ADVERTISEMENT

ಲಿಂಗಾಯತ ಸ್ವತಂತ್ರ ಧರ್ಮವೆಂಬುದು ಶತಸಿದ್ಧ: ಬಸವಲಿಂಗ ಪಟ್ಟದ್ದೇವರು

ಸಾಣೇಹಳ್ಳಿ ಶ್ರೀ ವಿರುದ್ಧ ಪತ್ರಕರ್ತ ವಿಶ್ವೇಶ್ವರ ಭಟ್‌ ಲೇಖನಕ್ಕೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಖಂಡನೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2024, 12:45 IST
Last Updated 17 ಆಗಸ್ಟ್ 2024, 12:45 IST
<div class="paragraphs"><p>ಬಸವಲಿಂಗ ಪಟ್ಟದ್ದೇವರು</p></div>

ಬಸವಲಿಂಗ ಪಟ್ಟದ್ದೇವರು

   

ಭಾಲ್ಕಿ (ಬೀದರ್‌): ‘ಪತ್ರಕರ್ತ ವಿಶ್ವೇಶ್ವರ ಭಟ್‍ ಅವರು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ‘ಗೊಡ್ಡುಪುರಾಣ’ ಎಂಬ ಪದ ಬಳಸಿ ಬರೆದಿರುವ ಲೇಖನವನ್ನು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ತೀವ್ರವಾಗಿ ಖಂಡಿಸಿದೆ.

ವಿಶ್ವೇಶ್ವರ ಭಟ್ ಅವರು ಹಗುರವಾಗಿ ಸ್ವಾಮೀಜಿ ವಿರುದ್ಧ ಬರೆದಿರುವುದು ಸರಿಯಲ್ಲ. ಇದು ಭಟ್ಟರ ಪತ್ರಿಕಾ ಧರ್ಮಕ್ಕೂ, ಅವರ ವ್ಯಕ್ತಿತ್ವಕ್ಕೂ ಶೋಭೆ ತರುವಂತಹದ್ದಲ್ಲ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಒಕ್ಕೂಟದ ಅಧ್ಯಕ್ಷರೂ ಆಗಿರುವ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‌ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಶನಿವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಲಿಂಗಾಯತರದು ಪುರಾಣ ಸಂಸ್ಕೃತಿಯಲ್ಲ, ವಚನ ಸಂಸ್ಕೃತಿ. ಬಸವಾದಿ ಶರಣರು 12ನೇ ಶತಮಾನದಲ್ಲಿ ಸ್ಥಾಪಿಸಿದ ‘ಲಿಂಗಾಯತ’ ಸ್ವತಂತ್ರ ಧರ್ಮ ಎಂಬುದು ಶತಸಿದ್ಧ. ಇದರಲ್ಲಿ ಯಾವುದೇ ಸಂಶಯ, ಸಂದೇಹವಿಲ್ಲ. 12ನೇ ಶತಮಾನದ ಶರಣರಿಂದ ಇತ್ತೀಚಿನ ಸಂಶೋಧಕರು, ಸಾಹಿತಿಗಳು, ಮಠಾಧೀಶರು ಮತ್ತು ಈ ನಾಡಿನ ಬಹುದೊಡ್ಡ ಸಮಾಜದ ಅನುಯಾಯಿಗಳು ನಂಬಿಕೊಂಡು ಬಂದಿದ್ದಾರೆ. ಇದನ್ನೇ ಪಂಡಿತಾರಾಧ್ಯ ಶಿವಾಚಾರ್ಯರು ವೇದಿಕೆಯ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಅವರ ಮಾತುಗಳು ನೂರಕ್ಕೆ ನೂರು ಸತ್ಯವಾಗಿವೆ. ಅವರು ತಮ್ಮ ಆಯುಷ್ಯದುದ್ದಗಲಕ್ಕೂ ಈ ವಿಷಯವನ್ನು ಪ್ರಸ್ತಾಪಿಸುತ್ತ ಲಿಂಗಾಯತರಲ್ಲಿ ಜಾಗೃತಿ ಉಂಟು ಮಾಡುವ ಕಾರ್ಯ ಮಾಡುತ್ತ ಬಂದಿದ್ದಾರೆ ಎಂದು ತಿಳಿಸಿದ್ದಾರೆ.

