ಬೆಂಗಳೂರು: ‘ಶಾಸಕಾಂಗ ದಿನೇ ದಿನೇ ದುರ್ಬಲವಾಗಲು ದರಿದ್ರ ರಾಜಕಾರಣಿಗಳೇ ಕಾರಣ. ಚರ್ಚೆ ನಡೆಸದೆಯೇ ಐದು ನಿಮಿಷಗಳಲ್ಲಿ ಮಸೂದೆಗಳಿಗೆ ಅನುಮೋದನೆ ನೀಡುವ ಪರಿಸ್ಥಿತಿಗೆ ಶಾಸಕಾಂಗ ತಲುಪಿದೆ’ ಎಂದು ಮಾಜಿ ಶಾಸಕ ವೈ.ಎಸ್.ವಿ. ದತ್ತ ಬೇಸರ ವ್ಯಕ್ತಪಡಿಸಿದರು.
‘ವೈವಿಧ್ಯತೆಯಲ್ಲಿ ಏಕತೆ ಬೆಳೆಸುವುದು: ಸವಾಲುಗಳು ಮತ್ತು ಅವಕಾಶಗಳು’ ಕುರಿತು ಏಕಂ ಸಾಥ್ ಟ್ರಸ್ಟ್ ಶನಿವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ನ್ಯಾಯಾಂಗ ಕ್ರಿಯಾಶೀಲವಾಗಿದೆ ಎಂದರೆ ಶಾಸಕಾಂಗ ಸತ್ತಿದೆ ಎಂದೇ ಅರ್ಥೈಸಿಕೊಳ್ಳಬೇಕು. ಶಾಸಕಾಂಗದ ಪರಮಾಧಿಕಾರವನ್ನು ಕಡೆಗಣಿಸಿದ್ದರಿಂದ ನ್ಯಾಯಾಂಗ ಪ್ರಬಲವಾಗುತ್ತಿದೆ. ಪ್ರತಿಯೊಂದು ವಿಷಯದಲ್ಲೂ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗುವ ಪರಿಸ್ಥಿತಿ ಸೃಷ್ಟಿಸಲಾಗಿದೆ’ ಎಂದು ವಿಶ್ಲೇಷಿಸಿದರು.
‘ದೇಶವು ಸರ್ವಾಧಿಕಾರದತ್ತ ಸಾಗುತ್ತಿದ್ದು, ಇದಕ್ಕೆ ಪೂರಕವಾದ ರಾಜಕೀಯ ವ್ಯವಸ್ಥೆ ಹಾಗೂ ಕಲುಷಿತವಾದ ಮತ್ತು ವಿಷಮ ವಾತಾವರಣ ಸೃಷ್ಟಿಸಲಾಗಿದೆ. ಭ್ರಮಾತ್ಮಕ ಮತ್ತು ಭಾವನಾತ್ಮಕ ಸ್ಥಿತಿಯಲ್ಲಿ ಬದುಕುತ್ತಿರುವ ಜನರನ್ನು ವಾಸ್ತವಕ್ಕೆ ಕರೆತರುವ ಮೂಲಕ ಸೌಹಾರ್ದಯುತ ವಾತಾವರಣ ಸೃಷ್ಟಿಸಬೇಕಾಗಿದೆ’ ಎಂದು ಸಲಹೆ ನೀಡಿದರು.
ವೈದ್ಯ ಡಾ. ಮೊಹಮ್ಮದ್ ತಹಾ ಮಾಥೀನ್ ಮಾತನಾಡಿ, ‘ಹಿಜಾಬ್ ಅನ್ನು ಯಾರು ಧರಿಸುತ್ತಾರೆ ಅಥವಾ ಇಲ್ಲವೋ ಎನ್ನುವುದು ಮುಖ್ಯವಾಗಬಾರದು. ಇಂತಹ ವಿವಾದಗಳ ಉದ್ದೇಶವು ಭ್ರಷ್ಟಾಚಾರ ಮತ್ತು ಹತ್ತಾರು ಸಮಸ್ಯೆಗಳಿಂದ ನಾಗರಿಕರ ಗಮನವನ್ನು ಬೇರೆಡೆ ಸೆಳೆಯುವುದೇ ಆಗಿದೆ’ ಎಂದು ಹೇಳಿದರು.
