ಬೆಂಗಳೂರು:ನಗರಕ್ಕೆ ಲಿಂಗನಮಕ್ಕಿ ಜಲಾಶಯಯಿಂದ ನೀರು ತರುವ ಬೃಹತ್ ಯೋಜನೆಗೆ ಡಿಪಿಆರ್ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.
ಬೆಂಗಳೂರು ನಗರದ ನೀರಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಲಿಂಗನಮಕ್ಕಿ ಜಲಾಶಯದಿಂದ ನೀರನ್ನು ತರುವ ಯೋಜನೆ ರೂಪುರೇಷೆಗಳ ಕುರಿತು ಇಂದು ಬಿಎಂಆರ್‌ಡಿಎ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.
ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ. ಪ್ರಸ್ತುತ ಕಾವೇರಿಯಿಂದ 1400 ಎಂಎಲ್‌ಡಿ ನೀರನ್ನು ನಗರಕ್ಕೆ ಹರಿಸಲಾಗುತ್ತಿದೆ. ಆದಾಗ್ಯೂ ನಗರದಲ್ಲಿ ನೀರಿನ ಸಮಸ್ಯೆ ಇದೆ. ಕೆಲವೆಡೆ ಕಾವೇರಿ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಕಾವೇರಿ ಐದನೇ ಹಂತದ ಯೋಜನೆಯಿಂದ ಹೆಚ್ಚೆಂದರೆ 800 ಎಂಎಲ್‌ಡಿ ನೀರು ತರಬಹುದು. ಆದರೂ ನೀರಿನ ಸಮಸ್ಯೆ ಬಗೆಹರಿಯುವುದಿಲ್ಲ. ಪ್ರಸ್ತುತ ಕಾವೇರಿ ಮೊದಲ ಹಾಗೂ ಎರಡನೇ ಹಂತದಿಂದಲೂ ನೀರಿನ ಪ್ರಮಾಣ ಇಳಿಕೆಯಾಗಿದೆ. ಹೀಗಾಗಿ ಇತರೆ ಮೂಲದಿಂದ ನೀರು ತರುವ ಅನಿವಾರ್ಯತೆ ಇದೆ.
ಈ ಹಿಂದೆ ತ್ಯಾಗರಾಜ್ ಸಮಿತಿಯು ಲಿಂಗನಮಕ್ಕಿಯಿಂದಲೂ ನೀರು ಹರಿಸಬಹುದು ಎಂದು ವರದಿ ನೀಡಿದ್ದರು. ಈ ವರದಿಯನ್ನು ಅಧ್ಯಯನ ನಡೆಸಿ ನೀರು ತರುವ ಸಾಧ್ಯತೆಯನ್ನು ಕಂಡುಕೊಳ್ಳಲಾಗಿದೆ. ಹೀಗಾಗಿ ಡಿಪಿಆರ್ ಮಾಡಲು ಸೂಚಿಸಲಾಗಿದೆ.
ಡಿಪಿಆರ್ ಬಳಿಕ ಯೋಜನೆಯ ಸಾಧಕ ಬಾಧಕಪರಿಶೀಲಿಸಲಾಗುವುದು. ಪರಿಸರ, ನೀರು ಪಂಪ್ ಮಾಡಲು ಇರುವ ಸವಾಲುಗಳ ಬಗ್ಗೆ ಅವಲೋಕಿಸಲಾಗುವುದು ಎಂದರು.
ಲಿಂಗನಮಕ್ಕಿಯು ಬೆಂಗಳೂರಿಗೆ 300 ಕಿ.ಮೀ. ದೂರವಿದೆ. ನೀರು ತರಲು ₹12 ಸಾವಿರ ಕೋಟಿ ವೆಚ್ಚ ಆಗಬಹುದು ಎಂದು ಅಂದಾಜಿಸಲಾಗಿದೆ. ಆದರೆ ವೆಚ್ಚದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಮೊದಲ ಹಂತದಲ್ಲಿ 10 ಟಿಎಂಸಿ ನೀರನ್ನು ತರಲು ಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಲಿಂಗನಮಕ್ಕಿ ನೀರು ಕೇವಲ ವಿದ್ಯುತ್ ಉತ್ಪಾದನೆಗಷ್ಟೇ ಬಳಕೆಯಾಗುತ್ತಿದೆ. ಬಳಿಕ ಈ ನೀರು ಸಮುದ್ರದ ಪಾಲಾಗುತ್ತಿದೆ. ಈ ಜಲಾಶಯದಿಂದ ಯಾವುದೇ ನೀರಾವರಿ ಯೋಜನೆ ಕೈಗೊಂಡಿಲ್ಲ. ಹೀಗಾಗಿ ಈ ಮೂಲದಿಂದ ನೀರು ತರುವುದರಿಂದ ಯಾವುದೇ ರೈತರಿಗೂ ಸಮಸ್ಯೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಎತ್ತಿನಹೊಳೆ ಯೋಜನೆ ಮೂಲಕ 2.5 ಟಿಎಂಸಿ ನೀರು ತರಲಾಗುತ್ತದೆ. ಇಷ್ಟು ಬೆಂಗಳೂರಿಗೆ ಸಾಲದು. ಹೀಗಾಗಿ ಲಿಂಗನಮಕ್ಕಿಯಿಂದಲೂ ನೀರು ತರಲು ಯೋಜಿಸಲಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.