ADVERTISEMENT

ಕಚೇರಿಗೆ ಹಾಜರಾಗದೇ ವೇತನ ಪಡೆದ ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿ!

ಆರೋಪಿ ಅಧಿಕಾರಿ ವಿರುದ್ಧ ಕ್ರಮಕ್ಕೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಹಿಂದೇಟು

ಸುಬ್ರಹ್ಮಣ್ಯ ವಿ.ಎಸ್‌.
Published 10 ಡಿಸೆಂಬರ್ 2023, 20:06 IST
Last Updated 10 ಡಿಸೆಂಬರ್ 2023, 20:06 IST
<div class="paragraphs"><p>ಹಣ ಸಂಗ್ರಹ ಚಿತ್ರ</p></div>

ಹಣ ಸಂಗ್ರಹ ಚಿತ್ರ

   

ಬೆಂಗಳೂರು: ಕಚೇರಿಗೆ ಹಾಜರಾಗದಿದ್ದರೂ ಅಕ್ರಮವಾಗಿ 55 ದಿನಗಳ ವೇತನ ಪಡೆದಿರುವ ಆರೋಪದಡಿ ಕಾನೂನು ಮಾಪನಶಾಸ್ತ್ರ ಇಲಾಖೆಯ ಉಪ ನಿಯಂತ್ರಕ ಸಿ. ಗೋವಿಂದಪ್ಪ ವಿರುದ್ಧ ಮುಂದಿನ ಕ್ರಮಕ್ಕಾಗಿ ಸಲ್ಲಿಸಿರುವ ತನಿಖಾ ವರದಿ ಹತ್ತು ತಿಂಗಳಿಂದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕಾರ್ಯದರ್ಶಿ ಕಚೇರಿಯಲ್ಲೇ ಉಳಿದಿದೆ.  

ಕಾನೂನು ಮಾಪನಶಾಸ್ತ್ರ ಇಲಾಖೆಯ ನಿಯಂತ್ರಕರ ಕಚೇರಿಯಲ್ಲಿ ಆಡಳಿತ ವಿಭಾಗದ ಉಪ ನಿಯಂತ್ರಕರ ಹುದ್ದೆಯಲ್ಲಿದ್ದ ಗೋವಿಂದಪ್ಪ 2021ರ ಏಪ್ರಿಲ್‌ 21ರಿಂದ ಜೂನ್‌ 14ರವರೆಗೂ ಕಚೇರಿಗೆ ಹಾಜರಾಗಿರಲಿಲ್ಲ. ನಂತರದ ದಿನಗಳಲ್ಲಿ ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಿ ವೇತನ ಪಡೆದಿರುವುದು ಪ್ರಾಥಮಿಕ ವಿಚಾರಣೆಯಲ್ಲಿ ದೃಢಪಟ್ಟಿದೆ. ಇಲಾಖೆಯ ನಿಯಂತ್ರಕರು ಮುಂದಿನ ಕ್ರಮಕ್ಕಾಗಿ 2023ರ ಜನವರಿ 1 ರಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕಾರ್ಯದರ್ಶಿಗೆ ಕಡತ ಸಲ್ಲಿಸಿದ್ದು, ಈವರೆಗೆ ಯಾವ ನಿರ್ಧಾರವನ್ನೂ ಕೈಗೊಂಡಿಲ್ಲ.

ADVERTISEMENT

55 ದಿನ ಗೈರು ಹಾಜರಾಗಿದ್ದ ಅಧಿಕಾರಿ, 2021ರ ಏಪ್ರಿಲ್‌ 21ರಿಂದ 24ರವರೆಗಿನ ಅವಧಿಗೆ ಮೂರು ದಿನಗಳ ಆಕಸ್ಮಿಕ ರಜೆ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿದ್ದರು. ಇಲಾಖೆಯ ಆಗಿನ ನಿಯಂತ್ರಕರು ಪರಿಶೀಲಿಸಿದಾಗ ಗೋವಿಂದಪ್ಪ 55 ದಿನಗಳು ಕೆಲಸಕ್ಕೆ ಹಾಜರಾಗಿಲ್ಲ ಎಂಬುದು ಗಮನಕ್ಕೆ ಬಂದಿತ್ತು. ಗೈರಾದ ಪೂರ್ಣ ಅವಧಿಗೂ ಪರಿವರ್ತಿತ ರಜೆ ಮಂಜೂರು ಮಾಡುವಂತೆ ನಿಯಂತ್ರಕರು ಕಡತದಲ್ಲಿ ಸೂಚಿಸಿದ್ದರು.

