ಬೆಂಗಳೂರು: ಮಣಿಪುರ ಸಂತ್ರಸ್ತೆಯರು ಹಾಗೂ ಅಲ್ಲಿನ ಜನರ ನೋವಿಗೆ ಧ್ವನಿಯಾದ ರೀತಿಯಲ್ಲೇ ಕೋಲ್ಕತ್ತ ವೈದ್ಯರ ನೋವಿನಲ್ಲೂ ಜೊತೆಯಾಗಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಬಿ.ಶಂಕರ ಗುಹಾ ದ್ವಾರಕನಾಥ್ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.
ಕೋಲ್ಕತ್ತ ಕಿರಿಯ ವೈದ್ಯೆಯ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣದಿಂದ ದೇಶದ ವೈದ್ಯ ಸಮುದಾಯ ಆತಂಕ, ಭಯಕ್ಕೆ ಒಳಗಾಗಿ ಅಸಹಾಯಕ ಸ್ಥಿತಿಯಲ್ಲಿದೆ. ಮಣಿಪುರ ಘಟನೆ ನಡೆದಾಗ ಅಲ್ಲಿಗೆ ಭೇಟಿ ನೀಡಿ, ಜನರಿಗೆ ಧೈರ್ಯ ತುಂಬಿದಂತೆ, ಕೋಲ್ಕತ್ತಕ್ಕೂ ಭೇಟಿ ನೀಡಿ, ಮೃತ ವೈದ್ಯೆಯ ಕುಟುಂಬಕ್ಕೆ ಧೈರ್ಯ ತುಂಬಬೇಕು ಎಂದು ಕೋರಿದ್ದಾರೆ.
ವೈದ್ಯರು ಹಾಗೂ ಜನಸಂಖ್ಯೆಯ ಅನುಪಾತದ ಮಧ್ಯೆ ವಿಪರೀತ ಅಂತರವಿದೆ. ಕಡಿಮೆ ಸಂಬಳ ಪಡೆಯುವ ವೈದ್ಯರು ವಿಶ್ರಾಂತಿ ಇಲ್ಲದೇ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಕೋಟ್ಯಂತರ ಜನರ ಜೀವ ಉಳಿಸಿದ್ದಾರೆ. ಅಂತಹ ವೈದ್ಯರ ಪರ ನಿಲ್ಲಬೇಕು. ಕೃತ್ಯ ನಡೆದ ಆಸ್ಪತ್ರೆಯ ಆಡಳಿತ ಮಂಡಳಿಯ ನಡವಳಿಕೆ ಖಂಡಿಸಬೇಕು. ವೈದ್ಯರ ಮೇಲೆ ಹಲ್ಲೆ, ಅತ್ಯಾಚಾರ, ಕೊಲೆಯಂತಹ ಪ್ರಕರಣಗಳ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸಲು ಲೋಕಸಭೆಯಲ್ಲಿ ಒತ್ತಾಯಿಸಬೇಕು. ಈ ಕುರಿತು ಚರ್ಚಿಸಲು ರಾಜ್ಯದ ವೈದ್ಯರು ಮತ್ತು ಉದ್ಯಮಿಗಳ ತಂಡಕ್ಕೆ ಸಮಯ ನೀಡಬೇಕು ಎಂದು ವಿನಂತಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.