ADVERTISEMENT

8, 9, 10ನೇ ತರಗತಿಗೆ ಜುಲೈಯಿಂದ ಡಿಸೆಂಬರ್‌ವರೆಗೆ ದೂರದರ್ಶನದಲ್ಲಿ ಪಾಠ

​ಪ್ರಜಾವಾಣಿ ವಾರ್ತೆ
Published 18 ಜುಲೈ 2020, 10:16 IST
Last Updated 18 ಜುಲೈ 2020, 10:16 IST
   

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ 19 ಕಾರಣದಿಂದ ಶಾಲೆಗಳು ನಿಗದಿತ ಸಮಯದಲ್ಲಿ ಆರಂಭವಾಗದ ಹಿನ್ನೆಲೆಯಲ್ಲಿ, 8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಜುಲೈ ತಿಂಗಳಿನಿಂದ ಡಿಸೆಂಬರ್‌ವರೆಗೆ ದೂರದರ್ಶನ (ಚಂದನ ವಾಹಿನಿ) ಮೂಲಕ ಪಾಠ ಪ್ರಸಾರ ಮಾಡುವ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

ಕಾರ್ಯಕ್ರಮದ ಅನುಷ್ಠಾನಕ್ಕೆ ₹ 1.60 ಕೋಟಿ ವೆಚ್ಚ ಅಂದಾಜಿಸಲಾಗಿದ್ದು, ಪ್ರಾಥಮಿಕ ಶಾಲೆಗಳಿಗೆ ಮೂಲಸೌಕರ್ಯ, ಯಂತ್ರೋಪಕರಣ, ಸಾಧನ, ಸಾಮಗ್ರಿ ಯೋಜನೆಯಡಿ ಬಿಡುಗಡೆ ಮಾಡಲಾದ ಅನುದಾನದಿಂದ ಈ ವೆಚ್ಚವನ್ನು ಭರಿಸಲು ನಿರ್ಧರಿಸಲಾಗಿದೆ.

ಕಾರ್ಯಕ್ರಮದ ಪ್ರಯೋಜನವನ್ನು ಹೆಚ್ಚು ಮಕ್ಕಳು ಪಡೆಯುವಂತಾಗಲು ಈ ಬಗ್ಗೆ ಪ್ರಚಾರ ನೀಡಲು ಮತ್ತು ಯೂ ಟ್ಯೂಬ್‌ನಲ್ಲಿ ಪಾಠದ ವಿಡಿಯೊ ಲಭ್ಯವಾಗುವಂತೆ ಮಾಡಲು ಕೂಡಾ ಉದ್ದೇಶಿಸಲಾಗಿದೆ.

ADVERTISEMENT

ಕಾರ್ಯಕ್ರಮದ ಕುರಿತು ವಿಶೇಷವಾಗಿ ಪ್ರಚಾರ ಮಾಡಲು ಮತ್ತು ದೂರದರ್ಶನದಲ್ಲಿ ಪಾಠಗಳನ್ನು ವೀಕ್ಷಿಸಲು ಟಿ.ವಿ ವ್ಯವಸ್ಥೆ ಇಲ್ಲದಿರುವ ವಿದ್ಯಾರ್ಥಿಗಳನ್ನು ಟಿ.ವಿ ಇರುವ ವಿದ್ಯಾರ್ಥಿಯೊಂದಿಗೆ ಅನುಮತಿ ಪಡೆದು ಸಂಯೋಜಿಸಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಹೊಣೆಗಾರಿಕೆ ನೀಡಲಾಗಿದೆ. ಅಲ್ಲದೆ, ಇದಕ್ಕಾಗಿ 20 ಮಕ್ಕಳಿಗೆ ಒಬ್ಬರು ಶಿಕ್ಷಕರಿಗೆ ಜವಾಬ್ದಾರಿ ನೀಡಬೇಕು. ಒಂದು ತಿಂಗಳು ಪಾಠ ಪ್ರಸಾರ ಆದ ಬಳಿಕ ವಿದ್ಯಾರ್ಥಿಗಳಿಗೆ ಕಿರು ಪರೀಕ್ಷೆ ನಡೆಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

ದೂರದರ್ಶನ ಪ್ರಸಾರ ವೆಚ್ಚ ಎಷ್ಟು: 30 ನಿಮಿಷಗಳ ಎಂಟು ಅವಧಿಯ ಪಾಠಗಳ (ಒಟ್ಟು 4 ಗಂಟೆ) 120 ದಿನದ ಕಾರ್ಯಕ್ರಮ ಪ್ರಸಾರಕ್ಕೆ ಗಂಟೆಗೆ ₹ 24,426ರಂತೆ ದೂರದರ್ಶನಕ್ಕೆ ರಾಜ್ಯ ಸರ್ಕಾರ ₹ 1,17,24,480 ಪಾವತಿಸಬೇಕು. ಅಲ್ಲದೆ, ಸಂಪನ್ಮೂಲ ಶಿಕ್ಷಕರ ದಿನ ಭತ್ಯೆ, ಪ್ರಯಾಣ ಭತ್ಯೆ ಮತ್ತು ಸಂಭಾವಣೆ‌ಯಾಗಿ 960 ಗಂಟೆಗೆ ತಲಾ ₹ 2,000ದಂತೆ ಒಟ್ಟು ₹ 19.20 ಲಕ್ಷ ನೀಡಬೇಕು.

ತಾಂತ್ರಿಕ ತಂಡದವರಿಗೆ 960 ಗಂಟೆಗೆ ತಲಾ ₹ 500ರಂತೆ ₹ 48 ಲಕ್ಷ, 15 ಮಂದಿಯ ಉಪಾಹಾರಕ್ಕೆ ₹ 5.25 ಲಕ್ಷ, ಸ್ಟುಡಿಯೊದ ಹೆಚ್ಚುವರಿ ಉಪಕರಣಗಳ ಬಾಡಿಗೆಯಾಗಿ ₹ 5 ಲಕ್ಷ, 2 ವಾಹನಗಳ ಲಾಜಿಸ್ಟಿಕ್ಸ್‌ಗೆ ₹ 6 ಲಕ್ಷ, ಇತರ ವೆಚ್ಚವಾಗಿ ₹ 3 ಲಕ್ಷದ ವೆಚ್ಚದ ಕ್ರಿಯಾ ಯೋಜನೆಗೆ ಸರ್ಕಾರ ಒಪ್ಪಿಗೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.