ಬರುವೆ (ಶಿವಮೊಗ್ಗ): ‘ಎಪ್ಪತ್ತು ವರ್ಷ ಆತು. ಇಲ್ಲೇ ಹುಟ್ಟಿ ಬೆಳೆದೀವ್ನಿ, ಭೂಮಿ ಗೀಮಿ ಎಂಥದೂ ಇಲ್ಲ ಚಾಮಿ, ಕೈ, ಕಾಲೇ ಆಸ್ತಿ’ ಎಂದ ತಳ ಸಮುದಾಯದ ಕೊಲ್ಲಪ್ಪನ ಧ್ವನಿಯಲ್ಲಿ ಮಡುಗಟ್ಟಿದ ಆಕ್ರೋಶವಿತ್ತು. ಭೂ ಸುಧಾರಣೆಯಂತಹ ಕಾನೂನು ಜಾರಿಗೆ ಕಾರಣವಾದ ನೆಲದಲ್ಲಿ ತನಗೊಂದು ತುಂಡು ಭೂಮಿಯ ಒಡೆತನ ಸಿಗಲಿಲ್ಲವಲ್ಲ ಎಂಬ ವ್ಯಂಗ್ಯವೂ ಅಡಗಿತ್ತು.
ಸಾಗರ ತಾಲ್ಲೂಕಿನ ತುಮರಿ ಪಂಚಾಯಿತಿ ವ್ಯಾಪ್ತಿಯ ಬರುವೆಗ್ರಾಮದ ಕೊಲ್ಲಪ್ಪ ಹತಾಶರಾಗಿಯೇನೂ ಕುಳಿತಿಲ್ಲ. ಕೂಲಿ ಕೆಲಸದಿಂದಲೇ ಬದುಕನ್ನು ಕಟ್ಟಿಕೊಂಡಿದ್ದಾರೆ. ಲಾಕ್‌ಡೌನ್ ಕಾಲದಲ್ಲಿ ಕೂಲಿ ಕೆಲಸ ಇಲ್ಲದೆ ಚಡಪಡಿಸಿದರೂ ‘ನನ್ನ ಕೈ ಕಾಲಲ್ಲಿ ಶಕ್ತಿ ಇದೆ’ ಎಂದು ಪೈಲ್ವಾನನಂತೆ ತೊಡೆ ತಟ್ಟುವಲ್ಲಿ ಆ ಜೀವದ ಅಪರಿಮಿತ ಜೀವನೋತ್ಸಾಹ ಎದ್ದು ಕಾಣುತ್ತಿತ್ತು.
ಅಲ್ಲಿಂದ ಅವರ ಮಾತು ಗ್ರಾಮದ ಕುಡಿಯುವ ನೀರಿನ ಸಮಸ್ಯೆಯತ್ತ ಹೊರಳಿತು. ಕಳೆದ ಬೇಸಿಗೆಯಲ್ಲಿ ನೀರಿಗೆ ಅದೆಷ್ಟು ಪರಿತಾಪ ಅನುಭವಿಸಿದರು ಎಂಬ ಚಿತ್ರಣವನ್ನು ಅವರು ಬಿಚ್ಚಿಟ್ಟರು. ‘ಬೊರಿವಿಲ್ (ಕೊಳವೆ ಬಾವಿ) ಕಾಣಿ ಸಾಮಿ, ಕೆಟ್ಟು ಕುಂತದೆ, ವರ್ಸ ಆತು. ನಮ್ಗೆ ಒಂದ್ ಬಾವಿ ಕೊಡೊದೇ ಸೈ’ ಎಂದು ಜೊತೆಯಲ್ಲಿದ್ದ ಪಂಚಾಯಿತಿ ಅಧ್ಯಕ್ಷರಿಗೆ, ಗ್ರಾಮದ ವೃದ್ಧೆ ರುಕ್ಮಿಣಿ ಎಲೆ ಅಡಿಕೆ ಮೆಲ್ಲುತ್ತಲೇ ಗಟ್ಟಿಗಿತ್ತಿಯಂತೆ ತಾಕೀತು ಮಾಡಿದರು.
