ADVERTISEMENT

ಬಿಜೆಪಿಯವರು ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಲಿ : ಸಿಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 8:19 IST
Last Updated 17 ಜೂನ್ 2024, 8:19 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: 'ಪೆಟ್ರೋಲ್, ಡೀಸೆಲ್‌ ದರ ಹೆಚ್ಚಿಸಿದರು ಎಂದು ಬಿಜೆಪಿ- ಜೆಡಿಎಸ್‌ನವರು ಪ್ರತಿಭಟನೆ ನಡೆಸಿದ್ದಾರೆ. ಆದರೆ ಅವರು ಪ್ರತಿಭಟನೆ ಮಾಡಬೇಕಾಗಿರುವುದು ಕೇಂದ್ರ ಸರ್ಕಾರದ ವಿರುದ್ಧ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, 'ಕರ್ನಾಟಕ ಸರ್ಕಾರ ಪಾಪರ್ ಎಂದು ಆಶೋಕ ಹೇಳುತ್ತಾರೆ. ಪಾಪರ್ ಡೆಫನಿಷನ್ ಅವರಿಗೆ ಗೊತ್ತಾ ? ನಾವು ಯಾರದ್ದಾದರೂ ಸಂಬಳ ನಿಲ್ಲಿಸಿದ್ದೇವೆಯೇ? ಬಜೆಟ್ ಘೋಷಿತ ಅನುದಾನ‌ ನಿಲ್ಲಿಸಿದ್ದೇವೇ? ಎಂದು ಪ್ರಶ್ನಿಸಿದರು.

'ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ, ಕೇಂದ್ರದಿಂದ ಬೆಲೆ ಏರಿಕೆಯಾಗಿದೆ ಎಂದು ದೊಡ್ಡ ಹೇಳಿಕೆ ಕೊಟ್ಟಿದ್ದರು. ನಾನು ಪ್ರಧಾನಿಯಾದ ಮೇಲೆ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡುತ್ತೇನೆ ಎಂದಿದ್ದರು. ಆದರೆ, ತಮ್ಮ ಹೇಳಿಕೆಗೆ ತದ್ವಿರುದ್ಧವಾಗಿ ನಡೆದುಕೊಂಡಿದ್ದಾರೆ' ಎಂದರು.

ADVERTISEMENT

'ಮೋದಿ ಪ್ರಧಾನಿಯಾದಾಗ ಪೆಟ್ರೋಲ್ ಬೆಲೆ ₹ 72.26 ಇತ್ತು. ಇದೇ ಜೂನ್ 24ರಲ್ಲಿ ₹104 ಆಗಿತ್ತು. ಈಗ ಕಡಿಮೆ ಆಗಿದೆ. ಡೀಸೆಲ್ ಬೆಲೆ ₹ 57 ಇತ್ತು. ನಂತರ ₹ 98 ಮಾಡಿದರು. ಇದನ್ನು ಹೆಚ್ಚು ಮಾಡಿದ್ದು ಮೋದಿ. ಕಚ್ಛಾತೈಲ ಬೆಲೆ ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ₹ 113 ಇತ್ತು. ಈಗ ₹ 82.35 ಇದೆ. 2015 ರಲ್ಲಿ 50 ಡಾಲರ್ ಆಗಿತ್ತು. 2016ರಲ್ಲಿ ಇನ್ನೂ ಕಡಿಮೆ ಆಯಿತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲ ದರ ಕಡಿಮೆ ಆಗಿದೆ. ಯಾರ ವಿರುದ್ಧ ಬಿಜೆಪಿ ಹೋರಾಟ ಮಾಡಬೇಕು' ಎಂದು ಪ್ರಶ್ನಿಸಿದರು.

'ಮನಮೋಹನ್ ಸಿಂಗ್ ಇದ್ದಾಗ ಅನಿಲ ಸಿಲಿಂಡರ್ ದರ ₹ 410‌ ಇತ್ತು. ನಂತರ ₹1100 ಆಯಿತು.ಈಗ ₹ 805 ಆಗಿದೆ. ಹೆಚ್ಚು ಮಾಡಿದವರು ಯಾರು? ಬಡವರ ಬಗ್ಗೆ, ಜನ‌ಸಾಮಾನ್ಯರ ಬಗ್ಗೆ ಕಾಳಜಿಯಿದ್ದರೆ ಬಿಜೆಪಿಯವರು ಕೇಂದ್ರದ ವಿರುದ್ಧ ಪ್ರತಿಭಟಿಸಲಿ' ಎಂದರು.

