ADVERTISEMENT

ಗ್ರಾಮ ಸ್ವರಾಜ್‌ ಮಸೂದೆಗೆ ವಿಧಾನಸಭೆ ಒಪ್ಪಿಗೆ, ಮೇಲ್ಮನೆ ಕೊಕ್ಕೆ

ಮೋಟಾರು ವಾಹನ ತೆರಿಗೆ ಪರಿಷ್ಕರಣೆ ಮಸೂದೆ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 19:45 IST
Last Updated 24 ಮಾರ್ಚ್ 2020, 19:45 IST

ಬೆಂಗಳೂರು: ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಅಧಿಕಾರ ಅವಧಿಯನ್ನು ಎರಡೂವರೆ ವರ್ಷಗಳಿಗೆ ಇಳಿಸುವುದೂ ಸೇರಿ ಕೆಲವು ಬದಲಾವಣೆಗಳನ್ನು ಮಾಡಿರುವ ‘ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ತಿದ್ದುಪಡಿ) ಮಸೂದೆ’ಗೆ ವಿರೋಧ ಪಕ್ಷಗಳ ಸದಸ್ಯರ ಅನುಪಸ್ಥಿತಿಯಲ್ಲಿ ವಿಧಾನಸಭೆ ಒಪ್ಪಿಗೆ ನೀಡಿತು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್‌. ಈಶ್ವರಪ್ಪ ಮಸೂದೆಯ ಉದ್ದೇಶವನ್ನು ವಿವರಿಸಿದರು, ಮೇ ತಿಂಗಳಲ್ಲಿ ಚುನಾವಣೆ ಬರುವುದರಿಂದ ಇದೇ ಅಧಿವೇಶನದಲ್ಲಿ ಒಪ್ಪಿಗೆ ನೀಡಬೇಕು ಎಂದು ಮನವಿ ಮಾಡಿದರು.

ಆದರೆ, ಈ ಮಸೂದೆಗೆ ಕಾಂಗ್ರೆಸ್‌ ಪಕ್ಷದ ವಿರೋಧ ಇರುವ ಕಾರಣ ವಿಧಾನಪರಿಷತ್ತಿನಲ್ಲಿ ಸಭಾಪತಿಯವರು ಮಸೂದೆಯನ್ನು ಪರ್ಯಾಲೋಚನೆ ಮತ್ತು ಅಂಗೀಕಾರಕ್ಕೆ ತೆಗೆದುಕೊಳ್ಳಲಿಲ್ಲ.

ADVERTISEMENT

ಮಸೂದೆಯಲ್ಲಿರುವ ಅಂಶಗಳು:

* ಪಂಚಾಯಿತಿ ಸದಸ್ಯ ಯಾವುದೇ ಯೋಜನೆ, ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸುವಾಗ ಅಧಿಕಾರ ಅಥವಾ ಪ್ರಾಧಿಕಾರ ದುರುಪಯೋಗ ಮಾಡಿ, ತಪ್ಪಿತಸ್ಥ ಎಂದು ಸಾಬೀತಾದರೆ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಅನರ್ಹತೆಗೊಳಿಸಲಾಗುವುದು. ಈ ಹಿಂದೆ ಅನರ್ಹತೆ ಅವಧಿ ಮೂರು ವರ್ಷಗಳವರೆಗೆ ಇತ್ತು.

* ರಾಜ್ಯ ಚುನಾವಣಾ ಆಯೋಗವು ಪಂಚಾಯತ್‌ ಅವಧಿ ಪೂರ್ಣಗೊಳ್ಳುವುದಕ್ಕೆ ಮೊದಲು ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಚುನಾವಣಾ ಅಧಿಸೂಚನೆ ಹೊರಡಿಸುವುದಕ್ಕೆ ಮುಂಚೆ 45 ದಿನಗಳಿಗೆ ಕಡಿಮೆ ಇಲ್ಲದಂತೆ ಸ್ಥಾನಗಳ ಮೀಸಲಾತಿ ಮತ್ತು ಚುನಾವಣಾ ವೇಳಾ ಪಟ್ಟಿ ಪ್ರಕಟಿಸಬೇಕು.

* ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಅಧಿಕಾರ ಸ್ವೀಕರಿಸಿದ ದಿನದಿಂದ 15 ತಿಂಗಳ ಬಳಿಕ ಅವಿಶ್ವಾಸ ಮಂಡಿಸಬಹುದು. ಅದಕ್ಕೂ ಮೊದಲೇ ಅವಿಶ್ವಾಸ ಗೊತ್ತುವಳಿ ಮಂಡಿಸುವುದಕ್ಕೆ ಅವಕಾಶವಿಲ್ಲ. ಈ ಹಿಂದಿನ ಕಾಯ್ದೆ ಅನುಸಾರ, ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ವತಃ ರಾಜೀನಾಮೆ ನೀಡಿದರೆ ಮಾತ್ರ ಆ ಹುದ್ದೆಯಿಂದ ಬಿಡುಗಡೆ ಮಾಡಬಹುದಾಗಿತ್ತು. ದೈಹಿಕ ಅಥವಾ ಮಾನಸಿಕ ಅಶಕ್ತತೆ ಹೊಂದಿದ್ದಾನೆ ಎಂಬುದನ್ನು ಸಕ್ಷಮ ಪ್ರಾಧಿಕಾರ ಪ್ರಮಾಣ ಪತ್ರ ನೀಡಿದರೆ, ಕೇಂದ್ರ, ರಾಜ್ಯ ಅಥವಾ ಸಾರ್ವಜನಿಕ ಉದ್ಯಮಗಳಲ್ಲಿ ಸೇವೆಯಲ್ಲಿದ್ದರೆ ರಾಜೀನಾಮೆ ನೀಡಬೇಕಾಗುತ್ತಿತ್ತು. ಅಧ್ಯಕ್ಷ ಮತ್ತು ಉಪಾಧ್ಯಕ್ಷರು ತಮ್ಮ ಹುದ್ದೆಗಳ ಕರ್ತವ್ಯದ ಬಗ್ಗೆ ನಿರಂತರ ನಿರ್ಲಕ್ಷ್ಯ ತೋರಿದರೆ, ಆ ಬಗ್ಗೆ ವರದಿ ಪಡೆದು ಸರ್ಕಾರ ಅಂತಹ ವ್ಯಕ್ತಿಗಳನ್ನು ತೆಗೆದು ಹಾಕಲು ಅವಕಾಶ ನೀಡಲಾಗಿತ್ತು.

ಎಪಿಎಂಸಿ ವ್ಯವಹಾರ ಮಸೂದೆ:

ಚಿಲ್ಲರೆ ವ್ಯಾಪಾರಿಗಳು ತಮ್ಮಲ್ಲಿ ಇಟ್ಟುಕೊಳ್ಳಬೇಕಾದ ದಾಸ್ತಾನಿಗೆ ಮಿತಿ ಹಾಕುವ ಉದ್ದೇಶದಿಂದ ಚಿಲ್ಲರೆ ವ್ಯಾಪಾರಿಗಳನ್ನು ವರ್ಗೀಕರಿಸಲು ಸರ್ಕಾರಕ್ಕೆ ಅಧಿಕಾರ ನೀಡುವ ಉದ್ದೇಶದ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಮಸೂದೆಗೆ ವಿಧಾನಸಭೆ ಒಪ್ಪಿಗೆ ನೀಡಿತು.

ಅಲ್ಲದೆ, ಕರ್ನಾಟಕ ಕೈಗಾರಿಕಾ ಕಾರ್ಯನೀತಿ 2014–2019, ಕರ್ನಾಟಕ ಕೃಷಿ ವ್ಯಾಪಾರ ಮತ್ತು ಆಹಾರ ಸಂಸ್ಕರಣೆ ಕಾರ್ಯ ನೀತಿ–2015 ಜಾರಿಗೆ ತರಲು ಈ ತಿದ್ದುಪಡಿ ಅವಶ್ಯಕ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.