ADVERTISEMENT

ಸಾಹಿತಿ ಕಮಲಾ ಹಂಪನಾ ನಿಧನ: ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರಿಂದ ಸಂತಾಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜೂನ್ 2024, 6:07 IST
Last Updated 22 ಜೂನ್ 2024, 6:07 IST
ಕಮಲಾ ಹಂಪನಾ
ಕಮಲಾ ಹಂಪನಾ   

ಬೆಂಗಳೂರು: ಸಾಹಿತಿ ಕಮಲಾ ಹಂಪನಾ (89) ಅವರು ಹೃದಯಾಘಾತದಿಂದ ಇಂದು (ಶನಿವಾರ) ಮೃತಪಟ್ಟಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ. ವೈ ವಿಜಯೇಂದ್ರ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

‘ಹಿರಿಯ ಸಾಹಿತಿ ಡಾ. ಕಮಲ ಹಂಪನಾ ಅವರ ಅನಿರೀಕ್ಷಿತ ಸಾವಿನಿಂದ ದುಃಖಿತನಾಗಿದ್ದೇನೆ. ಸಾಹಿತ್ಯ ಕೃಷಿಯ ಜೊತೆ ಸಂಶೋಧನೆ ಮತ್ತು ಬೋಧನೆಗಳಿಂದಲೂ ಜನಪ್ರಿಯರಾಗಿದ್ದ ಡಾ. ಕಮಲಾ ಅವರದ್ದು ಸರ್ವರಿಗೂ ಒಳಿತನ್ನು ಬಯಸಿದ ಜೀವ. ಡಾ. ಹಂಪ ನಾಗರಾಜಯ್ಯ ಮತ್ತವರ ಕುಟುಂಬದ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ‘ಎಕ್ಸ್‌’ನಲ್ಲಿ ಸಂತಾಪ ಸೂಚಿಸಿದ್ದಾರೆ.

ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಲೋಕದಲ್ಲಿ ಬಲು ಅಪರೂಪದ ಹಂಪನಾ ದಂಪತಿಗಳ ಜೋಡಿಯ ಕೊಡುಗೆ ಅನುಪಮವಾದುದು. ಕರ್ನಾಟಕದ ಅಗ್ರಗಣ್ಯ ಮಹಿಳಾ ಸಾಹಿತಿ ನಾಡೋಜ ಡಾ. ಕಮಲಾ ಹಂಪನಾ ಅವರ ನಿಧನಕ್ಕೆ ಸಂತಾಪ ಕೋರುತ್ತೇನೆ. ನಾಡು ನುಡಿಯ ಬಗೆಗಿನ ಅನುಪಮ ಪ್ರೀತಿ, ನಿರಂತರ ಪರಿಶ್ರಮ ಅವರ ಸಾಹಿತ್ಯಿಕ ಸಾಧನೆಯಿಂದಲೇ ಕನ್ನಡ ಸಾಹಿತ್ಯ ಲೋಕದಲ್ಲಿ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿದವರು.

ADVERTISEMENT

‘ಶೈಕ್ಷಣಿಕ ವಲಯದಲ್ಲೂ ಅಪಾರ ಶಿಷ್ಯವೃಂದ ಹೊಂದಿದ್ದ ಅವರು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯಿಂದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಯವರೆಗೆ ಹಲವಾರು ಪ್ರಶಸ್ತಿಗಳನ್ನು ಪಡೆದು ವಿದ್ವಾಂಸರಾಗಿ, ಉತ್ತಮ ಪ್ರಾಧ್ಯಾಪಕಿಯಾಗಿ, ಲೇಖಕಿಯರಲ್ಲೇ ವಿಶಿಷ್ಟ ಸಾಧನೆ ಮಾಡಿರುವ ಕಮಲಾ ಹಂಪನಾ ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಸ್ಥರು, ಸಾಹಿತ್ಯಾಸಕ್ತ ಅಭಿಮಾನಿ ವರ್ಗಕ್ಕೆ ಅವರ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ’ ಎಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ. ವೈ ವಿಜಯೇಂದ್ರ ಸಂತಾಪ ಸೂಚಿಸಿದ್ದಾರೆ.

‘ನಾಡಿನ ಖ್ಯಾತ ಸಾಹಿತಿಗಳು ಹಾಗೂ ನಾಡೋಜ ಡಾ. ಕಮಲಾ ಹಂಪನಾ ಅವರ ನಿಧನದ ಸುದ್ದಿ ಅತ್ಯಂತ ನೋವಿನ ಸಂಗತಿ. ಅವರ ಅಗಲಿಕೆಗೆ ನನ್ನ ಸಂತಾಪಗಳು. ತಮ್ಮ ಲೇಖನಗಳು, ಸಂಶೋಧನೆಗಳ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಅವರು, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗೆ ಭಾಜನರಾಗಿದ್ದರು. ಮೂಡಬಿದಿರೆಯಲ್ಲಿ ನಡೆದ 71 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕನ್ನಡ ಸಾರಸ್ವತ ಲೋಕಕ್ಕೆ ಹೆಮ್ಮೆ ತಂದಿದ್ದರು. ಅವರ ಅಗಲಿಕೆಯಿಂದ ಕನ್ನಡ ನಾಡು ಹಾಗೂ ಸಾಹಿತ್ಯ ಲೋಕ ಬಡವಾದಂತಾಗಿದೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ‌ ಕುಟುಂಬ ಹಾಗೂ ಅಭಿಮಾನಿಗಳಿಗೆ ಭಗವಂತ ಕರುಣಿಸಲಿ’ ಎಂದು ಪ್ರಾರ್ಥಿಸುತ್ತೇನೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಸಂತಾಪ ವ್ಯಕ್ತಪಡಿಸಿದ್ದಾರೆ.

‘ಖ್ಯಾತ ಸಾಹಿತಿ ಡಾ. ಕಮಲಾ ಹಂಪನಾ ನಿಧನರಾದ ಸುದ್ದಿ ಅತೀವ ದುಃಖವನ್ನುಂಟು ಮಾಡಿದೆ. ನಾಡಿನ ಅಗ್ರಗಣ್ಯ ಮಹಿಳಾ ಸಾಹಿತಿ ಎನಿಸಿದ್ದ ನಾಡೋಜ ಕಮಲ ಹಂಪನಾ ಅವರ ಅಗಲಿಕೆಯಿಂದ ಕನ್ನಡ ಸಾರಸ್ವತ ಲೋಕ ಹಿರಿಯ ಲೇಖಕಿಯನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತೇನೆ, ಅವರ ಕುಟುಂಬದವರು, ಅಭಿಮಾನಿಗಳಲ್ಲಿ ಸಂತಾಪ ವ್ಯಕ್ತಪಡಿಸುತ್ತೇನೆ’ ಎಂದು ಬಿಜೆಪಿಯ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ‘ಎಕ್ಸ್‌’ ಪೋಸ್ಟ್‌ ಮಾಡಿ‌ದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.