ಬೆಂಗಳೂರು: ವಿಶ್ವಕರ್ಮರ ಅಭಿವೃದ್ದಿಗೆ ಪ್ರಧಾನಮಂತ್ರಿಗಳು ಯೋಜನೆ ರೂಪಿಸಿದ್ದಾರೆ. 18 ಕಾಯಕಗಳಿಗೆ ಸಾಲ ನೀಡುವ ‘ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ’ ಜಾರಿಗೆ ತಂದಿದ್ದಾರೆ. ಈ ಯೋಜನೆ ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಬಳಕೆಯಾಗಬೇಕು ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ವಿಶ್ವಕರ್ಮ ಸೇವಾ ಪ್ರತಿಷ್ಠಾನದ ವತಿಯಿಂದ ನಗರದಲ್ಲಿ ನಡೆದ ಕರ್ನಾಟಕ ವಿರಾಟ್ ವಿಶ್ವಕರ್ಮ ಮಹೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಮನುಷ್ಯನ ನಾಗರಿಕತೆ ಸೃಷ್ಟಿ ಮಾಡಿದವರು ವಿಶ್ವಕರ್ಮರು. ಮನಷ್ಯ ಒಂಟಿ ಜೀವಿಯಾಗಿದ್ದ. ಆಹಾರದಿಂದ ಹಿಡಿದು ಕಾಯಕದವರೆಗೂ ಮನುಷ್ಯನ ಪರಿವರ್ತನೆಗೆ ವಿಶ್ವಕರ್ಮರು ಕೊಡುಗೆ ನೀಡಿದ್ದಾರೆ. ವಿಶ್ವದಲ್ಲೆಡೆ ವಿಶ್ವಕರ್ಮರು ಇದ್ದಾರೆ. ವಿಶ್ವಕರ್ಮರು ದೇವರ ಮೂರ್ತಿ ಮಾಡದೇ ಇದ್ದರೆ, ದೇವರ ರೂಪವೇ ಇರುತ್ತಿರಲಿಲ್ಲ ಎಂದು ಹೇಳಿದರು.
‘ವಿಶ್ವಕರ್ಮರಿಗೆ ಬಹಳ ಕಲೆ ಗೊತ್ತಿದ್ದರೂ ಅದನ್ನು ಹೇಳಿಕೊಳ್ಳುವುದಿಲ್ಲ. ನಿಮ್ಮ ಕಲೆಯ ಬಗ್ಗೆ ಕೌಶಲದ ಬಗ್ಗೆ ಹೇಳಿಕೊಳ್ಳಬೇಕು. ವಿಶ್ವಕರ್ಮ ಸಮುದಾಯದವರು ಐಎಎಸ್ , ಐಪಿಎಸ್ ಅಧಿಕಾರಿಗಳು ಆಗಬೇಕು’ ಎಂದು ಸಲಹೆ ನೀಡಿದರು.
‘ನಾನು ಮುಖ್ಯಮಂತ್ರಿಯಾಗಿದ್ದಾಗ ಬಜೆಟ್‌ನಲ್ಲಿ ಐವತ್ತು ಕಸುಬುಗಳಿಗೆ ₹ 50 ಸಾವಿರವರೆಗೆ ಸಾಲ ನೀಡುವ ಯೋಜನೆ ಜಾರಿಗೆ ತಂದಿದ್ದೆ. ಶ್ರೀಮಂತರು ಮಾತ್ರ ಆರ್ಥಿಕತೆ ಬೆಳೆಸುತ್ತಾರೆ ಎಂದು ಜನರು ಭಾವಿಸುತ್ತಾರೆ. ಆದರೆ, ಕೆಳಹಂತದ ಕಾರ್ಮಿಕರು ಕೆಲಸ ಮಾಡಿದಾಗ ಮಾತ್ರ ಆರ್ಥಿಕತೆ ಬೆಳೆಯುತ್ತದೆ’ ಎಂದು ಹೇಳಿದರು.
ಸಾಹಿತಿ ಚಂದ್ರಶೇಖರ ಕಂಬಾರ, ವಿಶ್ವಕರ್ಮ ಸಮುದಾಯದ ಶಿವ ಸಜ್ಜನ ಮಹಾಸ್ವಾಮಿ, ವೀರೇಂದ್ರ ಸ್ವಾಮೀಜಿ, ಸಂಸದ ತೇಜಸ್ವಿ ಸೂರ್ಯ ಇದ್ದರು. ಸಾಧಕರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.