ಮೈಸೂರು: ‘ನಮ್ಮ ಸರ್ಕಾರದ ಬಗ್ಗೆ ಹೊಟ್ಟೆಕಿಚ್ಚು ಇರುವವರು ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಿದ್ದಾರೆ. ಈ ಪರಿಣಾಮವೇ ಅವರು, ‘ಈ ಸರ್ಕಾರದಲ್ಲಿ ವೀರಶೈವ ಲಿಂಗಾಯತ ಅಧಿಕಾರಿಗಳ ಸ್ಥಿತಿ ನಾಯಿಪಾಡಾಗಿದೆ’ ಎಂಬ ಹೇಳಿಕೆ ನೀಡಿದ್ದಾರೆ’ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ತಿಳಿಸಿದರು.
ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಆ ಸಮಾಜದ ಅಧಿಕಾರಿಗಳಿಗೆ ಆಯಕಟ್ಟಿನ ಹುದ್ದೆಗಳನ್ನು ನೀಡಲಾಗಿದೆ. ಈ ಬಗ್ಗೆ ಅಂಕಿ–ಅಂಶಗಳಿವೆ. ಶೀಘ್ರದಲ್ಲೇ ಅವರನ್ನು ಖುದ್ದು ಭೇಟಿಯಾಗಿ ಮನವರಿಕೆ ಮಾಡಿಕೊಡಲಿದ್ದೇನೆ’ ಎಂದು ಹೇಳಿದರು.
‘ಶಾಮನೂರು ಹೇಳಿಕೆ ಬಿಜೆಪಿ ಹಾಗೂ ಜೆಡಿಎಸ್‌ನವರಿಗೆ ಆಹಾರವಾಗಿದೆ. ಇದು ಕಾರ್ಯಕರ್ತರ ನೋವಿಗೆ ಕಾರಣವಾಗಿದೆ. ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಬಹಳಷ್ಟು ಶ್ರಮಿಸಿದ್ದಾರೆ. ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಹೋರಾಟ ಮಾಡಿದ್ದಾರೆ. ಆದರೆ, ಅವರಾರಿಗೂ ಅಧಿಕಾರ ಸಿಕ್ಕಿಲ್ಲ. ಅಧಿಕಾರ ಅನುಭವಿಸುತ್ತಿರುವವರು ತಾಳ್ಮೆಯಿಂದ ಇರಬೇಕು. ಎಚ್ಚರಿಕೆಯಿಂದ ಹೇಳಿಕೆ ಕೊಡಬೇಕು. ಶಾಮನೂರು ಅವರ ಬಗ್ಗೆ ಪಕ್ಷದಲ್ಲಿ ಬಹಳಷ್ಟು ಗೌರವವಿದೆ. ಆದರೆ, ಅವರು ಸತ್ಯಾಸತ್ಯತೆ ಮರೆ ಮಾಚಿದವರು ನೀಡಿದ ಮಾಹಿತಿ ನಂಬಿ ಬಹಿರಂಗವಾಗಿ ಹೇಳಿಕೆ ನೀಡಿರುವುದು ಸರಿಯಲ್ಲ’ ಎಂದರು.
ಅಂಕಿ–ಅಂಶ ಬಿಡುಗಡೆ:
‘ವಿವಿಧ ಇಲಾಖೆಗಳಲ್ಲಿ 40 ಮುಖ್ಯ ಎಂಜಿನಿಯರ್‌ಗಳಿದ್ದು, ಅದರಲ್ಲಿ 10 ಮಂದಿ ಲಿಂಗಾಯತರು, 9 ಒಕ್ಕಲಿಗರು ಹಾಗೂ ನಾಲ್ವರು ಕುರುಬರಿದ್ದಾರೆ. ರಾಜ್ಯದಲ್ಲಿ ಸರ್ಕಾರದ ಅಧೀನದಲ್ಲಿ 41 ವಿಶ್ವವಿದ್ಯಾಲಯಗಳಿದ್ದು, 14 ಕುಲಪತಿಗಳು ವೀರಶೈವ ಲಿಂಗಾಯತರು. ಐಎಎಸ್ ಅಧಿಕಾರಿಗಳು ರಾಜ್ಯದಲ್ಲಿ 272 ಮಂದಿ ಇದ್ದು, ಅದರಲ್ಲಿ 87 ಜನ ಕರ್ನಾಟಕ ಕೇಡರ್‌ನವರು. ಇವರಲ್ಲಿ 22 ಜನ ಲಿಂಗಾಯತರು. ಅವರೆಲ್ಲರೂ ಆಯಕಟ್ಟಿನ ಹುದ್ದೆಗಳಲ್ಲೇ ಇದ್ದಾರೆ. ಮೂವರು ಜಿಲ್ಲಾಧಿಕಾರಿಗಳಾಗಿದ್ದಾರೆ. ಜಿಲ್ಲಾ ಪಂಚಾಯಿತಿ ಸಿಇಒಗಳ ಹುದ್ದೆಯಲ್ಲೂ ಆದ್ಯತೆ ಕೊಡಲಾಗಿದೆ’ ಎಂದು ಮಾಹಿತಿ ನೀಡಿದರು.