'ಕೇಂದ್ರ ಸರ್ಕಾರ ಜಿಎಸ್‌ಟಿ ಜಾರಿಗೆ ತಂದ ಮೇಲೆ ರಾಜ್ಯ ಸರ್ಕಾರಕ್ಕೆ ತೆರಿಗೆ ಹೆಚ್ಚಿಸುವ ಅಧಿಕಾರ ಇಲ್ಲದಾಯಿತು. ಪೆಟ್ರೋಲ್, ಡೀಸೆಲ್, ಅಬಕಾರಿ, ಮೋಟಾರ್ ತೆರಿಗೆ, ಸ್ಟಾಂಪ್ ಡ್ಯೂಟಿ ಮಾತ್ರ ಮಾಡಬಹುದು. ಆದಾಯ, ಜಿಎಸ್‌ಟಿ ಎಲ್ಲ ಕೇಂದ್ರ ಸರ್ಕಾರ ಸಂಗ್ರಹಿಸುತ್ತಿದೆ. ರಾಜ್ಯ ಸರ್ಕಾರಕ್ಕೆ ಇರುವುದು ಮಾರಾಟ ತೆರಿಗೆ ಹಾಕುವುದಷ್ಟೇ' ಎಂದೂ ವಿವರಿಸಿದರು.

'ರಾಜ್ಯದ ಪಾಲು ಕೂಡ ಕಡಿಮೆ‌ ಕೊಡುತ್ತಾರೆ. ಬಿಜೆಪಿಯವರು ಅಧಿಕಾರಕ್ಕೆ ಬಂದ ಮೇಲೆ (2014-15) 1.85 ಲಕ್ಷ ಕೋಟಿ ನಷ್ಟವಾಗಿದೆ. ₹ 5, 495 ಕೋಟಿ ತೆರಿಗೆ ಪಾಲು ಕಡಿಮೆ ಆಗಿದೆ ಎಂದು ಹದಿನೈದನೇ ಹಣಕಾಸು ಆಯೋಗ ಹೇಳಿದರೂ ಕೊಡಲಿಲ್ಲ. ಪೆರಿಫರಲ್‌ ರಿಂಗ್ ರಸ್ತೆ, ಬೆಂಗಳೂರು ಕೆರೆ ಅಭಿವೃದ್ಧಿಗೆ, ಭದ್ರಾ ಮೇಲ್ದಂಡೆಗೂ ಒಂದು ರೂ. ಕೊಡಲಿಲ್ಲ. ಅದರ ಬಗ್ಗೆ ಬಿಜೆಪಿಯವರು ಮಾತಾಡಲಿಲ್ಲ' ಎಂದು ವಾಗ್ದಾಳಿ ನಡೆಸಿದರು.

'ಮೋದಿ ಅಧಿಕಾರಕ್ಕೆ ಬಂದಾಗ ಪೆಟ್ರೋಲ್ ಮೇಲೆ ಸೆಂಟ್ರಲ್ ಎಕ್ಸೈಸ್ ಡ್ಯೂಟಿ ₹ 9.48 ಇತ್ತು. ಮೇ 2020ಕ್ಕೆ ₹ 32.98 ಆಯಿತು. ಡೀಸೆಲ್ ಮೇಲೆ ₹ 3.56 ಇತ್ತು. ₹ 31.83 ಆಯಿತು. ಆಗ ಬಿಜೆಪಿಯವರು ಪ್ರತಿಭಟಿಸಿದರೇ? ಬಡವರ ಮೇಲೆ‌ ಹೊರೆಯಾಗಲಿಲ್ಲವೇ' ಎಂದೂ ಪ್ರಶ್ನಿಸಿದರು.

ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, 'ಬಸ್ ಪ್ರಯಾಣ ದರ ಏರಿಕೆ‌ ಮಾಡಿ ಎಷ್ಟು ವರ್ಷ ಆಗಿದೆ ಗೊತ್ತೇ? ಇಲಾಖೆಯೊಂದಿಗೆ ಚರ್ಚೆ ಮಾಡುತ್ತೇನೆ. ಏರಿಕೆ‌ ಮಾಡಲ್ಲ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.