ಬೆಂಗಳೂರು: ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಏಕಗವಾಕ್ಷಿ ಯೋಜನೆಯಡಿ 2020ನೇ ಸಾಲಿನ ಪುಸ್ತಕಗಳ ಆಯ್ಕೆ ಪ್ರಕ್ರಿಯೆ ನಡೆದು ವರ್ಷವಾದರೂ ಖರೀದಿ ನಡೆದಿಲ್ಲ. ಇದರಿಂದ ಪ್ರಕಾಶಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸಾಹಿತಿ ದೊಡ್ಡರಂಗೇಗೌಡ ನೇತೃತ್ವದ ಪುಸ್ತಕ ಆಯ್ಕೆ ಸಮಿತಿ ಕಳೆದ ವರ್ಷವೇ ಪುಸ್ತಕಗಳ ಪಟ್ಟಿಯನ್ನು ಅಂತಿಮಗೊಳಿಸಿ, ಇಲಾಖೆಗೆ ಸಲ್ಲಿಸಿತ್ತು. ಇದಕ್ಕೆ ಅನುಮೋದನೆ ನೀಡಿ, ಅನುದಾನ ಬಿಡುಗಡೆಗೆ ಸಾಹಿತಿಗಳು ಹಾಗೂ ಪ್ರಕಾಶಕರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು.
ಮೀಸಲು ಅನುದಾನ ಅನ್ಯ ಕಾರ್ಯಗಳಿಗೆ ಬಳಕೆ ಸೇರಿ ವಿವಿಧ ಕಾರಣಗಳಿಂದ ಪುಸ್ತಕ ಖರೀದಿ ಪ್ರಕ್ರಿಯೆಯನ್ನು ಮುಂದೂಡುತ್ತಾ ಬರಲಾಗಿತ್ತು. ದೊಡ್ಡರಂಗೇಗೌಡ ಅವರ ಸಮಿತಿಯ ಕಾರ್ಯಾವಧಿ ಮುಗಿದಿದ್ದು, 2023ರ ಜನವರಿಯಿಂದ ಹೊಸ ಸಮಿತಿ ರಚನೆಯಾಗಿದೆ. ಈ ಸಮಿತಿ 2021ನೇ ಸಾಲಿನ ಆಯ್ಕೆ ಪ್ರಕ್ರಿಯೆ ನಡೆಸಬೇಕಿದೆ.
ಸರ್ಕಾರದ ಮುಂದಿರುವ ಪುಸ್ತಕ ಪಟ್ಟಿಗೆ ಈಗ ಚುನಾವಣೆ ನೀತಿ ಸಂಹಿತೆ ಕಾರಣ ನೀಡಿ, ತಡೆ ಹಿಡಿಯಲಾಗಿದೆ. ಹೊಸ ಸರ್ಕಾರ ರಚನೆಯಾದ ಬಳಿಕ ಅನುಮೋದನೆ ಪಡೆದು, ಖರೀದಿ ಪ್ರಕ್ರಿಯೆ ನಡೆಸಬೇಕಿದೆ. ಇದರಿಂದ 2021ನೇ ಸಾಲಿನ ಪುಸ್ತಕ ಖರೀದಿ ಪ್ರಕ್ರಿಯೆಗೂ ಹಿನ್ನಡೆಯಾಗುವ ಬಗ್ಗೆ ಪ್ರಕಾಶಕರು ಕಳವಳ ವ್ಯಕ್ತಪಡಿಸಿದ್ದಾರೆ.
ಪರಿಷ್ಕರಣೆಯಾಗದ ದರ: ಕಾಗದ ಹಾಗೂ ಮುದ್ರಣದ ದರ ಏರಿಕೆಯ ಕಾರಣ ಪ್ರಕಾಶಕರು, ಗ್ರಂಥಾಲಯ ಇಲಾಖೆ ಖರೀದಿಸುವ ಪುಸ್ತಕಗಳ ಪುಟದ ಬೆಲೆ ಪರಿಷ್ಕರಿಸುವಂತೆ ಸರ್ಕಾರಕ್ಕೆ ಆಗ್ರಹಿಸುತ್ತಾ ಬಂದಿದ್ದಾರೆ. ಸದ್ಯ ಪುಟವೊಂದಕ್ಕೆ 70 ಪೈಸೆಯಿದ್ದು, 30 ಪೈಸೆ ಹೆಚ್ಚಿಸಬೇಕು ಎನ್ನುವುದು ಪ್ರಕಾಶಕರ ಒತ್ತಾಯ. ಆಗ ಪುಟವೊಂದಕ್ಕೆ ₹ 1 ನಿಗದಿಯಾಗಲಿದೆ. ಆದರೆ, ಸರ್ಕಾರವು ಈ ಪ್ರಸ್ತಾವವನ್ನು ತಿರಸ್ಕರಿಸಿತ್ತು. ಈಗ ಏಕಗವಾಕ್ಷಿ ಯೋಜನೆಯಡಿ ಪುಸ್ತಕಗಳ ಖರೀದಿಯೂ ನಡೆಯದಿರುವುದು ಪ್ರಕಾಶಕರು ಆತಂಕಕ್ಕೆ ಕಾರಣವಾಗಿದೆ.
