ಬೆಂಗಳೂರು: ಸರ್ಕಾರಿ ಜೀಪಿನಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಿಟ್ಟು ಕಳುಹಿಸಲು ಲಂಚ ಪಡೆದ ಆರೋಪ ಹೊತ್ತಿರುವ ಎಲೆಕ್ಟ್ರಾನಿಕ್ ಸಿಟಿ ಎಸಿಪಿ ವಾಸು ವಿರುದ್ಧ ಏಕೆ ಸುಲಿಗೆ ಪ್ರಕರಣ ಹಾಕಿಲ್ಲ?
ಇಂಥ ಸ್ವಾರಸ್ಯಕರ ಚರ್ಚೆ ಪೊಲೀಸ್ ಇಲಾಖೆಯಲ್ಲಿ ಆರಂಭವಾಗಿದೆ. ಸಿಸಿಬಿ ಎಸಿಪಿ ಪ್ರಭುಶಂಕರ್, ಸಿಗರೇಟ್ ವಿತರಕರಿಂದ ಪಡೆದಿದ್ದಾರೆ ಎನ್ನಲಾದ ಲಂಚ ಪ್ರಕರಣದ ವಿಚಾರಣೆಯನ್ನು ಮಿಂಚಿನ ವೇಗದಲ್ಲಿ ಮುಗಿಸಿ ಮೊಕದ್ದಮೆ ದಾಖಲು ಮಾಡಿದ ಇಲಾಖೆ, ವಾಸು ವಿಷಯದಲ್ಲಿ ಏಕೆ ಮೌನವಾಗಿದೆ ಎಂಬ ಪ್ರಶ್ನೆ ಎದುರಾಗಿದೆ.
ಏಪ್ರಿಲ್ 11ರಂದು ಎಲೆಕ್ಟ್ರಾನಿಕ್ ಸಿಟಿ ಬಳಿ ವಾಣಿಜ್ಯ ಇಲಾಖೆಯ ಜೀಪ್‌ನಲ್ಲಿ 8 ಕಾರ್ಟನ್ ಬಾಕ್ಸ್‌ನಲ್ಲಿ 100ಕ್ಕೂ ಹೆಚ್ಚು ಬಾಟಲ್‌ಗಳನ್ನು ಸಾಗಿಸುತ್ತಿದ್ದಾಗ ವಾಸು ಮತ್ತು ಸಿಬ್ಬಂದಿ ಬೆನ್ನತ್ತಿ ಹಿಡಿದು ವಿಶೇಷ್, ಗೋಪಿ ಎಂಬುವರನ್ನು ಬಂಧಿಸಿದ್ದರು.
ಒಂದು ದಿನ ಅವರನ್ನು ಅಕ್ರಮವಾಗಿ ಬಂಧನದಲ್ಲಿಟ್ಟು ಬಳಿಕ ₹ 50 ಲಕ್ಷ ಲಂಚಕ್ಕೆ ಒತ್ತಾಯಿಸಿದ್ದರು. ಆನಂತರ ಚೌಕಾಸಿ ಮಾಡಿ ₹ 25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಈ ಪ್ರಕರಣ ಕುರಿತು ಡಿಸಿಪಿಗಳಾದ ಶ್ರೀನಾಥ್ ಜೋಶಿ, ಶರಣಪ್ಪ ಪ್ರತ್ಯೇಕವಾಗಿ ವಿಚಾರಣೆ ನಡೆಸಿ ವರದಿ ಕೊಟ್ಟಿದ್ದಾರೆ.
