ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಸಾಗಿಸುತ್ತಿದ್ದ ಆರೋಪದ ಮೇಲೆ ರಾಜ್ಯದ ವಿವಿಧೆಡೆ ₹15.37 ಕೋಟಿ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಚಾಮರಾಜನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲೇ ₹14.07 ಕೋಟಿ ಮೌಲ್ಯದ ಮದ್ಯ ವಶಕ್ಕೆ ಪಡೆಯಲಾಗಿದೆ.
ಭಾನುವಾರದವರೆಗೆ ₹15.34 ಕೋಟಿ ಮೌಲ್ಯದ 4.93 ಲಕ್ಷ ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿತ್ತು. ಭಾನುವಾರದಿಂದ ಸೋಮವಾರದವರೆಗೆ ₹15.37 ಕೋಟಿ ಮೌಲ್ಯದ 4.94 ಲಕ್ಷ ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.
ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುವ ಮೈಸೂರು ಜಿಲ್ಲೆಯ ಆನೆಹೊಸೂರ್ ಬುಷ್ ಇನ್‌ಬೆವ್ ಇಂಡಿಯಾ ಲಿಮಿಟೆಡ್‌ನಿಂದ ಅಬಕಾರಿ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಉಗ್ರಾಣಗಳಿಗೆ ಸಾಗಿಸುತ್ತಿದ್ದ ₹7.84 ಕೋಟಿ ಮೌಲ್ಯದ 3.35 ಲಕ್ಷ ಲೀಟರ್ ಬಿಯರ್ ಅನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಯುನೈಟೆಡ್ ಸ್ಪಿರಿಟ್ಸ್‌ನ ಉಪ ಗುತ್ತಿಗೆ ಹೊಂದಿರುವ ಕೆಬಿಡಿ ಶುಗರ್ಸ್‌ನ ಬಾಟ್ಲಿಂಗ್ ಘಟಕದಲ್ಲಿ ದಾಸ್ತಾನು ಮಾಡಿದ್ದ ₹6.23 ಕೋಟಿ ಮೌಲ್ಯದ 1.26 ಲಕ್ಷ ಲೀಟರ್ ಮದ್ಯವನ್ನೂ ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಮಾಹಿತಿ ನೀಡಿದ್ದಾರೆ.
24 ಗಂಟೆಗಳ ಅವಧಿಯಲ್ಲಿ ಪೊಲೀಸರು, ಚುನಾವಣಾ ಕಾರ್ಯಪಡೆಗಳು ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ರಾಜ್ಯದ ವಿವಿಧೆಡೆ ₹45.76 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ. ₹5.66 ಲಕ್ಷ ಮೌಲ್ಯದ 7.3 ಕೆ.ಜಿ. ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಾದ್ಯಂತ 87,212 ಬ್ಯಾನರ್, ಪೋಸ್ಟರ್ ಮತ್ತು ಗೋಡೆ ಬರಹಗಳನ್ನು ತೆರವುಗೊಳಿಸಲಾಗಿದೆ. ಇದರೊಂದಿಗೆ ತೆರವುಗೊಳಿಸಲಾದ ಬ್ಯಾನರ್, ಪೋಸ್ಟರ್ ಮತ್ತು ಗೋಡೆ ಬರಹಗಳ ಸಂಖ್ಯೆ 1.34 ಲಕ್ಷ ತಲುಪಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.