ಲಾಕ್‌ಡೌನ್ ಕಾಲಕ್ಕೆ ಪಡಿತರ ವಿತರಿಸುವ ಸಿಬ್ಬಂದಿ ರಮೇಶ ಗುಡ್ಡ ಏರಿ ಕುಕ್ಕರಗಾಲಲ್ಲಿ ಕುಳಿತು ಕಾಲಮೇಲೆ ಲ್ಯಾಪ್‌ಟಾಪ್ ಇರಿಸಿ, ನೆಟ್‌ವರ್ಕ್‌ಗೆ ಪರದಾಡಿ ಕಷ್ಟಪಟ್ಟು ಒಟಿಪಿ ನಂಬರ್ ಪಡೆದು ಅಕ್ಕಿ ಕೊಟ್ಟ ಪ್ರಹಸನವನ್ನು ನಗು ನಗುತ್ತಲೇ ವಿವರಿಸಿದ ಅವರು, ಸಿಬ್ಬಂದಿ ರಮೇಶ್ ಸಾಹಸವನ್ನು ಕೃತಜ್ಞತೆಯಿಂದ ನೆನೆದರು. ಕೊನೆಗೆ ಅಕ್ಕರೆಯಿಂದ ‘ಕೋಳಿ ಸಾರು ಕುದಿತಾ ಇದೆ, ಸ್ವಲ್ಪ ಹೊತ್ತು ಇರಿ ಮರಾಯ್ರೆ’ ಎಂದು ಊಟಕ್ಕೂ ಆಹ್ವಾನಿಸಿದರು.
ಪಂಚಾಯಿತಿ ಪ್ರತಿನಿಧಿಗಳ ಕಾಳಜಿ ಫಲವಾಗಿ ಪ್ರಾಯೋಗಿಕವಾಗಿ ಬರುವೆ ಗ್ರಾಮದಲ್ಲೇ ಪಡಿತರ ವಿತರಿಸುವ ವ್ಯವಸ್ಥೆಯಾಗಿತ್ತು. ಆದರೆ ಒಟಿಪಿ ಸಂಖ್ಯೆಗಾಗಿ ಬೇಕಿರುವ ನೆಟ್‌ವರ್ಕ್ ಸಂಪರ್ಕ ಸಿಗದೆ 2-3 ದಿನ ಗ್ರಾಮಸ್ಥರು ಚಾತಕಪಕ್ಷಿಗಳಂತೆ ಕಾಯುವಂತಾಗಿದೆ. ಪಡಿತರ ವಿತರಿಸುವ ಸಿಬ್ಬಂದಿ ಗ್ರಾಮದ ಬೆಟ್ಟ ಏರಿ ಕಷ್ಟಪಟ್ಟು ನೆಟ್‌ವರ್ಕ್ ಹಿಡಿಯುವ ಹೊತ್ತಿಗೆ ಲ್ಯಾಪ್‌ಟಾಟ್‌ನ ಬ್ಯಾಟರಿ ಕೈಕೊಟ್ಟಿದ್ದೂ ಉಂಟು.
ಇದು ಕತ್ತಲ ವಿರುದ್ಧ ಹೋರಾಡಲು ರಾಜ್ಯಕ್ಕೆ ಶಕ್ತಿ ಕೊಟ್ಟು ಶರಾವತಿ ನದಿಯಿಂದ ಮುಳುಗಡೆಯಾದ ಪ್ರದೇಶದ ಚಿತ್ರಣ. ಬರುವೆ ಎಂಬ ದ್ವೀಪದೊಳಗಿನ ದ್ವೀಪದ ಕತ್ತಲ ನಾಡಿನ ಗ್ರಾಮದ ಪ್ರತಿಯೊಂದು ಮನೆ ಹೊಕ್ಕರೆ ಒಂದೊಂದು ‘ಕಥೆ’ ಬಿಚ್ಚಿಕೊಳ್ಳುತ್ತದೆ.
ರಾಜ್ಯದಲ್ಲಿ ಸಿಗಂದೂರು ದೇವಾಲಯದ ಕಾರಣಕ್ಕೆ ಪ್ರಸಿದ್ಧವಾಗಿರುವ ಕರೂರು ಹೋಬಳಿ ಕರ್ನಾಟಕದ ‘ಅಂಡಮಾನ್’ ಇದ್ದಂತೆ. ಕೊಡಚಾದ್ರಿ ಪರ್ವತ ಶ್ರೇಣಿಯ ಕಾಡಿನ ನಡುವೆ ಸುಂದರ ಪರಿಸರದ ಮಡಿಲಲ್ಲಿರುವ ಈ ಪ್ರದೇಶ ಪ್ರವಾಸಿಗರ ಪಾಲಿಗೆ ಸ್ವರ್ಗ ಇದ್ದಂತೆ. ಆದರೆ ಸ್ಥಳೀಯರ ಬದುಕು ಮಾತ್ರ ಸಮಸ್ಯೆಗಳ ಸರಮಾಲೆಯನ್ನೆ ಹೊತ್ತು ಕುಳಿತಿದೆ.