ಸ್ವತಃ ಆಡಳಿತ ವಿಭಾಗದ ಉಪ ನಿಯಂತ್ರಕರ ಹುದ್ದೆಯಲ್ಲಿದ್ದ ಗೋವಿಂದಪ್ಪ ಅವರು ನಿಯಂತ್ರಕರ ಸೂಚನೆಯನ್ನು ಒಪ್ಪಿಕೊಂಡು 55 ದಿನ ರಜೆ ಮಂಜೂರಾತಿಗೆ ಕಡತವನ್ನು ವರ್ಗಾಯಿಸಿದ್ದರು. ಮಧ್ಯದಲ್ಲೇ ನಿಯಂತ್ರಕರ ಹುದ್ದೆಯಲ್ಲಿದ್ದ ಕೆಎಎಸ್ ಅಧಿಕಾರಿ ವಿ. ಪಾತರಾಜು ಅವರ ವರ್ಗಾವಣೆ ಆಗಿತ್ತು. ಆ ಹುದ್ದೆಗೆ ಕೆಎಎಸ್‌ ಅಧಿಕಾರಿ ರೂಪಾ ಅವರನ್ನು ನೇಮಿಸಲಾಗಿತ್ತು. ನಿಯಂತ್ರಕರ ಹುದ್ದೆಗೆ ಹೊಸ ಅಧಿಕಾರಿ ಬರುತ್ತಿದ್ದಂತೆಯೇ ರಜೆ ಮಂಜೂರಾತಿಯ ಕಡತವನ್ನು ಅರ್ಧಕ್ಕೆ ಮೊಟಕುಗೊಳಿಸಿ, ಹಾಜರಾತಿ ಕಡತದಲ್ಲಿ 55 ದಿನಗಳಿಗೂ ಸಹಿ ಮಾಡಿ ವೇತನ ಪಡೆದಿದ್ದಾರೆ ಎಂಬ ಆರೋಪವಿದೆ.

ಗೈರಿಗೆ ಸಾಕ್ಷ್ಯ

ಗೋವಿಂದಪ್ಪ ಕರ್ತವ್ಯಕ್ಕೆ ಹಾಜರಾಗದೆಯೂ ಅಕ್ರಮವಾಗಿ ವೇತನ ಪಡೆದಿರುವ ಕುರಿತು ಇಲಾಖೆಯ ನಿಯಂತ್ರಕರಿಗೆ ಟಿ. ಚೇತನ್‌ ಎಂಬುವವರು ದೂರು ಸಲ್ಲಿಸಿದ್ದರು. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಹೆಚ್ಚುವರಿ ನಿರ್ದೇಶಕಿ–2 ಹುದ್ದೆಯಲ್ಲಿದ್ದ ಸುಜಾತಾ ಹೊಸಮನಿ ಅವರನ್ನು ದೂರಿನ ಕುರಿತು ತನಿಖೆಗಾಗಿ ನೇಮಿಸಲಾಗಿತ್ತು. ಸಮಗ್ರ ದಾಖಲೆಗಳನ್ನು ಪರಿಶೀಲಿಸಿ, ಉಪ ನಿಯಂತ್ರಕರ ಕಚೇರಿಯ ಅಧಿಕಾರಿಗಳ ಹೇಳಿಕೆಯನ್ನು ದಾಖಲಿಸಿ, ಕಾನೂನು ಮಾಪನಶಾಸ್ತ್ರ ಇಲಾಖೆ ನಿಯಂತ್ರಕರ ಕಚೇರಿಗೆ ವರದಿ ಸಲ್ಲಿಸಿದ್ದರು.

‘2021ರ ಏಪ್ರಿಲ್‌ 21ರಿಂದ ಜೂನ್‌ 14ರ ಅವಧಿಯಲ್ಲಿ ಗೋವಿಂದಪ್ಪ ಅವರು ನಿಯಂತ್ರಕರ ಕಚೇರಿಯಲ್ಲಿ ಕಾರ್ಯನಿರ್ವಹಿಸಿರುವುದಿಲ್ಲ. ಯಾವುದೇ ಕಡತಗಳನ್ನು ನಿರ್ವಹಿಸಿಲ್ಲ ಮತ್ತು ಯಾವುದೇ ಸಭೆಗಳಿಗೆ ಹಾಜರಾಗಿರುವುದಿಲ್ಲ’ ಎಂಬ ಉಲ್ಲೇಖ ವರದಿಯಲ್ಲಿದೆ. ಗೋವಿಂದಪ್ಪ ಅವರು ಹಾಜರಾತಿಗೆ ಸಹಿ ಮಾಡದೇ ಖಾಲಿ ಉಳಿಸಿದ್ದ ಮತ್ತು ನಂತರದಲ್ಲಿ ಸಹಿ ಮಾಡಿದ ದೃಢೀಕೃತ ನಕಲು ಪ್ರತಿಗಳನ್ನೂ ದೂರುದಾರರು ಸಲ್ಲಿಸಿದ್ದು, ವರದಿಯೊಂದಿಗೆ ಲಗತ್ತಿಸಲಾಗಿದೆ. ತನಿಖಾ ವರದಿಯ ಪ್ರತಿ ಮತ್ತು ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.