ADVERTISEMENT

ಕೋರ್ಟ್ ಕಲಾಪ ವಿಡಿಯೊ ದುರ್ಬಳಕೆ: ಕಠಿಣ ಕ್ರಮದ ಎಚ್ಚರಿಕೆ

ಬೆಂಗಳೂರು ವಕೀಲರ ಸಂಘ ಸಲ್ಲಿಸಿದ್ದ ಅರ್ಜಿ: ಹೈಕೋರ್ಟ್‌ ಕಟ್ಟುನಿಟ್ಟಿನ ಆದೇಶ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2024, 0:10 IST
Last Updated 3 ಅಕ್ಟೋಬರ್ 2024, 0:10 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ನ್ಯಾಯಾಲಯ ಕಲಾಪಗಳ ನೇರ ಪ್ರಸಾರದ (ಲೈವ್‌ ಸ್ಟ್ರೀಮ್) ದೃಶ್ಯಗಳನ್ನು ಯಾವುದೇ ಖಾಸಗಿ ವೇದಿಕೆಗಳು ಬಳಸಬಾರದು’ ಎಂದು ಹೈಕೋರ್ಟ್‌ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

‘ಕಲಾಪಗಳನ್ನು ರೆಕಾರ್ಡ್ ಮಾಡಿಕೊಂಡು ಅವುಗಳ ದುರ್ಬಳಕೆ ಮಾಡದಂತೆ ತಡೆಯಬೇಕು ಮತ್ತು ಈ ಸಂಬಂಧ ಕ್ರಮ ಜರುಗಿಸಲು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನಿರ್ದೇಶಿಸಬೇಕು’ ಎಂದು ಕೋರಿ, ‘ಬೆಂಗಳೂರು ವಕೀಲರ ಸಂಘ’ದ (ಎಎಬಿ) ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ ಮತ್ತು ಪ್ರಧಾನ ಕಾರ್ಯದರ್ಶಿ ಟಿ.ಜಿ.ರವಿ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

ರಾಜ್ಯ ಹೈಕೋರ್ಟ್ 2022ರ ಜನವರಿ 1ರಂದು ಜಾರಿಗೊಳಿಸಿರುವ ‘ಕರ್ನಾಟಕ ನ್ಯಾಯಾಲಯ ಕಲಾಪಗಳ ನೇರ ಪ್ರಸಾರ (ಲೈವ್‌ ಸ್ಟ್ರೀಮ್‌) ಮತ್ತು ರೆಕಾರ್ಡಿಂಗ್‌ ನಿಯಮಗಳು–2021’ರ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ನ್ಯಾಯಪೀಠ ತಾಕೀತು ಮಾಡಿದೆ.

ADVERTISEMENT

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ವಿವೇಕ್‌ ಸುಬ್ಬಾರೆಡ್ಡಿ, ‘ಕೆಲವು ಡಿಜಿಟಲ್‌ ಮಾಧ್ಯಮದ ವೇದಿಕೆಗಳು ಕೋರ್ಟ್ ಕಲಾಪದ ಲೈವ್‌ ಸ್ಟ್ರೀಮ್‌ ವಿಡಿಯೊಗಳನ್ನು ದುರ್ಬಳಕೆ ಮಾಡಿಕೊಂಡು ಹಣ ಸಂಪಾದನೆಗೆ ಇಳಿದಿವೆ. ವಿಡಿಯೊಗಳನ್ನು ಮನಸ್ಸಿಗೆ ಬಂದಂತೆ ಸಂಕಲನ ಮಾಡಿ ಪ್ರಸಾರ ಮಾಡುತ್ತಿವೆ. ಅವುಗಳಲ್ಲಿನ ಕಮೆಂಟ್ ವಿಭಾಗಗಳಲ್ಲಿ ನ್ಯಾಯಮೂರ್ತಿಗಳು, ವಕೀಲರ ಬಗ್ಗೆ ಕೆಲವರು ಅಸಭ್ಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇದು ನ್ಯಾಯಾಂಗ ನಿಂದನೆಯಾಗಿದೆ. ಆದ್ದರಿಂದ, ಈ ಎಲ್ಲ ವಿಡಿಯೊಗಳನ್ನು ತೆಗೆದು ಹಾಕಲು ನಿರ್ದೇಶಿಸಬೇಕು. ಇಂತಹ ವೇದಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಭವಿಷ್ಯದಲ್ಲಿ ವಿಡಿಯೊಗಳನ್ನು ಬಳಸದಂತೆ ನಿರ್ಬಂಧಿಸಬೇಕು’ ಎಂದು ಮನವಿ ಮಾಡಿದರು.

ಕೇಂದ್ರ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ. ಅರವಿಂದ್‌ ಕಾಮತ್‌, ‘ಲೈವ್‌ ಸ್ಟ್ರೀಮ್‌ ವಿಡಿಯೊಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ಈಗಾಗಲೇ ನಿಯಮಗಳನ್ನು ರೂಪಿಸಿದೆ. ಈ ಸಂಬಂಧ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಕ್ರಮ ಕೈಗೊಂಡರೆ ಸಾಕು’ ಎಂದರು.

ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ, ಪ್ರಕರಣದ ಪ್ರತಿವಾದಿಗಳಾದ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿಗಳು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕರ್ನಾಟಕ ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್‌, ಡಿಜಿ–ಐಜಿಪಿ, ಯೂ–ಟ್ಯೂಬ್‌, ಮೆಟಾ (ಫೇಸ್‌ಬುಕ್‌), ಟ್ವಿಟರ್‌ ಕಮ್ಯುನಿಕೇಶನ್‌ ಇಂಡಿಯಾ ಪ್ರೈವೆಟ್‌ ಲಿಮಿಟೆಡ್‌ ಕಂಪನಿ, ಕಹಳೆ ನ್ಯೂಸ್‌, ಫ್ಯಾನ್ಸ್‌ ಟ್ರೋಲ್‌, ರವೀಂದ್ರ ಜೋಶಿ ಕ್ರಿಯೇಶನ್ಸ್‌ ಮತ್ತು ‘ಅವನಿಯಾನ’ ಡಿಜಿಟಲ್‌ ಮಿಡಿಯಾಗಳಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿದೆ.

‘ಈಗಾಗಲೇ ಬಳಕೆ ಮಾಡಲಾಗಿರುವ ವಿಡಿಯೊಗಳನ್ನು ತಕ್ಷಣವೇ ತೆಗೆದು ಹಾಕಿ’ ಎಂದು ಯೂ–ಟ್ಯೂಬ್‌, ಮೆಟಾ (ಫೇಸ್‌ಬುಕ್‌) ಹಾಗೂ ಎಕ್ಸ್‌ ಕಾರ್ಪ್‌ ಸಂಸ್ಥೆಗೆ ನಿರ್ದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.