ADVERTISEMENT

ಲೈಫ್‌ಡೌನ್ ಕಥೆಗಳು | ಇಲ್ಲಿ ಪ್ರತಿ ಮಳೆಗಾಲವೂ ಲಾಕ್‌ಡೌನ್‌!

ಉಡುಪಿ ಜಿಲ್ಲೆಯ ಹೆಬ್ರಿ ತಾಲ್ಲೂಕಿನ ಮಡಾಮಕ್ಕಿಯ ಎಡ್ಮಲೆ, ಹಂಜ, ಕಾರಿಮನೆ ಗ್ರಾಮಗಳ ದುಃಸ್ಥಿತಿ

ಬಾಲಚಂದ್ರ ಎಚ್.
Published 20 ಜೂನ್ 2020, 17:23 IST
Last Updated 20 ಜೂನ್ 2020, 17:23 IST
ಹೆಬ್ರಿ ತಾಲ್ಲೂಕಿನ ಮಡಾಮಕ್ಕಿಯ ಹಂಜ ಪ್ರಾಥಮಿಕ ಶಾಲೆ 
ಹೆಬ್ರಿ ತಾಲ್ಲೂಕಿನ ಮಡಾಮಕ್ಕಿಯ ಹಂಜ ಪ್ರಾಥಮಿಕ ಶಾಲೆ    

ಎಡ್ಮಲೆ (ಉಡುಪಿ): ‘ನಮ್ಮೂರಿನ ಜನರಿಗೆ ಕೊರೊನಾ ಭೀತಿ ಇಲ್ಲ, ನಕ್ಸಲರ ಆತಂಕವೂ ಇಲ್ಲ, ಆದರೆ, ಪ್ರತಿ ಮಳೆಗಾಲ ದುಃಸ್ವಪ್ನದಂತೆ ಕಾಡುತ್ತದೆ’ ಎನ್ನುತ್ತಲೇ ಸಮಸ್ಯೆಗಳನ್ನು ತೆರೆದಿಡುತ್ತಾ ಹೋದರು ಹೆಬ್ರಿ ತಾಲ್ಲೂಕಿನ ಮಡಾಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಡ್ಮಲೆಯ ನಾಗರಾಜ ಶೆಟ್ಟಿ.

ಪಶ್ಚಿಮಘಟ್ಟದ ತಪ್ಪಲಿನಲ್ಲಿ ಪ್ರಕೃತಿಯ ಸೌಂದರ್ಯವನ್ನೇ ಹೊದ್ದು ಮಲಗಿರುವ ಎಡ್ಮಲೆ ಗ್ರಾಮ, ಮಳೆಗಾಲದಲ್ಲಿ ಸಂಪೂರ್ಣವಾಗಿ ಲಾಕ್‌ಡೌನ್ ಆಗುತ್ತದೆ. ಇಲ್ಲಿನ ಜನರ ಬದುಕು ಕೂಡ ಮಳೆಗೆ ತೊಯ್ದು
ತೊಪ್ಪೆಯಾಗುತ್ತದೆ.

ರಸ್ತೆಯಿಲ್ಲ. ಹೀಗಾಗಿ ಬಸ್‌ ಸೌಲಭ್ಯವಿಲ್ಲ. ಮೊಬೈಲ್‌ ನೆಟ್‌ವರ್ಕ್‌ನ ಸುಳಿವಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರ, ಪ್ರೌಢಶಾಲೆಯೂ ಇಲ್ಲ. ಹೀಗೆ, ಕನಿಷ್ಠ ಸೌಲಭ್ಯಗಳೂ ಇಲ್ಲದೆ ನರಳುತ್ತಿವೆ ಪುಟ್ಟ ಗ್ರಾಮಗಳಾದ ಎಡ್ಮಲೆ, ಹಂಜ, ಕಾರಿಮಲೆ. ನಕ್ಸಲ್‌ಪೀಡಿತ ಈ ಪ್ರದೇಶಗಳಲ್ಲಿ ನಕ್ಸಲರ ಹೆಜ್ಜೆ ಗುರುತುಗಳು ಮಾಸಿವೆ. ಆದರೆ, ಅಭಿವೃದ್ಧಿಯ ತಂಗಾಳಿ ಮಾತ್ರ ಬೀಸಿಲ್ಲ.

