ಮೈಸೂರು: ‘ಶಬರಿಮಲೆ ವಿಚಾರದಲ್ಲಿ ಅನವಶ್ಯಕವಾಗಿ ಮೂಗು ತೂರಿಸುತ್ತಿರುವ ಎಡಬಿಡಂಗಿ ಎಡಪಂಥೀಯರು ಹಾಗೂ ನಾಸ್ತಿಕರಿಗೆ ಧಾರ್ಮಿಕ ಸೂಕ್ಷ್ಮಗಳು ಅರ್ಥವಾಗುವುದಿಲ್ಲ’ ಎಂದು ಸಂಸದ ಪ್ರತಾಪ ಸಿಂಹ ಇಲ್ಲಿ ಶನಿವಾರ ಕುಟುಕಿದರು.
‘ಹಿಂದೂ ಧರ್ಮವು ನಂಬಿಕೆಗಳ ಆಧಾರದ ಮೇಲೆ ರೂಪಿತಗೊಂಡಿದೆ. ಅಯ್ಯಪ್ಪನು ಕಟ್ಟಾ ಬ್ರಹ್ಮಚಾರಿಯಾಗಿದ್ದ ಕಾರಣ 10ರಿಂದ 50 ವರ್ಷ ವಯಸ್ಸಿನ ಹೆಣ್ಣುಮಕ್ಕಳು ಪ್ರವೇಶಿಸುವಂತಿಲ್ಲ ಎಂಬ ಆಚರಣೆ ಜಾರಿಯಲ್ಲಿದೆ. ಇದನ್ನು ಪ್ರಶ್ನಿಸಿ ಏನು ಪ್ರಯೋಜನ. ಅಲ್ಲದೇ, ಮುಟ್ಟನ್ನು ಹಿಂದೂಧರ್ಮದಲ್ಲಿ ಕೀಳೆಂದು ಪರಿಗಣಿಸಿಯೇ ಇಲ್ಲ. ಕಾಮಾಕ್ಯ ದೇವಸ್ಥಾನದಲ್ಲಿ ಮುಟ್ಟನ್ನು ಪೂಜಿಸುತ್ತಾರೆ. ಇದು ಎಡಪಂಥೀಯರ ಗಮನಕ್ಕೆ ಬರುವುದಿಲ್ಲವೆ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಶಬರಿಮಲೆಗೆ ಮುಸ್ಲಿಂ ಮಹಿಳೆಯರಿಗೆ ಬುರ್ಕಾ ಹಾಕಿಸಿಕೊಂಡು ಕರೆತರುವ ಪ್ರಯತ್ನ ನಡೆಸಿದ್ದಾರೆ. ಮಸೀದಿ, ಚರ್ಚುಗಳಿಗೆ ಹಿಂದೂಗಳಿಗೆ ಪೂಜೆ ಮಾಡಲು ಬಿಡುತ್ತಾರೆಯೆ? ಕಮ್ಯುನಿಸ್ಟರು ನಂಬಿಕೆ ಒಡೆಯುವ ಪ್ರಯತ್ನ ಮಾಡುತ್ತಿರುವುದು ದುರದೃಷ್ಟಕರ ಎಂದರು.
ಮಹಿಳೆಯರಿಗೆ ಸಮಾನತೆ ನೀಡುವಂತೆ ಇತರ ಧರ್ಮೀಯರು ಪಾಠ ಹೇಳಬೇಕಿಲ್ಲ. ಹಿಂದೂ ಧರ್ಮವು ಮಹಿಳೆಯನ್ನು ದೇವತೆಯ ಸ್ಥಾನದಲ್ಲಿಟ್ಟು ಪೂಜಿಸುವ ಏಕೈಕ ಧರ್ಮವಾಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.