿದಾರ ಪ್ರತಾಪ್ ಸಿಂಹ ಅವರ ವಿರುದ್ಧ ಯಾವುದೇ ರೀತಿಯ ಮಾಧ್ಯಮ ಗೋಷ್ಠಿ, ಪ್ರಸಾರ, ಹಂಚಿಕೆಯನ್ನು ಮುದ್ರಣ, ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮಗಳ ಅಥವಾ ಮತ್ತಾವುದೇ ಮಾಧ್ಯಮದ ಮೂಲಕ ಪ್ರಸಾರ ಇಲ್ಲವೇ ಪ್ರಕಟ ಮಾಡಬಾರದು’ ಎಂದು ನ್ಯಾಯಪೀಠ ನಿರ್ದೇಶಿಸಿದೆ.

ಲಕ್ಷ್ಮಣ್ ಅವರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.