ADVERTISEMENT

ಹೆಬ್ರಿ ಪೇಟೆಯಿಂದ 20 ಕಿ.ಮೀ ಸಾಗಿದರೆಮಡಾಮಕ್ಕಿ ಸಿಗುತ್ತದೆ. ಅಲ್ಲಿಂದ ಎಡ್ಮಲೆ, ಹಂಜ, ಕಾರಿಮಲೆಗೆ ಆರೇಳು ಕಿ.ಮೀ ಹೋಗಬೇಕು. ಚಿಕ್ಕ ಹಾಡಿಗಳಂತಿರುವ ಈ ಮೂರು ಪ್ರದೇಶಗಳು ಒಂದನ್ನೊಂದು ಬೆಸೆದುಕೊಂಡಿವೆ. ಇಲ್ಲಿಗೆ ಹೋಗಲು ಸರಿಯಾದ ರಸ್ತೆಯಿಲ್ಲ. ಕಡಿದಾದ ಕಾಡು ರಸ್ತೆಯಲ್ಲಿರುವ ಗುಂಡಿಗಳನ್ನು ದಾಟಿಕೊಂಡು ಪ್ರಯಾಸಪಟ್ಟು ಬೈಕ್‌ನಲ್ಲಿ ಹೋಗಬೇಕು.

ಸುರಿಯುತ್ತಿದ್ದ ಜಿಟಿ ಜಿಟಿ ಮಳೆಯಲ್ಲೇಮಡಾಮಕ್ಕಿ ಗ್ರಾಮ ಪಂಚಾಯಿತಿ ಸದಸ್ಯ ದಯಾನಂದ ಪೂಜಾರಿ ಅವರು ಅಪಾಯಕಾರಿ ಜಾಗಗಳ ಬಗ್ಗೆ ಎಚ್ಚರಿಕೆ ನೀಡುತ್ತಲೇ ಬೈಕ್‌ನಲ್ಲಿ ಎಡ್ಮಲೆಗೆ ಕರೆದೊಯ್ದರು. ಅಲ್ಲಿ ಎದುರಿಗೆ ಸಿಕ್ಕ ನಾಗರಾಜ ಶೆಟ್ಟಿ ಗ್ರಾಮದ ಅವ್ಯವಸ್ಥೆ ಕುರಿತು ಸಾಕ್ಷಾತ್ ದರ್ಶನ ಮಾಡಿಸಿದರು.

ಬಸ್‌ ಮುಖ ಕಂಡಿಲ್ಲ

ಎಡ್ಮಲೆ, ಹಂಜ, ಕಾರಿಮಲೆ ಗ್ರಾಮ ಬಸ್‌ನ ಮುಖವನ್ನೇ ಕಂಡಿಲ್ಲ. ಗ್ರಾಮಸ್ಥರು ಹೆಬ್ರಿಗೆ ಹೋಗಬೇಕಾದರೆ ಮಡಾಮಕ್ಕಿಗೆ ಬರಬೇಕು. ಇಲ್ಲಿನ ರಸ್ತೆಗಳ ಬಗ್ಗೆ ಅರಿವಿರುವ ಕೆಲವೇ ರಿಕ್ಷಾ ಚಾಲಕರು ಧೈರ್ಯಮಾಡಿ ಇಲ್ಲಿಗೆ ಬರುತ್ತಾರೆ. ಹೊಸಬರು ಬರುವುದಿಲ್ಲ; ಬಂದರೆ ಮತ್ತೆಂದೂ ಕಾಲಿಡುವುದಿಲ್ಲ ಎಂದು ರಸ್ತೆಗಳ ದುಃಸ್ಥಿತಿಯನ್ನು ಕಟ್ಟಿಕೊಟ್ಟರು.

