ADVERTISEMENT

ಬಿಜೆಪಿಗರ ಅಧಿಕಾರ ದಾಹದಿಂದ ನೀಗಲಿಲ್ಲ ಜನರ ಸಂಕಷ್ಟ: ಕಾಂಗ್ರೆಸ್ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಜುಲೈ 2021, 9:41 IST
Last Updated 25 ಜುಲೈ 2021, 9:41 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ರಾಜ್ಯ ಬಿಜೆಪಿ ನಾಯಕರು ತಮ್ಮ ಅಧಿಕಾರ ದಾಹದಿಂದಾಗಿ ಜನರ ಸಂಕಷ್ಟ ನೀಗಿಸಲು ವಿಫಲರಾಗಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.

ನಾಳೆಗೆ (ಸೋಮವಾರ) ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷವಾಗುತ್ತದೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರವನ್ನು ಟೀಕಿಸಿ ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

‘ನೆರೆ ಸಂತ್ರಸ್ತರ ಬದುಕು ದುರ್ಬರವಾಗಿದೆ. ಉದ್ಯೋಗ ನಷ್ಟ, ಆದಾಯ ನಷ್ಟ, ರೈತರಿಗೆ ಸಿಗದ ಬೆಲೆ, ದುಬಾರಿ ಗೊಬ್ಬರದ ಬರೆ, ಬೀದಿ ಹೆಣವಾದ ಕೋವಿಡ್ ರೋಗಿಗಳು, ಆಕ್ಸಿಜನ್ ಇಲ್ಲದೆ ಸತ್ತ ಸೋಂಕಿತರು ಇವುಗಳ ನಡುವೆ ಬೆಲೆ ಏರಿಕೆ ಕಾರಣಗಳಿಂದಾಗಿ ಜನರ ಹರ್ಷ ಕಮರಿದೆ. ಇದೆಲ್ಲದಕ್ಕೂ ಬಿಜೆಪಿಯೇ ಕಾರಣ’ ಎಂದು ಕಾಂಗ್ರೆಸ್ ಕುಟುಕಿದೆ.

ADVERTISEMENT

‘ಈ 2 ವರ್ಷದಲ್ಲಿ ಕೊರೊನಾ ಮುಕ್ತ ಕರ್ನಾಟಕ, ನಿರುದ್ಯೋಗ ಮುಕ್ತ ಕರ್ನಾಟಕ, ಭ್ರಷ್ಟಾಚಾರ ಮುಕ್ತ ಕರ್ನಾಟಕ, ಹಸಿವು ಮುಕ್ತ ಕರ್ನಾಟಕ ಮಾಡುವುದು ಬಿಜೆಪಿ ಪಕ್ಷದ ಆದ್ಯತೆ ಆಗಬೇಕಿತ್ತು, ಆದರೆ ಅವರ ಆದ್ಯತೆ ಬಿಎಸ್‌ವೈ ಮುಕ್ತ ಬಿಜೆಪಿ ಮಾಡುವುದಷ್ಟೇ ಆಗಿತ್ತು’ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಸಂಜೆಯೊಳಗೆ ಹೈಕಮಾಂಡ್‌ನಿಂದ ಸಂದೇಶ ಬರಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ಆದರೆ, ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಹೈಕಮಾಂಡ್‌ನಿಂದ ಯಾವುದೇ ಸೂಚನೆಯಾಗಲಿ ಹಾಗೂ ಮಾಹಿತಿಯಾಗಲಿ ಬಂದಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.