ಬೆಂಗಳೂರು: ಶಾಲೆ ಕಾಲೇಜುಗಳಲ್ಲಿ ಹಿಜಾಬ್‌ಗೆ ನಿರ್ಬಂಧ ವಿಧಿಸಿದ್ದನ್ನು ಪ್ರಶ್ನಿಸಿ ಉಡುಪಿಯ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಗಳನ್ನು ರಾಜ್ಯ ಹೈಕೋರ್ಟ್ ವಜಾ ಮಾಡಿದೆ. ಅಲ್ಲದೆ, ಹಿಜಾಬ್ ಧರಿಸುವುದು ಇಸ್ಲಾಂನ ಅತ್ಯಗತ್ಯ ಆಚರಣೆಯಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ರಾಜ್ಯ ಸರ್ಕಾರದ ನಿರ್ಬಂಧವನ್ನು ಎತ್ತಿಹಿಡಿದಿದೆ.
ಹಿಜಾಬ್ ನಿರ್ಬಂಧ ಪ್ರಶ್ನಿಸಿ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್ ಇಂದು ತೀರ್ಪು ಪ್ರಕಟಿಸಿತು.
ತೀರ್ಪಿನ ಬಗ್ಗೆ ಯಾರು ಏನುಹೇಳಿದರು?
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ
ಶಾಲೆ-ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ ವಿಚಾರವಾಗಿ ಕರ್ನಾಟಕ ಹೈ ಕೋರ್ಟ್‌ನ ಐತಿಹಾಸಿಕ ತೀರ್ಪನ್ನು ಸ್ವಾಗತಿಸುತ್ತೇನೆ. ಈ ನೆಲ, ನೆಲದ ಕಾನೂನು ಅಂತಿಮ.
– ಬಿ.ಸಿ ನಾಗೇಶ್, ಶಿಕ್ಷಣ ಸಚಿವ
***
ರಾಜ್ಯ ಸರ್ಕಾರದ ಸಮವಸ್ತ್ರ ಆದೇಶವನ್ನು ಎತ್ತಿ ಹಿಡಿದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರದ ಪಾವಿತ್ರ್ಯತೆಯನ್ನು ಎತ್ತಿ ಹಿಡಿಯುವ ಈ ತೀರ್ಪನ್ನು ನಾನು ಸ್ವಾಗತಿಸುತ್ತೇನೆ.
ಡಾ. ಸುಧಾಕರ್, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ
***
ಹೈಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹವಾಗಿದೆ. ಯಾವುದೇ ಧರ್ಮದ ಮಕ್ಕಳಾದರೂ ಶಿಕ್ಷಣಕ್ಕೆ ಆದ್ಯ ಗಮನ ಕೊಟ್ಟು, ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುವುದರ ಕಡೆಗೆ ಗಮನ ಕೊಡಬೇಕು. ಯಾವುದೇ ಧಾರ್ಮಿಕ ವಸ್ತ್ರಗಳತ್ತ ಅನಗತ್ಯ ಆದ್ಯತೆ ನೀಡುವ ಮೂಲಕ ಬದುಕಿನ ಸದವಕಾಶಗಳನ್ನು ವ್ಯರ್ಥ ಮಾಡಿಕೊಳ್ಳಬಾರದು. ಈ ಮೂಲಕ ಎಲ್ಲರೂ ಸೌಹಾರ್ದದಿಂದ ಮತ್ತು ಪರಸ್ಪರ ಗೌರವದಿಂದ ಬದುಕಬೇಕು.
– ಅಶ್ವತ್ಥನಾರಾಯಣ,ಉನ್ನತ ಶಿಕ್ಷಣ ಸಚಿವ
***
ಜಾಬ್ ವಿವಾದ ವಿಚಾರದಲ್ಲಿ ರಾಜ್ಯದ ಉಚ್ಚ ನ್ಯಾಯಾಲಯ ತೀರ್ಪು ನೀಡಿದ್ದು ಸರ್ಕಾರದ ನಿಲುವನ್ನು ಸಮರ್ಥಿಸಿ ಸಮವಸ್ತ್ರ ಕಡ್ಡಾಯ ಆದೇಶವನ್ನು ಎತ್ತಿಹಿಡಿದಿದೆ. ನ್ಯಾಯಾಲಯದ ತೀರ್ಪನ್ನು ನಾವು ಸ್ವಾಗತಿಸುತ್ತೇವೆ.ಎಲ್ಲರೂ ಶಾಂತಿ ಕಾಪಾಡುವಂತೆ ಮನವಿ ಮಾಡುತ್ತೇವೆ.
