ಹುಬ್ಬಳ್ಳಿ: ‘ರಾಜ್ಯದಲ್ಲಿ ಮತ್ತೊಂದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವ ಯೋಜನೆ ರಾಜ್ಯ ಸರ್ಕಾರ ಕೈಗೆತ್ತಿಕೊಂಡಿದ್ದು ಸ್ವಾಗತಾರ್ಹ. ಆದರೆ, ನೂತನ ವಿಮಾನ ನಿಲ್ದಾಣವನ್ನು ತುಮಕೂರು ಮತ್ತು ಶಿರಾ ನಡುವೆ ನಿರ್ಮಿಸಿ ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದ ಜನತೆಗೂ ಅನುಕೂಲ ಮಾಡಿಕೊಡಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಆಗ್ರಹಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಐಟಿ ಕ್ಷೇತ್ರದಲ್ಲಿ ವಿಶ್ವಕ್ಕೆ ಬೆಂಗಳೂರು ರಾಜಧಾನಿಯಾಗಿದ್ದು, ಈಗಾಗಲೇ ಅಲ್ಲಿಯ ವೈಟ್‌ಫೀಲ್ಡ್, ಸರ್ಜಾಪುರ, ಎಲೆಕ್ಟ್ರಾನ್ ಸಿಟಿ, ದೇವನಹಳ್ಳಿ ಭಾಗಗಳು ಐಟಿ ಮತ್ತು ಕೈಗಾರಿಕಾ ವಲಯದಲ್ಲಿ ಅಭಿವೃದ್ಧಿಯಾಗಿವೆ. ತಮಿಳುನಾಡು ಮತ್ತು ಆಂಧ್ರಪ್ರದೇಶದ ಗಡಿಯಲ್ಲಿರುವ ಭಾಗಗಳು ಸಹ ಪ್ರಗತಿಯಾಗಿದ್ದು, ಆ ರಾಜ್ಯಗಳ ಅಭಿವೃದ್ಧಿಗೂ ಕೊಡುಗೆ ನೀಡಿದೆ. ನೂತನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬೆಂಗಳೂರು ಪೂರ್ವ ಭಾಗದಲ್ಲಿ ನಿರ್ಮಿಸಿದರೆ, ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದ ಜನತೆಗೂ ಅನುಕೂಲವಾಗಲಿದೆ’ ಎಂದು ಹೇಳಿದರು.
‘ತಮಿಳುನಾಡು ಮತ್ತೊಂದು ವಿಮಾನ ನಿಲ್ದಾಣವನ್ನು ಹೊಸೂರು ಬಳಿ ನಿರ್ಮಿಸಲು ಯೋಜನೆ ರೂಪಿಸಿದೆ. ಹಾಗಾಗಿ ರಾಜ್ಯ ಸರ್ಕಾರ ನೂತನ ವಿಮಾನ ನಿಲ್ದಾಣವನ್ನು ಬಿಡದಿ ಅಥವಾ ತುಮಕೂರು ಭಾಗದಲ್ಲಿ ನಿರ್ಮಿಸುವ ಯೋಜನೆ ಇಟ್ಟುಕೊಂಡಿತ್ತು. ಯಾವ ಭಾಗದಲ್ಲಿ ನಿರ್ಮಿಸಬೇಕು ಎನ್ನುವ ಕುರಿತು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಸಮೀಕ್ಷೆ ನಡೆಸಲು ಸಲಹಾ ಸಂಸ್ಥೆಗೆ ಕೊಡುತ್ತೇವೆ ಎಂದಿದ್ದಾರೆ. ಯಾವುದೋ ಸಂಸ್ಥೆ ಏನೋ ವರದಿ ನೀಡುತ್ತದೆ ಎಂದು, ಅಂತಿಮಗೊಳಿಸಬಾರದು. ದೂರದೃಷ್ಟಿ ಯೋಜನೆ ರೂಪಿಸಬೇಕು’ ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.