‘ನಮ್ಮೂರಿಗೊಂದು ರಸ್ತೆ ಮಾಡಿಸಿಕೊಡಿ ಸ್ವಾಮಿ’ ಎಂದು ಸಿಕ್ಕಸಿಕ್ಕವರಿಗೆಲ್ಲ ಕೇಳಿದ್ದಾಯ್ತು. ಜನಪ್ರತಿನಿಧಿಗಳನ್ನು ಕೇಳಿದರೆ ಅರಣ್ಯ ಇಲಾಖೆಯತ್ತ ಬೊಟ್ಟು ಮಾಡುತ್ತಾರೆ. ಅರಣ್ಯ ಅಧಿಕಾರಿಗಳನ್ನು ಕೇಳಿದರೆ ಕಾಡಿನಲ್ಲಿ ರಸ್ತೆ ನಿರ್ಮಾಣಕ್ಕೆ ಕಾನೂನು ಅಡ್ಡಿ ಎನ್ನುತ್ತಾರೆ. ಈಗಿರುವ ರಸ್ತೆಗೆ ಸಿಮೆಂಟ್‌ ಹಾಕಿ ಆಂಬುಲೆನ್ಸ್‌ ಬರುವಷ್ಟಾದರೂ ದಾರಿ ಮಾಡಿಕೊಟ್ಟರೆ ಸಾಕು. ಇದಕ್ಕೂ ಕಾನೂನಿನ ಅಡ್ಡಿಯೇ’ ಎಂದು ಪ್ರಶ್ನಿಸಿದರು ಗ್ರಾಮದ ನಾಗಮ್ಮ ಶೆಟ್ಟಿ.

ಮಳೆಗಾಲದಲ್ಲಿ ಲೈಫ್‌ ಡೌನ್‌

ಮಳೆಗಾಲದಲ್ಲಿ ಈ ಗ್ರಾಮ ತಿಂಗಳ ಕಾಲ ಹೊರಜಗತ್ತಿನ ಸಂಪರ್ಕವನ್ನೇ ಕಡಿದುಕೊಳ್ಳುತ್ತದೆ. ವೃದ್ಧರು, ಗರ್ಭಿಣಿಯರು, ಬಾಣಂತಿಯರ ಆರೋಗ್ಯ ಹದಗೆಟ್ಟರೆ ಆರೇಳು ಕಿ.ಮೀವರೆಗೆ ಹೊತ್ತು ಆಸ್ಪತ್ರೆಗೆ ಸಾಗಬೇಕು. ರಸ್ತೆ ಇಲ್ಲ ಎಂದು ಆಂಬುಲೆನ್ಸ್‌ ಕೂಡ ಊರಿಗೆ ಬರುವುದಿಲ್ಲ. ‘ಮಳೆಗಾಲದಲ್ಲಿ ಆರೋಗ್ಯ ಕೆಡಬಾರದು ದೇವರೇ’ ಎಂದು ಕೈಮುಗಿದರು ಗ್ರಾಮಸ್ಥರು.

ನಾಟ್ ರೀಚೆಬಲ್‌

‘ಗ್ರಾಮದಲ್ಲಿ ಮೊಬೈಲ್ ನೆಟ್‌ವರ್ಕ್‌ ಇಲ್ಲ. ಸಂಬಂಧಿಗಳಿಗೆ ಸಾವಿನ ಸುದ್ದಿ ತಿಳಿಸಬೇಕಾದರೂ ನಾಲ್ಕೈದು ಕಿ.ಮೀ ದೂರ ಹೋಗಿ ಕರೆ ಮಾಡಬೇಕು. ಗಂಡನ ಮನೆ ಸೇರಿದ ಮಗಳೊಂದಿಗೂ ಮಾತನಾಡುವ ಭಾಗ್ಯ ನಮಗಿಲ್ಲ’ ಎಂದು ನೋವು ತೋಡಿಕೊಂಡರು.

