ಬೆಂಗಳೂರು: ‘ಸಾಹಿತಿಗಳು ರಾಜಕಾರಣಿಗಳೇ, ಬಾಯಿಬಿಟ್ಟು ಹೇಳಿಕೊಳ್ಳುವುದಿಲ್ಲ ಅಷ್ಟೆ’ ಎನ್ನುವ ಮೂಲಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಧಟತನ ತೋರಿದ್ದಾರೆ. ಅವರು ಬೇಷರತ್ ಕ್ಷಮೆಯಾಚಿಸಬೇಕು’ ಎಂದು ನಾಡಿನ ಲೇಖಕರು ಆಗ್ರಹಿಸಿದ್ದಾರೆ.
ಈ ಕುರಿತು ಬಿಡುಗಡೆ ಮಾಡಿರುವ ಜಂಟಿ ಪತ್ರಿಕಾ ಹೇಳಿಕೆಗೆ ರಹಮತ್ ತರೀಕೆರೆ, ನಟರಾಜ ಬೂದಾಳ್, ನಾ. ದಿವಾಕರ, ಎಚ್.ಎಸ್. ರಾಘವೇಂದ್ರರಾವ್, ಕೆ.ಫಣಿರಾಜ್, ಎ. ನಾರಾಯಣ, ಡಾ.ಎಚ್.ಎಸ್. ಅನುಪಮಾ, ಡಾ.ಶ್ರೀನಿವಾಸ ಕಕ್ಕಿಲಾಯ, ಸುನಂದಾ ಕಡಮೆ, ವಿ.ಪಿ. ನಿರಂಜನಾರಾಧ್ಯ, ಡಿ.ಎಸ್. ಚೌಗಲೆ, ಬಸವರಾಜ ಸೂಳಿಭಾವಿ, ಚಂದ್ರಕಾಂತ ವಡ್ಡು, ಬಿ. ಸುರೇಶ, ರಂಗನಾಥ ಕಂಟನಕುಂಟೆ, ಕೆ.ಪಿ. ಸುರೇಶ, ಕೇಸರಿ ಹರವು ಸೇರಿದಂತೆ 50ಕ್ಕೂ ಹೆಚ್ಚು ಲೇಖಕರು ಸಹಿ ಹಾಕಿದ್ದಾರೆ.
‘ಕಾಂಗ್ರೆಸ್ ಕಚೇರಿಗೆ ಕರೆದು ಸಭೆ ನಡೆಸಿದ್ದನ್ನು ಉಪ ಮುಖ್ಯಮಂತ್ರಿ ಸಮರ್ಥಿಸಿಕೊಂಡಿದ್ದಾರೆ. ಅಕಾಡೆಮಿಯ ನೇಮಕಗಳು ಸಹ ನಿಗಮ ಮತ್ತು ಮಂಡಳಿಗಳ ನೇಮಕದಂತೆ ಪಕ್ಷದ ಹಿತಾಸಕ್ತಿಯ ನೇಮಕವೇ ಆಗಿದೆ. ಎಲ್ಲಿ ಬೇಕಾದರೂ ಸಭೆ ಕರೆಯಬಹುದು ಎಂದಿರುವುದು ಅಧಿಕಾರದ ದರ್ಪದ ಹೇಳಿಕೆ, ಪಾಳೇಗಾರಿಕೆಯ ಮನೋಧೋರಣೆ’ ಎಂದು ಖಂಡಿಸಿದ್ದಾರೆ.
‘ಶಿವಕುಮಾರ್ ಅವರ ಹೇಳಿಕೆಯನ್ನು ಸರ್ಕಾರದ ಇತರೆ ಸಚಿವರು, ಮುಖ್ಯಮಂತ್ರಿ ಅನುಮೋದಿಸುತ್ತಾರೆಯೇ? ಕೋಮುವಾದಿ ಹಾಗೂ ಸರ್ವಾಧಿಕಾರಿ ಧೋರಣೆಯ ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸಲು ಎಲ್ಲಾ ಪ್ರಗತಿಪರ, ಪ್ರಜಾಸತ್ತಾತ್ಮಕ ಹಾಗೂ ಜಾತ್ಯತೀತ ಶಕ್ತಿಗಳನ್ನು ಜೊತೆಗೆ ಕರೆದುಕೊಂಡು ಹೋಗಬೇಕಾದ ಇಂದಿನ ರಾಜಕೀಯ ಸಂದರ್ಭದಲ್ಲಿ ಉಪ-ಮುಖ್ಯಮಂತ್ರಿ ಹೇಳಿಕೆ ಆಘಾತ ತಂದಿದೆ. ನಾವು ಸಂವಿಧಾನಬದ್ಧ ರಾಜಕೀಯದಲ್ಲಿ ನಂಬಿಕೆ ಇಟ್ಟು ಕೆಲಸ ನಿರ್ವಹಿಸುತ್ತಿದ್ದೇವೆಯೇ ಹೊರತು ಯಾವುದೇ ಪಕ್ಷದ ಬಾಲಂಗೋಚಿಗಳಲ್ಲ. ಪ್ರಗತಿಪರರು ಅವರ ಹಂಗಿನಲ್ಲಿದ್ದಾರೆ ಎಂದುಕೊಂಡರೆ ಅದು ಅವರ ಮೂರ್ಖತನ’ ಎಂದು ಟೀಕಿಸಿದ್ದಾರೆ.
