ಕೋಲಾರ: ಲಾಂದ್ರದ ಬೆಳಕಲ್ಲೇ ಇಡೀ ಜೀವನ ಕಳೆದ ಜಿಲ್ಲೆಯ ಗಡಿ ಗ್ರಾಮ ಇಂದಿರಾನಗರದ ಜನರ ಬದುಕು ಕತ್ತಲುಮಯ. ರಾಜ್ಯದ ‘ಮೂಡಣ ಬಾಗಿಲು’ ಎಂದೇ ಹೆಸರಾಗಿರುವ ಮುಳಬಾಗಿಲು ತಾಲ್ಲೂಕಿನ ಮುದಿಗೆರೆ ಗಡ್ಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಹಳ್ಳಿಯ ಜನಸಂಖ್ಯೆ ನೂರರ ಗಡಿ ದಾಟಿಲ್ಲ.
ಆಂಧ್ರದ ಗಡಿಗೆ ಹೊಂದಿಕೊಂಡಿರುವ ಈ ಪುಟ್ಟ ಹಳ್ಳಿ ಆಧುನಿಕ ಜಗತ್ತಿನ ಸಂಪರ್ಕಕ್ಕೆ ಬರಲು ಏದುಸಿರು ಬಿಡುತ್ತಿದೆ. ಇಂದಿರಾಗಾಂಧಿ ಅವರು ಪ್ರಧಾನಿಯಾಗಿದ್ದಾಗ ಇಂದಿರಾ ಆವಾಸ್ ಯೋಜನೆಯಡಿ ಗ್ರಾಮಕ್ಕೆ 150 ಮನೆ ಮಂಜೂರಾಗಿದ್ದವು. ಆದರೆ, ಗ್ರಾಮ ಇಂದಿಗೂ ಗುಡಿಸಲು ಮುಕ್ತವಾಗಿಲ್ಲ.
ರಸ್ತೆಯೇ ಇಲ್ಲದ ಈ ಊರಿಗೆ ಕೆರೆಯಂಗಳದ ದಾರಿಯೇ ರಾಜ ಮಾರ್ಗ. ಮಳೆ ಬಂದು ಕೆರೆ ತುಂಬಿದರೆ ಬೆಟ್ಟ ಗುಡ್ಡದ ಕಲ್ಲು ಮುಳ್ಳಿನ ಹಾದಿಯಲ್ಲಿ ಜನರ ಪಯಣ. ಬೆಂಕಿ ಪೊಟ್ಟಣ ಖರೀದಿಗೂ ಏಳೆಂಟು ಕಿ.ಮೀ ದೂರದ ಊರಿಗೆ ನಡೆದು ಹೋಗಬೇಕಾದ ಗೋಳು.
ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿ ಘೋಷಣೆಯಾದರೂ ಇಂದಿರಾನಗರದ ಜನರಿಗೆ ಶೌಚಾಲಯದ ಪರಿಕಲ್ಪನೆಯೂ ಇಲ್ಲ. ಗುಡಿಸಲ ಹೊರಗೆ ಮರದ 4 ಗಳ ನೆಟ್ಟು ಸುತ್ತಲೂ ಹಳೆ ಸೀರೆ ಸುತ್ತಿದ ಬಯಲು ಶೌಚಗೃಹದಲ್ಲಿ ಬೆಳಕು ಹರಿಯುವ ಮುನ್ನವೇ ಸ್ನಾನ ಮುಗಿಸುವ ಹೆಣ್ಣುಮಕ್ಕಳ ಮನೋವೇದನೆ ಜನಪ್ರತಿನಿಧಿಗಳಿಗೆ ತಿಳಿಯದು.
ನೀರಿಗೆ ನಡಿಗೆ: ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಗ್ರಾಮದಲ್ಲಿ ಮೂಲಸೌಕರ್ಯ ಮರೀಚಿಕೆ. ನೀರಿಗಾಗಿ ನಾಲ್ಕು ದಶಕದ ಹಿಂದೆ ಗ್ರಾಮದಲ್ಲಿ ಹಾಕಿದ್ದ ಕೈ ಪಂಪ್‌ಗಳು ಕೆಟ್ಟು ಹೋಗಿವೆ. ಅಕ್ಕಪಕ್ಕದ ತಿಪ್ಪದೊಡ್ಡಿ ಹಾಗೂ ಕೆ.ಉಗಿಣಿ ಗ್ರಾಮದಲ್ಲಿನ ರೈತರ ಕೊಳವೆ ಬಾವಿಗಳೇ ಇಂದಿರಾನಗರಕ್ಕೆ ನೀರಿನ ಮೂಲಗಳು.