ಕಷ್ಟಪಟ್ಟು ಓದಿ ನಗರಗಳಲ್ಲಿ ಒಳ್ಳೆಯ ಉದ್ಯೋಗ ಗಿಟ್ಟಿಸಿಕೊಂಡವರು ಇಲ್ಲಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ಮನೆಯಿಂದ ಕೆಲಸ ಮಾಡುವ ಅವಕಾಶ ಸಿಕ್ಕರೂ ನೆಟ್‌ವರ್ಕ್ ಇಲ್ಲದೆ, ದೂರದ ಸೈಬರ್ ಸೆಂಟರ್‌ನಲ್ಲಿ, ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ದಿನವಿಡೀ ಕುಳಿತು ಕೆಲಸ ಮಾಡಬೇಕಾಯಿತು ಎಂದು ಯುವಕ ನವೀನ್‌ ಶೆಟ್ಟಿ ಬೇಸರಪಟ್ಟರು.

‘ನೆಟ್‌ವರ್ಕ್ ಇಲ್ಲದ ಕಾರಣಕ್ಕೆ ಸಾಕಷ್ಟು ಮುಜುಗರ, ಕಿರಿಕಿರಿ ಅನುಭವಿಸಿದ್ದೇವೆ. ಸ್ವಉದ್ಯೋಗ ಮಾಡಲೂ ಸಾಧ್ಯವಾಗುತ್ತಿಲ್ಲ. ಪಡಿತರ ಪಡೆಯಲು ಒಟಿಪಿ ಸಮಸ್ಯೆ ಎದುರಾಗುತ್ತದೆ’ ಎಂದು ವ್ಯವಸ್ಥೆ ಬಗ್ಗೆ ಆಕ್ರೋಶ ಹೊರಹಾಕಿದರು.

ದಟ್ಟ ಕಾನನದಲ್ಲಿ ನಡೆದುಕೊಂಡೇ ಶಾಲೆಗೆ ಹೋಗಬೇಕು. ಹಂಜದಲ್ಲಿ ಪ್ರಾಥಮಿಕ ಶಾಲೆ ಮಾತ್ರ ಇದ್ದು, ಎಸ್ಸೆಸ್ಸೆಲ್ಸಿಗೆ ದೂರದ ಆರ್ಡಿಗೆ, ಪಿಯು ಕಾಲೇಜಿಗೆಂದರೆ ಹೆಬ್ರಿಗೆ ಹೋಗಬೇಕು. ಸಂಜೆ 5ಕ್ಕೆ ಶಾಲೆ–ಕಾಲೇಜು ಬಿಟ್ಟರೆ ಮನೆಗೆ ಬರುವಷ್ಟರಲ್ಲಿ ಕತ್ತಲಾಗಿರುತ್ತದೆ. ನಿರ್ಜನ ಪ್ರದೇಶದಲ್ಲಿ ರಾತ್ರಿಯ ಹೊತ್ತು ಓಡಾಡುವುದು ಕಷ್ಟ ಎಂದು ಹಲವರು ಶಾಲೆಯನ್ನೇ ಬಿಟ್ಟಿದ್ದಾರೆ.

‘ದಶಕಗಳಿಂದ ಕೃಷಿ ಮಾಡುತ್ತಿದ್ದರೂ ಜಮೀನಿಗೆ ಹಕ್ಕುಪತ್ರ ಸಿಕ್ಕಿಲ್ಲ. ಇದರಿಂದ ಬ್ಯಾಂಕ್‌ನಲ್ಲಿ ಸಾಲವೂ ಸಿಗುತ್ತಿಲ್ಲ. ಪ್ರತಿ ಚುನಾವಣೆಯ ಸಂದರ್ಭ ನಮಗೆಲ್ಲ ಸಿಕ್ಕಿದ್ದು ಭರವಸೆಗಳು ಮಾತ್ರ. ಯಾವಾಗ ಒಕ್ಕೆಲೆಬ್ಬಿಸುತ್ತಾರೊ ಎಂಬ ಆತಂಕ ಸದಾ ಕಾಡುತ್ತಿರುತ್ತದೆ’ ಎಂದು ಗ್ರಾಮದವರೆಲ್ಲ ನಿಟ್ಟುಸಿರುಬಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.