ಬೆಂಗಳೂರು: ‘ಅಶ್ಲೀಲ ವಿಡಿಯೊ, ಫೋಟೊ ಹಾಗೂ ಧ್ವನಿ ಮುದ್ರಣವನ್ನು ಇಟ್ಟುಕೊಳ್ಳುವುದು ಸಹ ಅಪರಾಧ. ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್ ಹಾಗೂ ಇತರೆ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದು ಪತ್ತೆಯಾದರೆ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಸ್‌ಐಟಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ವಿರುದ್ಧ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಪಟ್ಟ ಅಶ್ಲೀಲ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇದರಿಂದ ಸಂತ್ರಸ್ತೆಯರ ಗೌರವಕ್ಕೆ ಧಕ್ಕೆ ಉಂಟಾಗಿತ್ತು. ಇದೇ ಕಾರಣಕ್ಕೆ, ವಿಡಿಯೊ ಹಂಚಿಕೊಳ್ಳದಂತೆ ಎಸ್‌ಐಟಿ ಭಾನುವಾರ ಎಚ್ಚರಿಕೆ ನೀಡಿತ್ತು.
ಸೋಮವಾರವೂ ಮತ್ತೊಂದು ಪತ್ರಿಕಾ ಪ್ರಕಟಣೆ ನೀಡಿರುವ ಎಸ್‌ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್, ‘ಅಶ್ಲೀಲ ವಿಡಿಯೊ, ಫೋಟೊ ಹಾಗೂ ಧ್ವನಿವರ್ಧಕ ಹಂಚಿಕೊಳ್ಳುವುದಷ್ಟೇ ಅಲ್ಲದೇ ಇಟ್ಟುಕೊಳ್ಳುವುದು ಸಹ ಅಪರಾಧ. ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಕ್ರಮ ಜರುಗಿಸಲು ಅವಕಾಶವಿದೆ’ ಎಂದಿದ್ದಾರೆ.
‘ಅಶ್ಲೀಲ ವಿಡಿಯೊ ಹಾಗೂ ಫೋಟೊಗಳನ್ನು ಇಟ್ಟುಕೊಳ್ಳುವವರನ್ನು ಪತ್ತೆ ಮಾಡುವುದು ಸುಲಭ. ಯಾರಾದರೂ ಅಂಥ ವಿಡಿಯೊ ಹಾಗೂ ಫೋಟೊ ಇಟ್ಟುಕೊಂಡಿದ್ದರೆ ‘ಅಳಿಸಿ (ಡಿಲೀಟ್)’ ಹಾಕುವುದರಿಂದ ಕಾನೂನು ಕ್ರಮಗಳಿಂದ ಪಾರಾಗುವ ಸಾಧ್ಯತೆ ಇರುತ್ತದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.