ADVERTISEMENT

ವಿಧಾನಸಭೆ ಅಧಿವೇಶನ: ಶಾಸಕರ ಹಾಜರಾತಿ ಮೇಲೆ ‘ಎಐ’ ನಿಗಾ!

ಇದೇ 15 ರಿಂದ 9 ದಿನಗಳು ನಡೆಯಲಿದೆ ಅಧಿವೇಶನ

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 19:49 IST
Last Updated 12 ಜುಲೈ 2024, 19:49 IST
<div class="paragraphs"><p>ವಿಧಾನಸಭೆ ಅಧಿವೇಶನ (ಸಾಂದರ್ಭಿಕ ಚಿತ್ರ)</p></div>

ವಿಧಾನಸಭೆ ಅಧಿವೇಶನ (ಸಾಂದರ್ಭಿಕ ಚಿತ್ರ)

   

ಬೆಂಗಳೂರು: ಈ ಬಾರಿಯ ಅಧಿವೇಶನದಲ್ಲಿ ಶಾಸಕರ ಹಾಜರಾತಿ ಮೇಲೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಕಣ್ಗಾವಲು ಇರಲಿದೆ.

ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಮತ್ತು ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರು ಈ ಮಾಹಿತಿ ನೀಡಿದರು.

ADVERTISEMENT

ಅಧಿವೇಶನದ ವೇಳೆಯಲ್ಲಿ ಶಾಸಕರು ಕಲಾಪಕ್ಕೆ ಎಷ್ಟು ಹೊತ್ತಿಗೆ ಬರುತ್ತಾರೆ, ಎಷ್ಟು ಹೊತ್ತಿಗೆ ಹೊರಗೆ ಹೋಗುತ್ತಾರೆ ಮತ್ತು ಸದನದಲ್ಲಿ ಎಷ್ಟು ಹೊತ್ತು ಕುಳಿತುಕೊಳ್ಳುತ್ತಾರೆ ಎಂಬ ಮಾಹಿತಿ ತಿಳಿದುಕೊಳ್ಳಲು ಕೃತಕ ಬುದ್ಧಿಮತ್ತೆ ಆಧಾರಿತ (ಎಐ) ಹೊಸತಂತ್ರಜ್ಞಾನವನ್ನು ಬಳಸಲಾಗುವುದು. ಶಾಸಕರ ಚಲನವಲನವನ್ನು ಕ್ಯಾಮೆರಾಗಳಲ್ಲಿ ಸೆರೆ ಹಿಡಿಯಲಾಗುವುದು ಎಂದು ವಿವರಿಸಿದರು.

ಕಳೆದ ಬಾರಿಯಂತೆ ಈ ಬಾರಿಯೂ ವಿಧಾನಸಭಾ ಅಧಿವೇಶನದಲ್ಲಿ ಸಮಯಕ್ಕೆ ಸರಿಯಾಗಿ ಹಾಜರಾಗುವ ಶಾಸಕರಿಗೆ ಟೀ ಕಪ್‌, ಕ್ರೀಡೆಗೆ ಪ್ರೋತ್ಸಾಹ ನೀಡಲು ಶಾಸಕರು ಮತ್ತು ವಿಧಾನಮಂಡಲ ಸಿಬ್ಬಂದಿಗೆ ವಿಧಾನಮಂಡಲ ಕಪ್‌ ನೀಡುವುದಾಗಿ ಪ್ರಕಟಿಸಿದರು. 

ವಿಧಾನಸಭೆ ಪ್ರವೇಶ ದ್ವಾರದ ಬಳಿ, ಕಬ್ಬಿಣದ ಗ್ರಿಲ್‌ ರೀತಿ ಇತ್ತು. ಅಲ್ಲಿ ಬೀಟೆ ಮರದಿಂದ ಮಾಡಿದ ದ್ವಾರವನ್ನು ಅಳವಡಿಸಲಾಗುವುದು. ಅದನ್ನು ಜು.15 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದರು.

ಇದೇ 20 ರಂದು ವಿಧಾನಸೌಧದ ಬ್ಯಾಕ್ವೆಂಟ್‌ ಹಾಲ್‌ನಲ್ಲಿ ಚೆಸ್‌ ಸ್ಪರ್ಧೆ ಏರ್ಪಡಿಸಲಾಗಿದೆ. ಇದರಲ್ಲಿ ವಿಧಾನಸಭೆ ಮತ್ತು ವಿಧಾನಪರಿಷತ್‌ ಸದಸ್ಯರು ಭಾಗವಹಿಸಬಹುದು. ಗೆದ್ದವರಿಗೆ ಬಹುಮಾನ ನೀಡಲಾಗುವುದು ಎಂದು ಹೇಳಿದರು.

ಇದೇ 15ರಿಂದ ನಡೆಯಲಿರುವ 9 ದಿನಗಳ ಅಧಿವೇಶನದಲ್ಲಿ ಪ್ರಶ್ನೋತ್ತರ, ಶೂನ್ಯವೇಳೆ, ನಿಲುವಳಿ ಸೂಚನೆಗಳಿಗೆ ಅವಕಾಶ ಇರಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.