ಕೂಡಲಸಂಗಮ (ಬಾಗಲಕೋಟೆ): ‘ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟವು ಯಾವ ಧರ್ಮವನ್ನೂ ಒಡೆದಿಲ್ಲ. ಮತಗಟ್ಟೆ ರಾಜಕಾರಣದಿಂದಾಗಿ ಹಾಳಾಯಿತು. ಪ್ರತ್ಯೇಕ ಧರ್ಮದ ಮಾನ್ಯತೆ ಸಿಗುವವರೆಗೆ ಕಾನೂನು ಹೋರಾಟ ಮುಂದುವರೆಯಲಿದೆ’ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಜಾಮದಾರ ಹೇಳಿದರು.
ಕೂಡಲಸಂಗಮದ ಬಸವ ಧರ್ಮ ಪೀಠ ಆವರಣದಲ್ಲಿ ಶುಕ್ರವಾರ 36ನೇ ಶರಣ ಮೇಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ಬೇಡಿಕೆಯ ಆಗ್ರಹ ಇರುವುದು ಯಾವುದೇ ರಾಜಕೀಯ ಪಕ್ಷದ ಜತೆಗೆಲ್ಲ. ಸರ್ಕಾರದೊಂದಿಗೆ ಇದೆ ಎಂದರು.
ಹೋರಾಟದಲ್ಲಿ ರಾಜಕೀಯ ಪಕ್ಷಗಳು ನಗಣ್ಯ. ಮತಗಟ್ಟೆ ರಾಜಕಾರಣ ಬಿಟ್ಟು, ತಾತ್ವಿಕ ರಾಜಕಾರಣಕ್ಕೆ ಬನ್ನಿ. ತೆಲಂಗಾಣ, ಮಹಾರಾಷ್ಟ್ರದ ಸಂಸದರು ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ನೀಡಬೇಕು ಎಂದು ಸಂಸತ್ತಿನಲ್ಲಿ ಮಾತನಾಡುತ್ತಾರೆ. ರಾಜ್ಯದ 28 ಜನ ಸಂಸದರಿಗೆ ಏನಾಗಿದೆ ಎಂದು ಪ್ರಶ್ನಿಸಿದರು.
ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಶರಣ ಮೇಳ ಉದ್ಘಾಟಿಸಿದರು. ಸಾಣೆಹಳ್ಳಿ ಸಿರಿಗೇರಿ ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ, ಬಸವ ಧರ್ಮ ಪೀಠದ ಅಧ್ಯಕ್ಷೆ ಮಾತೆ ಗಂಗಾದೇವಿ, ಉಪಾಧ್ಯಕ್ಷ ಮಹದೇಶ್ವರ ಸ್ವಾಮೀಜಿ ಇದ್ದರು.
ಇದೇ ಸಂದರ್ಭದಲ್ಲಿ ತೇಜಸ್ವಿನಿ ಅನಂತಕುಮಾರ ಅವರಿಗೆ ₹1 ಲಕ್ಷ ನಗದು ಹೊಂದಿದ ಬಸವಾತ್ಮಜೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಕೂಡಲಸಂಗಮ ಸಮೀಪದ ಹೂವನೂರ ಬಳಿ ನಡೆದ ಪರ್ಯಾಯ ಸ್ವಾಭಿಮಾನಿ ಶರಣ ಮೇಳವನ್ನು ಸ್ವಾಭಿಮಾನಿ ಶರಣ ಮೇಳ ಸಮಿತಿಯ ಅಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಉದ್ಘಾಟಿಸಿದರು. ಬೀದರ ಬಸವ ಮಂಟಪದ ಮಾತೆ ಸತ್ಯಾದೇವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.