ADVERTISEMENT

ಕೈಕೊಟ್ಟ ತಂತ್ರಾಂಶ: ಮದ್ಯಪ್ರಿಯರ ಪರದಾಟ, ಪ್ರತಿಭಟನೆಗೆ ಬಾರ್ ಮಾಲೀಕರು ಸಜ್ಜು!

ಮದ್ಯದಂಗಡಿಗಳಿಗೆ ದಾಸ್ತಾನು ಪೂರೈಕೆ ಸ್ಥಗಿತ

ಆರ್.ಜಿತೇಂದ್ರ
Published 5 ಏಪ್ರಿಲ್ 2022, 12:50 IST
Last Updated 5 ಏಪ್ರಿಲ್ 2022, 12:50 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ರಾಮನಗರ: ಹೊಸ ತಂತ್ರಾಂಶದಲ್ಲಿನ ಸಮಸ್ಯೆಯಿಂದಾಗಿ ರಾಜ್ಯದಾದ್ಯಂತ ಮದ್ಯ ಪೂರೈಕೆಯಲ್ಲಿ ವ್ಯತ್ಯಯ ಆಗಿದ್ದು, ಮಾರಾಟ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಈ ವೈಫಲ್ಯ ಖಂಡಿಸಿ ಬಾರ್‌ ಮಾಲೀಕರು ಬೀದಿಗೆ ಇಳಿದು ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.

ಕರ್ನಾಟಕ ರಾಜ್ಯ ಪಾನೀಯ ನಿಗಮದ (ಕೆಎಸ್‍ಬಿಸಿಎಲ್) ಮೂಲಕವೇ ರಾಜ್ಯದಲ್ಲಿನ ಎಲ್ಲ ಮದ್ಯದಂಗಡಿಗಳಿಗೆ ಮದ್ಯ ಪೂರೈಕೆ ಆಗುತ್ತಿದೆ. ಕಳೆದ ಮಾರ್ಚ್‌ 31ರವರೆಗೆ ಹಳೆಯ ವ್ಯವಸ್ಥೆ ಮೂಲಕವೇ ಪೂರೈಕೆ ನಡೆಯುತ್ತಿತ್ತು. ಏಪ್ರಿಲ್ 1ರಿಂದ ನಿಗಮವು ಹೊಸ ಸಾಫ್ಟ್‌ವೇರ್‌ ಪರಿಚಯಿಸಿದ್ದು ‘ವೆಬ್‌ ಇಂಡೆಂಟಿಂಗ್‘ ವ್ಯವಸ್ಥೆ ಮೂಲಕವೇ ಖರೀದಿಗೆ ಸೂಚಿಸಿದೆ. ಬಾರ್ ಮಾಲೀಕರು ತಾವು ಕುಳಿತಲ್ಲಿಯೇ ಆನ್‌ಲೈನ್‌ ಮೂಲಕ ಮದ್ಯದ ಇಂಡೆಂಟ್‌ ನೀಡಿ ತರಿಸಿಕೊಳ್ಳಲು ಇದರಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದರೆ ಹೊಸ ಸಾಫ್ಟ್‌ವೇರ್ ಕೈ ಕೊಟ್ಟಿದ್ದು, ಮದ್ಯ ಬುಕ್ಕಿಂಗ್ ಸಾಧ್ಯವಾಗುತ್ತಿಲ್ಲ. ಬಿಲ್ಲಿಂಗ್‌ ಆಗದೆ ಅಬಕಾರಿ ಗೋದಾಮುಗಳಿಂದ ಬಾರ್‌ಗಳಿಗೆ ಮದ್ಯ ಸರಬರಾಜು ಬಂದ್‌ ಆಗಿದೆ.

ರಾಮನಗರ ಜಿಲ್ಲೆಯಲ್ಲಿ 157 ಮದ್ಯ ಮಾರಾಟ ಅಂಗಡಿಗಳ ಪೈಕಿ ಮಂಗಳವಾರ ಏಳು ಅಂಗಡಿಗಳಿಗೆ ಮಾತ್ರ ಕೆಎಸ್‌ಬಿಸಿಎಲ್‌ ಗೋದಾಮಿನಿಂದ ಮದ್ಯ ಸರಬರಾಜು ಆಗಿದೆ. ಉಳಿದ ಅಂಗಡಿಗಳಿಗೆ ನಾಲ್ಕೈದು ದಿನದಿಂದ ಪೂರೈಕೆ ಸ್ಥಗಿತಗೊಂಡಿದೆ.

ADVERTISEMENT

ದಾಸ್ತಾನು ಖಾಲಿ:

ಯುಗಾದಿ ಹೊಸ ತೊಡಕಿನ ಕಾರಣಕ್ಕೆ ಕಳೆದ ವಾರಾಂತ್ಯದಲ್ಲಿ ಬಾರ್‌ಗಳಲ್ಲಿ ಭರ್ಜರಿ ವ್ಯಾಪಾರ ಆಗಿದ್ದು, ಇರುವ ದಾಸ್ತಾನೆಲ್ಲ ಖಾಲಿ ಆಗಿದೆ. ಹೊಸ ದಾಸ್ತಾನು ಎದುರು ನೋಡುತ್ತಿದ್ದ ಮಾಲೀಕರಿಗೆ ಅಂಗಡಿ ಮುಚ್ಚುವ ಪರಿಸ್ಥಿತಿ ಬಂದಿದೆ. ಇನ್ನೆರಡು ದಿನದಲ್ಲಿ ಪೂರೈಕೆ ಸಾಧ್ಯವಾಗದೇ ಹೋದಲ್ಲಿ ವ್ಯಾಪಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ ಎನ್ನುತ್ತಾರೆ ಮದ್ಯದಂಗಡಿ ಮಾಲೀಕರು.

ಹೊಸ ಸಾಫ್ಟ್‌ವೇರ್‌ನಲ್ಲಿ ಬಿಲ್ಲಿಂಗ್‌ಗೆ ಕೂಡ ಸಾಕಷ್ಟು ತೊಡಕಾಗಿದೆ. ಒಂದು ಇಂಡೆಂಟ್‌ಗೆ ಗಂಟೆಗಟ್ಟಲೆ ಸಮಯ ಹಿಡಿಯುತ್ತಿದೆ. ಅಲ್ಲದೆ ತಪ್ಪು ಬಿಲ್ಲಿಂಗ್‌ನಿಂದಾಗಿ ಹೆಚ್ಚುವರಿ ವೆಚ್ಚ ಬೀಳತೊಡಗಿದೆ ಎನ್ನುವುದು ಬಾರ್‌ ಮಾಲೀಕರ ಅಳಲು. ಆದಷ್ಟು ಶೀಘ್ರ ಸರ್ವರ್‌ ಸಮಸ್ಯೆ ಬಗೆಹರಿಸಿ ಎಂದಿನಂತೆ ಮದ್ಯದ ದಾಸ್ತಾನು ಪೂರೈಸಬೇಕು. ಹೊಸ ಸಮಸ್ಯೆ ಬಗೆಹರಿಯುವವರೆಗೆ ಒಂದು ತಿಂಗಳ ಮಟ್ಟಿಗಾದರೂ ಹಳೆ ಪದ್ಧತಿ ಮುಂದುವರಿಸಬೇಕು ಎನ್ನುವುದು ಅವರ ಆಗ್ರಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.