‘439 ಕೆಎಎಸ್ ಅಧಿಕಾರಿಗಳಲ್ಲಿ 102 ಮಂದಿ ಲಿಂಗಾಯತರಿದ್ದಾರೆ. ರಾಜ್ಯದಲ್ಲಿ 53 ಎಸಿಗಳ ಹುದ್ದೆಗಳಿದ್ದು, ಲಿಂಗಾಯತರು 12, ಒಕ್ಕಲಿಗರು 9 ಹಾಗೂ ಕುರುಬರು ಮೂವರಿದ್ದಾರೆ. ಗೃಹ ಮಂಡಳಿ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಮೊದಲಾದವುಗಳ ಆಯುಕ್ತರು ಲಿಂಗಾಯತರೇ. ಹಲವು ಮಂದಿ ವ್ಯವಸ್ಥಾಪಕ ನಿರ್ದೇಶಕರಿದ್ದಾರೆ. 9 ಎಸ್ಪಿಗಳು ಲಿಂಗಾಯತರಾಗಿದ್ದಾರೆ. ನಮ್ಮ ಸರ್ಕಾರದಲ್ಲಿ ಯಾವ ಜಾತಿಯನ್ನೂ ಕಡೆಗಣಿಸಿಲ್ಲ. ಇದು ಕುರುಬರ ಸರ್ಕಾರವೆಂದು ಬಿಂಬಿಸುವುದು ತಪ್ಪಾಗುತ್ತದೆ’ ಎಂದು ತಿಳಿಸಿದರು.
‘ಯಾರಿಗಾದರೂ ಹೊಟ್ಟೆ ಕಿಚ್ಚಿದ್ದರೆ ನಾಲ್ಕು ಗೋಡೆಯೊಳಗೆ ಚರ್ಚಿಸಿ ಬಗೆಹರಿಸಿಕೊಳ್ಳಲಿ. ಪಕ್ಷ ದೊಡ್ಡದು ಎಂಬುದನ್ನು ಮರೆಯಬಾರದು. ಖುಷಿಗೋ, ತೆವಲಿಗೋ ಅಥವಾ ತೀಟೆಗೋ ಬಿಜೆಪಿ ಮತ್ತು ಜೆಡಿಎಸ್‌ನವರಿಗೆ ಆಹಾರ ಕೊಡಬೇಡಿ. ಸಮಸ್ಯೆ ಇದ್ದರೆ ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ಜೊತೆ ಮಾತನಾಡಿ ಪರಿಹರಿಸಿಕೊಳ್ಳಿ’ ಎಂದು ಕೋರಿದರು.
‘ಬಿಜೆಪಿ ಸರ್ಕಾರದಲ್ಲಿ ಎಷ್ಟು ಮಂದಿ ವೀರಶೈವ ಲಿಂಗಾಯತರಿಗೆ ಆಯಕಟ್ಟಿನ ಹುದ್ದೆ ಕೊಡಲಾಗಿತ್ತು ಎನ್ನುವುದನ್ನು ಆ ಪಕ್ಷದ ಮುಖಂಡರು ಬಹಿರಂಗಪಡಿಸಲಿ’ ಎಂದು ಸವಾಲು ಹಾಕಿದರು.
‘ಅಧಿಕಾರಿಗಳನ್ನು ಹುದ್ದೆಗಳಿಗೆ ನಿಯೋಜನೆಯು ರಾಜಕೀಯ ನಾಮನಿರ್ದೇಶನ ಅಲ್ಲ. ಶ್ರೇಣಿ ಆಧರಿಸಿ ಕೊಡಲಾಗುತ್ತದೆ. ಒಂದರ್ಥದಲ್ಲಿ ಶಿವಶಂಕರಪ್ಪ ಅವರ ಹೇಳಿಕೆ ಸಹಕಾರಿಯೇ ಆಯಿತು. ಯಾರಿಗೆ ಎಷ್ಟು ಅವಕಾಶ ಸಿಕ್ಕಿದೆ ಎನ್ನುವುದು ಈ ಬಹಿರಂಗವಾಗುತ್ತಿದೆ’ ಎಂದರು.
‘ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಅವರಿಗೆ ತಾಕತ್ತಿದ್ದರೆ ಕಾವೇರಿ ವಿವಾದದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಮಾತನಾಡಲಿ. ಕಾವೇರಿ ಕಣಿವೆಯ ಪರಿಸ್ಥಿತಿ ಮನವರಿಕೆ ಮಾಡಿಕೊಡಲಿ’ ಎಂದು ಸವಾಲು ಹಾಕಿದರು. ‘ಮುಂದಿನ ದಿನಗಳಲ್ಲಿ ನಾವು ಬಿಜೆಪಿ ಸಂಸದರ ವಿರುದ್ಧ ಪ್ರತಿಭಟಿಸುತ್ತೇವೆ’ ಎಂದು ತಿಳಿಸಿದರು.
‘ಎಚ್.ಡಿ. ಕುಮಾರಸ್ವಾಮಿ ಅವರು ಜೆಡಿಎಸ್ ಬದಲಿಗೆ ‘ಜಿಡಿಸಿ’ (ಜನತಾದಳ ಕಮ್ಯುನಲ್) ಎಂದು ಬದಲಾಯಿಸಿಕೊಳ್ಳಲಿ’ ಎಂದು ವ್ಯಂಗ್ಯವಾಡಿದರು.
ಪಕ್ಷದ ಮುಖಂಡರಾದ ಬಿ.ಎಂ. ರಾಮು, ಗಿರೀಶ್ ಹಾಗೂ ಮಹೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.