ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿರುವ ದೇವಗಡ ನಡುಗಡ್ಡೆಯೇ ‘ಲೈಟ್ ಹೌಸ್ ದ್ವೀಪ’ ಎಂದು ಪ್ರಸಿದ್ಧವಾಗಿದೆ. 20 ಎಕರೆಗೂ ಅಧಿಕ ವಿಸ್ತೀರ್ಣವಾಗಿರುವ ಈ ನಡುಗಡ್ಡೆಯು ಮೂಲ ಸೌಕರ್ಯಗಳ ಕೊರತೆಯ ನಡುವೆಯೂ ಮುದ ನೀಡುತ್ತದೆ.
ಬ್ರಿಟಿಷರು ನಿರ್ಮಿಸಿದ ಈ ದೀಪಸ್ತಂಭದ ತುದಿಯಲ್ಲಿ ಆಗಿನ ಕಾಲದಲ್ಲಿ ಸೀಮೆಎಣ್ಣೆ ದೀಪ ಉರಿಸಲಾಗುತ್ತಿತ್ತು. ಈಗ ಸೌರ ವಿದ್ಯುತ್ ಬಳಕೆ ಮಾಡಿಕೊಂಡು, ಪ್ರಖರವಾದ ಬೆಳಕು ಸೂಸುವ ಬಲ್ಬ್‌ಗಳ ಬಳಕೆಯಾಗುತ್ತಿದೆ. ಸ್ಫಟಿಕದ ಫಲಕಗಳ ಮೂಲಕ ಬೆಳಕು ಹೊರ ಬಂದು 20 ನಾಟಿಕಲ್ ಮೈಲು ದೂರದವರೆಗೆ ಕಾಣಿಸುತ್ತದೆ.
ವಿವಿಧ ಮಾಪಕಗಳನ್ನು ತಯಾರಿಸುವುದರಲ್ಲಿ ಪ್ರಸಿದ್ಧವಾಗಿದ್ದ ಬ್ರಿಟಿಷ್ ಕಂಪನಿ ‘ಲಾರೆನ್ಸ್ ಆ್ಯಂಡ್ ಮಾಯೋ’ ನಿರ್ಮಾಣದ ‘ಬ್ಯಾರೋ ಮೀಟರ್’, ದುರ್ಬೀನು ಈಗಲೂ ಇಲ್ಲಿವೆ. ಅಲ್ಲದೇ ತಂತ್ರಜ್ಞಾನದ ಬಳಕೆಗೂ ಮೊದಲು ನಿಶಾನೆ ತೋರಲು ಬಳಸುತ್ತಿದ್ದ ಸೀಮೆಎಣ್ಣೆ ದೀಪಗಳನ್ನೂ ಇಲ್ಲಿ ಜತನದಿಂದ ಕಾಪಿಡಲಾಗಿದೆ. ಬ್ರಿಟಿಷರ ಕಾಲದಲ್ಲಿ ಬಳಕೆಯಾಗುತ್ತಿದ್ದ ಫಿರಂಗಿಯೊಂದನ್ನು ದೀಪಸ್ತಂಭದ ಆವರಣದಲ್ಲಿ ಸ್ಥಾಪಿಸಲಾಗಿದೆ.
ಸ್ತಂಭದ ತುದಿಗೆ ತಲುಪಿದಾಗ ವಿಶಾಲವಾಗಿ ಕಾಣುವ, ನೀಲಿ ಬಣ್ಣದ ಸಮುದ್ರ ಮಂತ್ರಮುಗ್ಧಗೊಳಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.