ತಾಲ್ಲೂಕು ಕೇಂದ್ರ ಸಾಗರದಿಂದ 70 ಕಿ.ಮೀ. ದೂರದಲ್ಲಿದೆ ಬರುವೆ ಗ್ರಾಮ. ಎ.ಸಿ., ತಹಶೀಲ್ದಾರರ ಕಚೇರಿಗೆ ಬರುವುದು ಎಂದರೆ ಹರಸಾಹಸ ಮಾಡಿದಂತೆ. ನಾಡ ಕಚೇರಿ, ಬ್ಯಾಂಕ್, ಸೊಸೈಟಿ, ಪಂಚಾಯಿತಿ ಕೆಲಸಕ್ಕೆ ತುಮರಿಗೆ ಬರಬೇಕು ಎಂದರೆ 35 ಕಿ.ಮೀ. ಕ್ರಮಿಸಬೇಕು. ರಸ್ತೆ ಇದ್ದರೂ ಬಸ್ ಕಾಣದ ಬರುವೆ ಗ್ರಾಮದವರು ಬಸ್ ಹಿಡಿಯಲು ಎಂಟು ಕಿ.ಮೀ. ನಡೆದು ಕಬದೂರು ಕ್ರಾಸ್‌ಗೆ ಬರಬೇಕು.
ಬರುವೆ ಗ್ರಾಮದ ಕಿರತೋಡಿ ಸಮೀಪದ ಈವಳ್ಳಿ ಹೊಳೆ ಎಂದೇ ಕರೆಯಲಾಗುವ ಹಿನ್ನೀರಿಗೆ ತೂಗುಸೇತುವೆ ನಿರ್ಮಿಸಿದರೆ ಐದು ಕಿ.ಮೀ. ದೂರದಲ್ಲೇ ತುಮರಿ ಸಿಗುತ್ತದೆ. ಈ ಸೇತುವೆಗೆ ಎರಡು ವರ್ಷಗಳ ಹಿಂದೆಯೇ ₹ 2.80 ಕೋಟಿ ವೆಚ್ಚದ ಅಂದಾಜು ಯೋಜನೆ ತಯಾರಿಸಿದ್ದರೂ ಹಣಕಾಸು ಇಲಾಖೆಯಿಂದ ಅನುಮೋದನೆ ಸಿಕ್ಕಿಲ್ಲ. ಜಿಲ್ಲಾ ಪಂಚಾಯಿತಿಯಿಂದ ಒದಗಿಸಲಾಗಿದ್ದ ದೋಣಿ ಸಂಚಾರದ ಸೌಲಭ್ಯವನ್ನೂ ನಿಲ್ಲಿಸಲಾಗಿದೆ.
ಬರುವೆಯ ಮಕ್ಕಳು ಪ್ರಾಥಮಿಕ ಶಿಕ್ಷಣಕ್ಕೆ ನಾಲ್ಕು ಕಿ.ಮೀ. ದೂರದ ಹಾಬಿಗೆಯ ಶಾಲೆಗೂ, ಪ್ರೌಢಶಾಲೆಗೆ 11 ಕಿ.ಮೀ. ದೂರದ ನಿಟ್ಟೂರಿಗೂ ಹೋಗಬೇಕು. ಬಸ್ಸಿನ ಸೌಲಭ್ಯವಿಲ್ಲದ ಕಾರಣ ಉಳ್ಳವರ ಮಕ್ಕಳು ಮಾತ್ರ ಶಾಲೆ ಕಾಣುವಂತಾಗಿದೆ. ಇಷ್ಟಕ್ಕೂ ಇಲ್ಲಿ ಉಳ್ಳವರು ಅಂತ ಇರುವುದು ಬೆರಳೆಣಿಕೆಯಷ್ಟುಮಂದಿ ಮಾತ್ರ.
ಆಗೊಮ್ಮೆ ಈಗೊಮ್ಮೆ ವಿದ್ಯುತ್ ದರ್ಶನ
ಬರುವೆ ಗ್ರಾಮಕ್ಕೆ ವಿದ್ಯುತ್ ಕಂಬಗಳೂ ಬಂದಿವೆ. ಮನೆಗಳಿಗೆ ವಿದ್ಯುತ್ ಸಂಪರ್ಕವೂ ಸಿಕ್ಕಿದೆ. ಆದರೆ, ವಿದ್ಯುತ್‌ನ ದರ್ಶನವಾಗುವುದು ಮಾತ್ರ ಆಗೊಮ್ಮೆ ಈಗೊಮ್ಮೆ. ಇನ್ನು ಗುಣಮಟ್ಟದ ವಿದ್ಯುತ್ ಎಂಬುದು ಇಲ್ಲಿನವರ ಪಾಲಿಗೆ ಮರೀಚಿಕೆಯೇ ಸರಿ. ಮಳೆಗಾಲದಲ್ಲಂತೂ ವಿದ್ಯುತ್ ಕೈ ಕೊಡುವುದು ಮಾಮೂಲು. ರಾಜ್ಯಕ್ಕೆ ಬೆಳಕು ನೀಡಲು ತಮ್ಮ ಬದುಕನ್ನೇ ತ್ಯಾಗ ಮಾಡಿದವರ ಗೋಳು ಇದು.