ತಲೆ ಮೇಲೆ ಬಿಂದಿಗೆ ಹೊತ್ತು, ಕಂಕುಳಲ್ಲಿ ಮಕ್ಕಳನ್ನು ಹೊತ್ತುಕೊಂಡು, ನೀರಿಗಾಗಿ ಕಿಲೋ ಮೀಟರ್‌ಗಟ್ಟಲೇ ನಡೆದು ಹೋಗುವ ಮಹಿಳೆಯರ ಬವಣೆಗೆ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಮನಸ್ಸು ಕರಗಿಲ್ಲ. ಗ್ರಾಮದಲ್ಲಿ ಆಸ್ಪತ್ರೆ ಸೌಲಭ್ಯವಿಲ್ಲ. ಯಾರಿಗಾದರೂ ಕಾಯಿಲೆಯಾದರೆ ನಡೆದೇ ದೂರದ ಆಸ್ಪತ್ರೆಗೆ ಹೋಗಬೇಕು. ರಸ್ತೆ ಸಮಸ್ಯೆ ಕಾರಣಕ್ಕೆ ಆಂಬುಲೆನ್ಸ್ ಚಾಲಕರು ಗ್ರಾಮಕ್ಕೆ ಬರಲು ಹಿಂದೇಟು ಹಾಕುತ್ತಾರೆ.
‘ಚುನಾವಣೆ ವೇಳೆ ಓಟಿಗಾಗಿ ಗ್ರಾಮಕ್ಕೆ ಬಂದಿದ್ದ ಜನಪ್ರತಿನಿಧಿಗಳು ಮತ್ತೆ ಇತ್ತ ತಿರುಗಿ ನೋಡಿಲ್ಲ. ಕೊಳವೆ ಬಾವಿ ಹಾಕಿಸುವುದಾಗಿ ಮಾತು ಕೊಟ್ಟಿದ್ದ ಅವರಿಗೆ ನಮ್ಮ ಶಾಪ ತಟ್ಟದೆ ಬಿಡದು’ ಎಂದು ಮಹಿಳೆಯರು ಈಗಲೂ ಶಪಿಸುತ್ತಾರೆ.
ಶಿಕ್ಷಣದಿಂದ ವಂಚಿತ: ಗ್ರಾಮವು ಕರ್ನಾಟಕದಲ್ಲಿದ್ದರೂ ಇಲ್ಲಿನ ಶೇ 90ರಷ್ಟು ಮಂದಿಗೆ ಕನ್ನಡ ಮಾತನಾಡಲು ಮತ್ತು ಬರೆಯಲು ಬರುವುದಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕವಾದರೂ ಗ್ರಾಮಕ್ಕೆ ವಿದ್ಯುತ್ ಸಂಪರ್ಕವಿಲ್ಲ. ಹಗಲು ಕಳೆದು ರಾತ್ರಿ ಆಯಿತೆಂದರೆ ಗುಡಿಸಲುಗಳಲ್ಲಿ ಸೀಮೆಎಣ್ಣೆ ಬುಡ್ಡಿ ದೀಪಗಳು ಮಿನುಗಲಾರಂಭಿಸುತ್ತವೆ. ಬುಡ್ಡಿ ದೀಪದ ಬೆಳಕಲ್ಲಿ ಮಕ್ಕಳ ಓದು ಸಾಗುತ್ತದೆ.
ಮಕ್ಕಳ ಕಲಿಕೆಗೆ ಗ್ರಾಮದಲ್ಲಿ ಅಂಗನವಾಡಿ, ಶಾಲೆಯಿಲ್ಲ. ತಿಪ್ಪದೊಡ್ಡಿ, ಕೆ.ಉಗಿಣಿಯ ಶಾಲೆಗೆ ನಡೆದು ಹೋಗಲಾಗದೆ ಸಾಕಷ್ಟು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಕೆರೆಯಂಗಳ ಹಾಗೂ ಬೆಟ್ಟ ಗುಡ್ಡಗಳ ನಡುವಿನ ದಾರಿಯಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಭಯಪಡುತ್ತಾರೆ. ಏಳೆಂಟು ಮಕ್ಕಳು ಶಾಲೆಯ ಮೆಟ್ಟಿಲು ಹತ್ತಿದ್ದು, ಗ್ರಾಮದಲ್ಲಿ ಶಿಕ್ಷಣದ ಗಾಳಿ ಬೀಸಲಾರಂಭಿಸಿದೆ.
ಇಡೀ ಗ್ರಾಮಕ್ಕೆ ವಿದ್ಯುತ್ ಇಲ್ಲ. ರಾತ್ರಿಯಾದರೆ ಭಯವಾಗುತ್ತದೆ. ಮೂಲಸೌಕರ್ಯದ ಭರವಸೆ ಕೊಟ್ಟು ಹೋಗುವ ರಾಜಕಾರಣಿಗಳು ತಮ್ಮ ಮಾತು ಮರೆತು ಬಿಡುತ್ತಾರೆ.
–ಅಕ್ಬರ್, ಇಂದಿರಾನಗರ ಗ್ರಾಮಸ್ಥ
ಓದಿ ವಿದ್ಯಾವಂತೆಯಾಗುವ ಕನಸಿದೆ. ಆದರೆ, ಗ್ರಾಮದಲ್ಲಿ ಶಾಲೆಯಿಲ್ಲ. ಪಕ್ಕದ ಹಳ್ಳಿಯ ಶಾಲೆಗೆ ಮೂರ್ನಾಲ್ಕು ಕಿಲೋ ಮೀಟರ್ ನಡೆದು ಹೋಗಬೇಕು.
–ಜ್ಯೋತಿ, ಇಂದಿರಾನಗರದ ಬಾಲಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.