‘ಕಾಂಗ್ರೆಸ್ ನಾಯಕರಿಗೆ ಈ ಧೈರ್ಯ ಬರಲು, ಓಲೈಸುವ ಮನೋಧರ್ಮದ ನಮ್ಮ ಸಾಹಿತಿಗಳೂ-ಬರಹಗಾರರು ಕಾರಣ ಎಂಬುದನ್ನು ನಾವು ಮರೆಯಬಾರದು. ಕೆಪಿಸಿಸಿ ಕಚೇರಿಯಲ್ಲಿ ಭಾಗವಹಿಸಿದ ವಿವಿಧ ಅಕಾಡೆಮಿಗಳ ಅಧ್ಯಕ್ಷರು, ಸದಸ್ಯರು ಪಕ್ಷ ರಾಜಕಾರಣಕ್ಕೆ ಹೊರತಾಗಿ ತಮ್ಮ ಜವಾಬ್ದಾರಿ ಹಾಗೂ ಘನತೆಯನ್ನು ಎತ್ತಿ ಹಿಡಿಯುವಲ್ಲಿ ಪ್ರಮಾದವೆಸಗಿದ್ದಾರೆ. ಇದು ಪ್ರಗತಿಪರ ಕನ್ನಡ ಸಾರಸ್ವತ ಲೋಕಕ್ಕೆ ಒಂದು ಕಪ್ಪು ಚುಕ್ಕೆ. ಸಾಹಿತಿಗಳು ತಮ್ಮ ಅಂತಃಸಾಕ್ಷಿಗೆ ಓಗೊಟ್ಟು ಇದನ್ನು ಖಂಡಿಸಿ ತಮ್ಮ ಸ್ವಾಯತ್ತ ಮನೋಧರ್ಮವನ್ನು ಸಾರುವ ಕೆಲಸ ಮಾಡಬೇಕು’ ಎಂದು ಪ್ರತಿಪಾದಿಸಿದ್ದಾರೆ.
ಅಕಾಡೆಮಿ, ಪ್ರಾಧಿಕಾರಗಳು ಸರ್ಕಾರದ ಅಂಗಸಂಸ್ಥೆಗಳೇ ಹೊರತು, ರಾಜಕೀಯ ಪಕ್ಷಗಳ ಅಂಗಸಂಸ್ಥೆಗಳಲ್ಲ. ಅಧ್ಯಕ್ಷರು, ಸದಸ್ಯರ ನೇಮಕಕ್ಕೆ ಪಕ್ಷ ನಿಷ್ಠೆ ಮಾನದಂಡವಲ್ಲ. ಹಾಗಾಗಿ, ಅವುಗಳಿಗೆ ಸಾಂಸ್ಕೃತಿಕ ಸ್ವಾಯತ್ತೆ ಅಗತ್ಯ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.
‘2005ಕ್ಕೂ ಮೊದಲು ಸರ್ಕಾರದ ಮಧ್ಯಪ್ರವೇಶ ಕಡಿಮೆ ಇತ್ತು. ಅಕಾಡೆಮಿಗಳ ನಿಯಮಾವಳಿ ಮರು ರಚನೆ ಮಾಡಿದ ನಂತರ ಕೆಲ ಅಂಶಗಳಲ್ಲಿ ಅಧಿಕಾರಿಗಳ ನಿಯಂತ್ರಣಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನಂತರ ನನ್ನ ನೇತೃತ್ವದ ಸಮಿತಿ ಸಂಪೂರ್ಣ ಸ್ವಾಯತ್ತೆಗೆ ಶಿಫಾರಸು ಮಾಡಿತ್ತು. ಇಂದು ಅಕಾಡೆಮಿ, ಪ್ರಾಧಿಕಾರಗಳಿಗೆ ಶಾಸನಬದ್ಧ ಅಧಿಕಾರವಿದೆ. ಇದನ್ನು ಆಳುವ ಸರ್ಕಾರ, ಪಕ್ಷಗಳು ಅರ್ಥಮಾಡಿಕೊಳ್ಳಬೇಕು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.