ADVERTISEMENT

ಕಾಲೇಜು ಶಿಕ್ಷಣ ಇಲಾಖೆ: ಶೇ 15ರಷ್ಟು ಬೋಧಕ ಸಿಬ್ಬಂದಿ ವರ್ಗಾವಣೆ ಅವಕಾಶ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 12:13 IST
Last Updated 5 ಏಪ್ರಿಲ್ 2022, 12:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕಾಲೇಜು ಶಿಕ್ಷಣ ಇಲಾಖೆಯ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವರ ಬೋಧಕ ಸಿಬ್ಬಂದಿ (ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಗ್ರಂಥಪಾಲಕರು ಮತ್ತು ಕ್ರೀಡಾ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರು) ಪೈಕಿ, 2022ನೇ ಸಾಲಿನಲ್ಲಿ ಒಟ್ಟು ಶೇ 15ರಷ್ಟು ಮಂದಿಯ ವರ್ಗಾವಣೆಗೆ ಅವಕಾಶ ಕಲ್ಪಿಸಿ ಅಧಿಸೂಚನೆ ಹೊರಡಿಸಲಾಗಿದೆ. ಇದರಿಂದಾಗಿ ಸುಮಾರು 900 ಮಂದಿಗೆ ವರ್ಗಾವಣೆ ಅವಕಾಶ ಸಿಗಲಿದೆ.

ವರ್ಗಾವಣೆ ನಿಯಮಗಳ ಅನ್ವಯ, ಮಂಜೂರಾದ ಬೋಧಕ ಹುದ್ದೆಗಳಲ್ಲಿ ಶೇ 9ರಷ್ಟು ಸಾರ್ವಜನಿಕ ಹಿತಾಸಕ್ತಿ ಉದ್ದೇಶದಿಂದ ಹಾಗೂ ವಿಶೇಷ ಪ್ರಕರಣಗಳಲ್ಲಿ ಕೋರಿಕೆಯಲ್ಲಿ ಶೇ 6ರಷ್ಟು ವರ್ಗಾವಣೆಗೆ ಅವಕಾಶ ಆಗಲಿದೆ. ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ನಡೆಯಲಿದೆ.

ವಿಶೇಷ ಪ್ರಕರಣದಡಿ ವರ್ಗಾವಣೆಗೆ ಕೋರಿಕೆ ಸಲ್ಲಿಸುವ ಬೋಧಕರು ಇಲಾಖೆಯ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ ಅರ್ಜಿಯ ಜೊತೆಗೆ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ವರ್ಗಾವಣೆಯಿಂದ ವಿನಾಯಿತಿ ಬಯಸುವವರು ಕೂಡಾ ಅಗತ್ಯ ದಾಖಲೆಗಳ ಜೊತೆಗೆ ಆನ್‌ಲೈನ್‌ನಲ್ಲಿ ಮನವಿ ಸಲ್ಲಿಸಬೇಕು.

ADVERTISEMENT

‘ವರ್ಗಾವಣೆಗೆ ಅರ್ಜಿ ಸಲ್ಲಿಸಲು ಏಪ್ರಿಲ್‌ 8 ಕೊನೆಯ ದಿನ. 13ರಂದು ತಾತ್ಕಾಲಿಕ ವರ್ಗಾವಣೆ ಆದ್ಯತಾ ಪಟ್ಟಿ ಪ್ರಕಟವಾಗಲಿದೆ. ಈ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು 18 ಕೊನೆಯ ದಿನ. ಕೌನ್ಸೆಲಿಂಗ್‌ ಮೂಲಕ ಭರ್ತಿ ಮಾಡಲಾಗುವ ಖಾಲಿ ಹುದ್ದೆಗಳ ಪಟ್ಟಿ 21ರಂದು ಪ್ರಕಟವಾಗಲಿದೆ. ವಿಶೇಷ ಪ್ರಕರಣಗಳಡಿ ಅರ್ಜಿ ಸಲ್ಲಿಸಿದವರ ವರ್ಗಾವಣೆಗೆ ಮೊದಲ ಸುತ್ತಿನ ಕೌನ್ಸೆಲಿಂಗ್‌ 23ರಂದು, ಎರಡನೇ ಸುತ್ತಿನ ಕೌನ್ಸೆಲಿಂಗ್‌ 26ರಂದು ನಡೆಯಲಿದೆ. ಸಾರ್ವಜನಿಕ ಹಿತಾಸಕ್ತಿಯ ವರ್ಗಾವಣೆಯ ಕೌನ್ಸೆಲಿಂಗ್‌ ಏಪ್ರಿಲ್‌ 27ರಂದು ನಡೆಯಲಿದೆ’ ಎಂದು ಇಲಾಖೆಯ ಮುಖ್ಯ ಆಡಳಿತಾಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.