‘ಬಹುತೇಕ ಶಾಸಕರು ತಮ್ಮ ಆಸ್ತಿಯನ್ನು ದುಪ್ಪಟ್ಟು ಮಾಡಿಕೊಳ್ಳಲು ಹೆಚ್ಚು ಆಸಕ್ತಿ ವಹಿಸಿದ್ದಾರೆ. ಕೆಲವರು ಪ್ರಾಮಾಣಿಕ ಶಾಸಕರಿದ್ದಾರೆ. ವೈವಿಧ್ಯತೆಯ ಸಂಸ್ಕೃತಿ ಹೊಂದಿರುವ ದೇಶದಲ್ಲಿ ಸಹಬಾಳ್ವೆ ಮತ್ತು ಸೌಹಾರ್ದ ಮುಖ್ಯವಾಗಬೇಕು. ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಎಲ್ಲರಿಗೂ ಸುಲಭವಾಗಿ ದೊರೆಯಬೇಕು’ ಎಂದರು.
**
ಸ್ವಾತಂತ್ರ್ಯ, ಸಮಾನತೆಯೇ ಪ್ರಜಾಪ್ರಭುತ್ವದ ತಳಹದಿ. ಸಮಾಜದಲ್ಲಿ ಭ್ರಾತೃತ್ವದ ಮೂಲಕ ಸಮಾನತೆ ಸಾಧಿಸಬೇಕು. ಆದರೆ, ಭ್ರಾತೃತ್ವವನ್ನು ಮರೆಯುತ್ತಿದ್ದೇವೆ.
-ಡಾ. ಎ. ರವೀಂದ್ರ, ಏಕಂ ಸಾಥ್ ಟ್ರಸ್ಟ್ ಅಧ್ಯಕ್ಷ
*
ಶಾಸಕಾಂಗವನ್ನು ನಾವೇ ದುರ್ಬಲ ಮಾಡಿದ್ದೇವೆ. ಸಾರ್ವಜನಿಕ ಹಿತಾಸಕ್ತಿ ಯಾರಿಗೂ ಮುಖ್ಯವಾಗುತ್ತಿಲ್ಲ. ಸಮಾಜದ ಎಲ್ಲ ವರ್ಗಗಳ ಒಳಿತಿಗಾಗಿ ಯೋಚಿಸಬೇಕು.
-ಜಯಪ್ರಕಾಶ್ ಹೆಗ್ಡೆ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ
*
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವೈವಿಧ್ಯತೆಯ ಆಶಯಕ್ಕೆ ಧಕ್ಕೆ ತರಬಾರದು. ವೈವಿಧ್ಯತೆಯಲ್ಲೇ ಏಕತೆ ಸಾಧಿಸಬೇಕು. ಶಿಕ್ಷಣದ ಮೂಲಕ ಅರಿವು ಮೂಡಿಸಿ ಸಮಾಜದಲ್ಲಿ ಬದಲಾವಣೆ ತರಬಹುದು.
-ಪ್ರೊ. ಜಿರೋಮ್ ನಿರ್ಮಲರಾಜ್,ಏಕಂ ಸಾಥ್ ಟ್ರಸ್ಟ್ ಸದಸ್ಯ
*
ಬಹುತ್ವ ಸಂಸ್ಕೃತಿಯ ದೇಶದಲ್ಲಿ ಸಹಿಷ್ಣುತೆ ಮೂಲ ಆಧಾರ. ಮನೆಯಲ್ಲಿರುವ ಸಹಿಷ್ಣುತೆ ದೇಶದೆಲ್ಲೆಡೆ ಇರಬೇಕು. ಆದರೆ, ಆಹಾರ, ಬಟ್ಟೆ ನೋಡಿ ದ್ವೇಷ ಸಾಧಿಸುವ ಮನಸ್ಥಿತಿಗೆ ತಲುಪಿರುವುದು ದುರದೃಷ್ಟಕರ.
-ಎಚ್.ಎನ್. ನಾಗಮೋಹನ್ ದಾಸ್, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.