‘ವಿಶೇಷ್ ಅವರ ತಾಯಿಯ ಒಡವೆಯನ್ನು ಗಿರವಿ ಇಡಿಸಿದ ವಾಸು ₹2.5 ಲಕ್ಷ ವಸೂಲು ಮಾಡಿದ್ದಾರೆ’ ಎಂದು ಎರಡೂ ವರದಿಗಳಲ್ಲಿ ಹೇಳಲಾ
ಗಿದೆ. ವಾಸು ಅವರನ್ನು ಅಮಾನತು
ಮಾಡಿ, ವರದಿಯನ್ನು ಸರ್ಕಾರಕ್ಕೆ ಹೊತ್ತು
ಹಾಕಿ ಇಲಾಖೆ ಕೈತೊಳೆದುಕೊಂಡಿದೆ.
ಸಿಗರೇಟ್ ಪ್ರಕರಣದಲ್ಲಿ ಪ್ರಭುಶಂಕರ್ ಮತ್ತವರ ತಂಡದ ವಿರುದ್ಧ ಸುಲಿಗೆ ಪ್ರಕರಣ ದಾಖಲಿಸಿರುವ ಪೊಲೀಸರು, ವಾಸು ವಿಷಯದಲ್ಲಿ ವಿಭಿನ್ನ ನಿಲುವು ತಳೆದಿರುವುದು ಏಕೆ ಎಂಬ ಚರ್ಚೆ ಇಲಾಖೆ ವಲಯದಲ್ಲಿ ನಡೆದಿದೆ.
‘ನಾವು ಸರ್ಕಾರಕ್ಕೆ ವರದಿ ಕೊಟ್ಟಿದ್ದೇವೆ. ಮುಂದಿನ ತೀರ್ಮಾನ ಸರ್ಕಾರಕ್ಕೆ ಬಿಟ್ಟಿದ್ದು’ ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಲೇಬಲ್‌ಗಳೇ ಮಾಯ!
ಜೀಪಿನಲ್ಲಿ ವಶಪಡಿಸಿಕೊಂಡ ಮದ್ಯದ ಬಾಟಲ್‌ಗಳ ಮೇಲಿನ ಲೇಬಲ್‌ಗಳು ಮಾಯ ಆಗಿರುವುದರಿಂದ ಅವು ಯಾರಿಗೆ ಸೇರಿದ್ದು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.
ಈ ಘಟನೆ ನಡೆದು ತಿಂಗಳಾದರೂ ತನಿಖೆಯಲ್ಲಿ ಒಂದಿಂಚೂ ಪ್ರಗತಿಯಾಗಿಲ್ಲ. ವಿಸ್ಕಿ ಬಾಟಲ್‌ಗಳ ಮೇಲೆ ಲೇಬಲ್‌ಗಳು ಇಲ್ಲದ್ದರಿಂದ ತನಿಖೆ ವಿಳಂಬವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಶೇಷ್ ಅವರ ಹೇಳಿಕೆಯಲ್ಲಿ, ತಮ್ಮ ಗೆಳೆಯ ಭಾಸ್ಕರ್ ಬಾಟಲ್ ಕೊಡಿಸಿದರು. ಸೋಮ ಎಂಬಾತ ಬಾಟಲ್ ಕೊಟ್ಟ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಫೋನ್ ಮೂಲಕ ಸಂಪರ್ಕ ಮಾಡಿದ್ದಾಗಿ ವಿವರಿಸಿದ್ದಾರೆ. ಹೀಗಿದ್ದೂ ಬಾಟಲ್‌ಗಳು ಯಾವ ಅಂಗಡಿಗೆ ಸೇರಿದ್ದು ಎಂಬ ಪ್ರಶ್ನೆ ನಿಗೂಢವಾಗಿಯೇ ಉಳಿದಿದೆ.
‘ಈ ಪ್ರಕರಣದಲ್ಲಿ ಪೊಲೀಸರು ಎರಡು ಅಂಗಡಿಯ ದಾಸ್ತಾನು ಪರಿಶೀಲಿಸುವಂತೆ ಕೇಳಿದ್ದರು. ಅದನ್ನು ಮಾಡಿ ಕೊಟ್ಟಿದ್ದೇವೆ’ ಎಂದು ಅಬಕಾರಿ ಇಲಾಖೆ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.