ಸ್ವಾಮೀಜಿ ಅವರು ಹೇಳಿರುವ ಮಾತುಗಳು ಹೊಸದೇನಲ್ಲ. ಅವರ ಹೇಳಿಕೆಯನ್ನು ನಮ್ಮ ಒಕ್ಕೂಟ ಒಗ್ಗಟ್ಟಿನಿಂದ ಬೆಂಬಲಿಸುತ್ತದೆ. ವಚನಗಳು ಯಾವ ಚಿಂತನೆಗಳನ್ನು ಹೇಳುತ್ತವೆಯೋ ಅದನ್ನೇ ಸಾಣೇಹಳ್ಳಿಯ ಸ್ವಾಮೀಜಿ ಧೈರ್ಯವಾಗಿ ಹೇಳಿದ್ದಾರೆ. ಅದನ್ನು ಅಪವ್ಯಾಖ್ಯಾನ ಮಾಡುವ ನೆಪದಲ್ಲಿ ಭಟ್ಟರು ತಮ್ಮ ಗಣೇಶ ಪುರಾಣವನ್ನು ಮುಂದುವರೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

2017 ರಲ್ಲಿ ಲಿಂಗಾಯತ ಸ್ವತಂತ್ರ ಧರ್ಮವೆಂಬ ಹೋರಾಟ ಇಡೀ ದೇಶದಲ್ಲಿಯೇ ಸಂಚಲನವನ್ನುಂಟು ಮಾಡಿರುವುದು ಪತ್ರಕರ್ತರಾದ ವಿಶ್ವೇಶ್ವರ ಭಟ್ ಅವರಿಗೆ ಗೊತ್ತಿಲ್ಲವೇ? ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್‌ ಅಧ್ಯಕ್ಷತೆಯಲ್ಲಿ ರಚಿಸಿದ ಸಮಿತಿ ಲಿಂಗಾಯತ ಧರ್ಮವು ಸ್ವತಂತ್ರ ಧರ್ಮವೆಂದು ವರದಿ ನೀಡಿತ್ತು. ಅದನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಕೂಡ ಮಾಡಿತು. ಆ ಸಂದರ್ಭದಲ್ಲಿ ಸ್ವತಂತ್ರ ಧರ್ಮ ಹೋರಾಟದ ಪರವಾಗಿ ಬರಹಗಳು ಬರೆದ ಭಟ್ಟರು ಇದೀಗ ಈ ರೀತಿ ಮಾತನಾಡುತ್ತಿರುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವಂತಹದ್ದಲ್ಲ ಎಂದು ತಿಳಿಸಿದ್ದಾರೆ.

ಒಬ್ಬ ಪ್ರತಿಷ್ಠಿತ ಮಠಾಧೀಶರ ಕುರಿತು ಈ ರೀತಿಯ ಭಾಷೆ ಬಳಸಿರುವುದು ಎಷ್ಟರ ಮಟ್ಟಿಗೆ ಸರಿ? ವಿಶ್ವೇಶ್ವರ ಭಟ್ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಲಿಂಗಾಯತ ಧರ್ಮಗುರುಗಳಿಗೆ ತಮ್ಮ ಅನುಯಾಯಿಗಳಿಗೆ ಏನು ಹೇಳಬೇಕೆಂಬ ಸ್ವಾತಂತ್ರ್ಯವೂ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಕೆಲವರು ಲಿಂಗಾಯತ ಹೋರಾಟ ನಿಂತುಹೋಗಿದೆ ಎಂಬ ಭ್ರಮೆಯಿಂದ ಲಿಂಗಾಯತ ಸಮಾಜದ ಮೇಲೆ ಅನೇಕ ರೀತಿಯ ಆಕ್ರಮಣಗಳನ್ನು ಮಾಡುತ್ತಿದ್ದಾರೆ. ಆದರೆ, ಅವರ ಈ ಪ್ರಯತ್ನಗಳು ಎಂದಿಗೂ ಫಲಿಸುವುದಿಲ್ಲ. ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಎಂದಿಗೂ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.