– ಕೋಟ ಶ್ರೀನಿವಾಸ ಪೂಜಾರಿ, ಸಚಿವ
***
ದೇಶಾದ್ಯಂತ ಕಳವಳ ಹೆಚ್ಚಿಸಿದ್ದ ಹಿಜಾಬ್ ವಿವಾದಕ್ಕೆ ರಾಜ್ಯ ಹೈಕೋರ್ಟ್ ಇತಿಶ್ರೀ ಹಾಡಿದೆ. ಎಲ್ಲ ವಿದ್ಯಾರ್ಥಿಗಳು ಕಡ್ಡಾಯವಾಗಿ ಸಮವಸ್ತ್ರ ಸಂಹಿತೆಯನ್ನು ಪಾಲಿಸಬೇಕೆಂದು ಆದೇಶಿಸುವ ಮೂಲಕ ವಿದ್ಯೆ ಕಲಿಯುವ ಸ್ಥಳದಲ್ಲಿ ಧರ್ಮ ರಾಜಕೀಯಕ್ಕೆ ಅವಕಾಶ ಇಲ್ಲ ಎಂಬುದನ್ನು ಸಾರಿದೆ. ಎಲ್ಲರೂ ನ್ಯಾಯಾಲಯದ ತೀರ್ಪನ್ನು ಪಾಲಿಸೋಣ, ಸಾಮರಸ್ಯ ಕಾಪಾಡೋಣ.
– ಶಿವರಾಮ ಹೆಬ್ಬಾರ್, ಕಾರ್ಮಿಕಸಚಿವ
***
‘ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಮತ್ತು ಶಾಲಾ ಸಮವಸ್ತ್ರ ಪಾಲಿಸಬೇಕು ಎಂಬುದು ಸಮಂಜಸವಾದದ್ದು‘ ಎಂದು ಘೋಷಿಸಿರುವ ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಓಲೈಕೆಯ ವಿರುದ್ಧ ಸಮಾನತೆ ಜಯ ಸಾಧಿಸುತ್ತದೆ ಎಂಬ ನಮ್ಮ ಪಕ್ಷದ ನಿಲುವನ್ನು ಈ ತೀರ್ಪು ಸಮರ್ಥಿಸುತ್ತಿದೆ.
– ಸಿಟಿ ರವಿ, ಬಿಜೆಪಿ ರಾಷ್ಟ್ರಘಟಕದ ಪ್ರಧಾನ ಕಾರ್ಯದರ್ಶಿ
***
ಹೆಣ್ಣು ಮಕ್ಕಳ ಶಿಕ್ಷಣದ ಅವಕಾಶಗಳನ್ನು ಮುಖ್ಯವಾಹಿನಿಗೆ ತರುವ ಮತ್ತು ಸದೃಢಗೊಳಿಸುವ ನಿಟ್ಟಿನಲ್ಲಿ ಹೈಕೋರ್ಟ್‌ನ ತೀರ್ಪು ಒಂದು ಪ್ರಮುಖ ನಡೆಯಾಗಿದೆ.
– ತೇಜಸ್ವಿ ಸೂರ್ಯ, ಬಿಜೆಪಿ ಸಂಸದ
***
ಹಿಜಾಬ್ ಇಸ್ಲಾಮಿನ ಅತ್ಯಗತ್ಯ ಭಾಗವಲ್ಲ. ಶಾಲಾ-ಕಾಲೇಜುಗಳಲ್ಲಿ ಹಿಜಬ್‌ಗೆ ಅವಕಾಶವಿಲ್ಲ ಎಂದು ಹೈಕೋರ್ಟ್ ಹೇಳಿದೆ. ನ್ಯಾಯ ವಿಳಂಬವಾದರೂ, ಸಿಕ್ಕೇ ಸಿಗುತ್ತದೆ.
– ಎಂ.ಪಿ ರೇಣುಕಾಚಾರ್ಯ, ಶಾಸಕ
***
ಹಿಜಾಬ್ ಹೆಸರಿನಲ್ಲಿ ಧರ್ಮದ ಗೊಂದಲ ಮೂಡಿಸಿ ಶಿಕ್ಷಣ ವ್ಯವಸ್ಥೆಯನ್ನು ಕಲುಷಿತಗೊಳಿಸುವ ಕೋಮುವಾದಿ ಪ್ರಯತ್ನಯಕ್ಕೆ ಘನ ಉಚ್ಚ ನ್ಯಾಯಾಲಯ ಚಾಟಿ ಬೀಸಿ ಸರ್ಕಾರದ ನೀತಿಯನ್ನು ಎತ್ತಿ ಹಿಡಿದಿದೆ. ಈ ನೆಲದ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಭಾರತವೊಂದೇ ಸರ್ವ ಶ್ರೇಷ್ಠ ಎಂಬ ಸಂದೇಶ ರವಾನೆಯಾಗಿದೆ.
– ಬಿ.ವೈ ವಿಜಯೇಂದ್ರ, ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.