600ಕ್ಕೂ ಹೆಚ್ಚು ಜನರು ನೆಲೆಸಿರುವ ಈ ಗ್ರಾಮದಲ್ಲಿ 476 ಎಕರೆ ಭೂಮಿ ಇದ್ದರೆ, 90 ಎಕರೆಯಷ್ಟು ಭೂಮಿ ಸಾಗುವಳಿಗೆ ಒಳಪಟ್ಟಿದೆ. ಭೂಮಿಯಿಲ್ಲ ಎನ್ನುವುದು ಒಂದು ವರ್ಗದವರ ಸಮಸ್ಯೆಯಾದರೆ, ಸಾಗುವಳಿ ಇದ್ದರೂ ಹಕ್ಕುಪತ್ರ ಇಲ್ಲದಿರುವುದು ಮತ್ತೊಂದು ವರ್ಗದವರ ಸಮಸ್ಯೆಯಾಗಿದೆ.
ಈ ಭಾಗದ ಸಾಕಷ್ಟು ಭೂಮಿ ಇಂದಿಗೂ ಕರ್ನಾಟಕ ವಿದ್ಯುತ್ ನಿಗಮದ ಒಡೆತನದಲ್ಲೇ ಇದೆ. ಈ ಭೂಮಿಯಲ್ಲೇ ಹಲವರು ಅದೆಷ್ಟೋ ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದಾರೆ, ಮನೆ ಕಟ್ಟಿಕೊಂಡಿದ್ದಾರೆ. ನಗರ ಪ್ರದೇಶಗಳಲ್ಲಿ ಭೂಮಿಯನ್ನು ಡಿನೋಟಿಫೈ ಮಾಡುವ ನೀವು ಅದೇ ಮಾದರಿಯಲ್ಲಿ ಕೆಪಿಸಿಯಿಂದ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆದು ಸಾಗುವಳಿದಾರರಿಗೆ ಯಾಕೆ ಹಕ್ಕುಪತ್ರ ಕೊಡಬಾರದು ಎಂಬ ಬೇಡಿಕೆ ಮೊದಲಿನಿಂದಲೂ ಇದೆ.
ರುಕ್ಷ್ಮಿಣಿ
ಅವರು (ಭೂ ಮಾಲಿಕರು) ನಮ್ಮನ್ನು ಅನುಮಾನದಿಂದ (ಕೊರೊನ ಸೋಂಕು ತಗುಲಿರಬಹುದು ಎಂಬ) ನೋಡಿದರು. ಅದಕ್ಕೇ ಕೂಲಿ ಕೆಲಸಕ್ಕೆ ಕರೆಯಲೇ ಇಲ್ಲ
-ರುಕ್ಮಿಣಿ,ಗ್ರಾಮದ ವೃದ್ಧೆ
ಶಶಿಕಲಾ
ಈವಳ್ಳಿ ಹೊಳೆಗೆ ತೂಗು ಸೇತುವೆಯಾದರೆ ನಮಗೆ ಹೆಚ್ಚು ಅನುಕೂಲವಾಗುತ್ತದೆ. ಸರ್ಕಾರ ಸೇತುವೆಗೆ ಮಂಜೂರಾತಿ ನೀಡಬೇಕು-ಶಶಿಕಲಾ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ
ಕೊಲ್ಲಪ್ಪ
ಮನೆ ಮಕ್ಳ ಕೈಲಿ ಎಂತದೋ ಫೋನ್ ಬಂದದೆ. ಹಿಂದೆ ಮುಂದೆ ಏನು ಅಂತ ಗೊತ್ತಿಲ್ಲ. ಫೋನ್ ಇದ್ರೂ ಪ್ರಯೋಜನ ಇಲ್ಲ. ಪಡಿತರ ಅಕ್ಕಿಗೆ ಫೋನ್ ಬೇಕು ಅಂತ ತಗಂಡಿದ್ದಾರೆ ಅಷ್ಟೆ
-ಕೊಲ್ಲಪ್ಪ, ಗ್ರಾಮಸ್ಥ
ಜಲಂಧರ
ಗ್ರಾಮದ ಹಲವರ ಕೈಯಲ್ಲಿ ಮೊಬೈಲ್ ಫೋನ್ ಇದ್ದರೂ ಪ್ರಯೋಜನವಿಲ್ಲದಂತಾಗಿದೆ. ನೆಟ್‌ವರ್ಕ್ ಸಮಸ್ಯೆ ಬಗೆಹರಿಸುವತ್ತ ಸರ್ಕಾರ ಗಮನ ಹರಿಸಬೇಕು
ಜಲಂಧರ, ಗ್ರಾಮದ ಕೃಷಿಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.