ADVERTISEMENT

ವಿವಾದಾತ್ಮಕ ಹೇಳಿಕೆ ನೀಡದಂತೆ ಮೈತ್ರಿ ನಾಯಕರಿಗೆ ಟ್ವೀಟ್‌ ಮೂಲಕ ಸಿಎಂ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಮೇ 2019, 10:51 IST
Last Updated 18 ಮೇ 2019, 10:51 IST
   

ಬೆಂಗಳೂರು: ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚನೆ ಮಾಡುವ ಮಹತ್ತರ ಘಟ್ಟದಲ್ಲಿರುವಾಗ ರಾಜ್ಯದಲ್ಲಿ ಕಾಂಗ್ರೆಸ್‌–ಜೆಡಿಎಸ್‌ ನಾಯಕರು ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಸಿಎಂ ಹೇಳಿದ್ದಾರೆ.

ಈ ಕುರಿತು ಶನಿವಾರ ಟ್ವೀಟ್‌ ಮಾಡಿರುವ ಅವರು, ‘ಕೇಂದ್ರದಲ್ಲಿ ಇನ್ನೊಂದು ಹೊಸ ಸರ್ಕಾರ ರಚನೆಯಾಗುವ ಮಹತ್ತರ ಘಟ್ಟದಲ್ಲಿ ನಾವಿದ್ದೇವೆ. ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚನೆ ಮಾಡುವ ನಮ್ಮೆಲ್ಲರ ಆಶಯ ಸಾಕಾರಗೊಳಿಸುವ ಪ್ರಯತ್ನಗಳು ನಡೆಯುತ್ತಿರುವ ಸಂದರ್ಭದಲ್ಲಿ ರಾಜ್ಯದ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಪಕ್ಷಗಳ ಮುಖಂಡರು ವ್ಯತಿರಿಕ್ತ ಹೇಳಿಕೆಗಳನ್ನು ನೀಡುವುದು ಇಂತಹ ಪ್ರಯತ್ನಗಳಿಗೆ ಹಿನ್ನಡೆಯಾಗಬಹುದು. ಆದ್ದರಿಂದ ಉಭಯ ಪಕ್ಷಗಳ ಮುಖಂಡರು ಇಂಥಆಶಯಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಯಾವುದೇ ವಿಭಿನ್ನ , ವಿವಾದಾತ್ಮಕ ಹೇಳಿಕೆ ನೀಡದಂತೆ ಕಳಕಳಿಯ ಮನವಿ,’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

‘ಮೈತ್ರಿ ಸರ್ಕಾರ ನಡೆಸುವುದು ಸಾಧ್ಯವಾಗುತ್ತಿಲ್ಲ. ಆದ್ದರಿಂದ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗುವುದೇ ಸೂಕ್ತ,’ ಎಂದು ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಶನಿವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿದರು. ಹೊರಟ್ಟಿ ಹೇಳಿಕೆ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು.

ADVERTISEMENT

‘ಸಿದ್ದರಾಮಯ್ಯ ಅವರೇ ನಮ್ಮ ಮುಖ್ಯಮಂತ್ರಿ,’ ‘ಭವಿಷ್ಯದಲ್ಲಿ ಸಿದ್ದರಾಮಯ್ಯನವರೇಮುಖ್ಯಮಂತ್ರಿ,’ ಎಂದು ಕಾಂಗ್ರೆಸ್‌ನ ನಾಯಕರು ಆಗಾಗ ಹೇಳಿಕೆಗಳನ್ನು ನೀಡುತ್ತಿದ್ದರು. ಈ ನಡುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ‘ಖರ್ಗೆ ಅವರೂ ಮುಖ್ಯಮಂತ್ರಿಯಾಗಬೇಕಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ,’ ಎಂದಿದ್ದರು. ಮರುದಿನವೇ ಟ್ವೀಟ್‌ ಮಾಡಿದ್ದ ಸಿದ್ದರಾಮಯ್ಯ ಅವರು, ‘ಜೆಡಿಎಸ್‌ನಲ್ಲಿ ಎಚ್‌.ಡಿ ರೇವಣ್ಣ ಅವರೂ ಮುಖ್ಯಮಂತ್ರಿಯಾಗಬಹುದು. ಆದರೆ, ಕಾಲ ಕೂಡಿ ಬರಬೇಕು,’ ಎನ್ನುವ ಮೂಲಕ ತಿರುಗೇಟು ನೀಡಿದ್ದರು.

ಇದೆಲ್ಲ ಬೆಳವಣಿಗೆಗಳುಮೈತ್ರಿ ಸರ್ಕಾರದಲ್ಲಿ ಭಿನ್ನಮತ ಸೃಷ್ಟಿ ಮಾಡುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಸಿಎಂ ಎಚ್ಡಿಕೆ ಇಂದು ಈ ರೀತಿಯ ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.