‘ಕನ್ನಡ ಪುಸ್ತಕೋದ್ಯಮ ಸಂಕಷ್ಟದಲ್ಲಿದೆ. ಸದ್ಯದ ಸ್ಥಿತಿಯಲ್ಲಿ ಹಾಕಿದ ಬಂಡವಾಳ ವರ್ಷಗಳ ಬಳಿಕ ಆದಾಯವಾಗಿ ಮರಳಿ ಬಂದರೆ ಪುಣ್ಯ ಎಂಬ ವಾತಾವರಣವಿದೆ. 2020ನೇ ಸಾಲಿನ ಪಟ್ಟಿಗೆ ಈಗ ನೀತಿ ಸಂಹಿತೆ ಕಾರಣ ನೀಡಲಾಗುತ್ತಿದೆ’ ಎಂದು ಕರ್ನಾಟಕ ಪ್ರಕಾಶಕರ ಸಂಘದ ಜಂಟಿ ಕಾರ್ಯದರ್ಶಿ ಸೃಷ್ಟಿ ನಾಗೇಶ್ ಅಸಮಾಧಾನ ವ್ಯಕ್ತಪಡಿಸಿದರು.
‘2020ನೇ ಸಾಲಿನ ಪುಸ್ತಕ ಆಯ್ಕೆ ಪಟ್ಟಿ ಸರ್ಕಾರದ ಮಟ್ಟದಲ್ಲಿದೆ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಹೊಸ ಸರ್ಕಾರ ರಚನೆ ಬಳಿಕ ಅನುಮೋದನೆ ಸಿಗಬಹುದು’ ಎಂದು ಗ್ರಂಥಾಲಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.
ಪುಸ್ತಕ ಪಟ್ಟಿಯನ್ನು ಗ್ರಂಥಾಲಯ ಇಲಾಖೆಗೆ ಸಲ್ಲಿಸಿ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿತ್ತು. ಆಡಳಿತ ನಡೆಸುವವರಿಗೆ ಸಾಹಿತ್ಯ ಕಾಳಜಿ ಇರಬೇಕು.-ದೊಡ್ಡರಂಗೇಗೌಡ ಗ್ರಂಥಾಲಯ ಇಲಾಖೆ ಪುಸ್ತಕ ಆಯ್ಕೆ ಸಮಿತಿಯ ನಿಕಟಪೂರ್ವ ಅಧ್ಯಕ್ಷ
ಬಹುತೇಕ ಪ್ರಕಾಶಕರು ಗ್ರಂಥಾಲಯ ಇಲಾಖೆಯ ಪುಸ್ತಕ ಖರೀದಿಯನ್ನೇ ಅವಲಂಬಿಸಿದ್ದಾರೆ. ಈ ರೀತಿ ಖರೀದಿಯನ್ನು ವಿಳಂಬ ಮಾಡಿದಲ್ಲಿ ಪ್ರಕಾಶಕರು ಸಂಕಷ್ಟಕ್ಕೆ ಸಿಲುಕಲಿದ್ದಾರೆ.-ಪ್ರಕಾಶ್ ಕಂಬತ್ತಳ್ಳಿ ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷ
₹ 15 ಕೋಟಿ ಅಗತ್ಯ
ರಾಜ್ಯದಲ್ಲಿ ಸುಮಾರು 500 ಪ್ರಕಾಶನ ಸಂಸ್ಥೆಗಳಿವೆ. ಕೆಲ ಲೇಖಕರೂ ಪ್ರಕಾಶನ ಕಾರ್ಯದಲ್ಲಿ ನಿರತರಾಗಿದ್ದಾರೆ. ವಾರ್ಷಿಕ ಸುಮಾರು 8 ಸಾವಿರ ಪುಸ್ತಕಗಳು ಪ್ರಕಟವಾಗುತ್ತಿವೆ. ಬಹುತೇಕ ಪ್ರಕಾಶಕರು ಇಲಾಖೆಯ ಸಗಟು ಖರೀದಿಯನ್ನೇ ಅವಲಂಬಿಸಿದ್ದಾರೆ. ಏಕಗವಾಕ್ಷಿ ಯೋಜನೆಯಡಿ ಆಯ್ಕೆಯಾದ ಪ್ರತಿ ಶೀರ್ಷಿಕೆಯ 300 ಪ್ರತಿಗಳನ್ನು ಇಲಾಖೆ ಖರೀದಿಸಲಿದೆ. ಇದಕ್ಕಾಗಿ ಪ್ರತಿವರ್ಷ ₹ 15 ಕೋಟಿ ವೆಚ್ಚ ಮಾಡಲಾಗುತ್ತಿದೆ. ನೆರೆಯ ರಾಜ್ಯಗಳಾದ ತಮಿಳುನಾಡು ಹಾಗೂ ಕೇರಳದಲ್ಲಿ 500 ಪ್ರತಿಗಳನ್ನು ಖರೀದಿ ಮಾಡಲಾಗುತ್ತಿದೆ. ಇಲ್ಲಿ 300 ಪ್ರತಿಗಳ ಖರೀದಿಗೆ ನಿಯಮಿತವಾಗಿ ಅನುದಾನ ಬಿಡುಗಡೆ ಮಾಡದಿರುವುದು ಪ್ರಕಾಶಕರ ಅಸಮಾಧಾನಕ್ಕೆ ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.