ADVERTISEMENT

2025ಕ್ಕೆ ಸಾಲ ₹7.38 ಲಕ್ಷ ಕೋಟಿ!

ರಾಜ್ಯದ ಮಧ್ಯಮಾವಧಿ ವಿತ್ತೀಯ ಯೋಜನೆಯ ಅಂದಾಜು

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2022, 23:15 IST
Last Updated 5 ಮಾರ್ಚ್ 2022, 23:15 IST
   

ಬೆಂಗಳೂರು: 2025–26ನೇ ಆರ್ಥಿಕ ವರ್ಷಕ್ಕೆ ರಾಜ್ಯ ಸರ್ಕಾರದ ಒಟ್ಟು ಸಾಲದ ಮೊತ್ತ ₹7,38,510 ಕೋಟಿ ತಲುಪಲಿದೆ.

ಆರ್ಥಿಕ ಇಲಾಖೆಯು ವಿಧಾನಮಂಡಲದಲ್ಲಿ ಶುಕ್ರವಾರ ಮಂಡಿಸಿರುವ 2022–26ರ ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿ ಈ ಅಂದಾಜು ಮಾಡಲಾಗಿದೆ.

2021–22ನೇ ಆರ್ಥಿಕ ವರ್ಷದ ಪರಿಷ್ಕೃತ ಅಂದಾಜಿನ ಪ್ರಕಾರ ರಾಜ್ಯ ಸರ್ಕಾರದ ಒಟ್ಟು ಸಾಲದ ಮೊತ್ತ ₹ 4,58,042 ಕೋಟಿ. 2022–23ನೇ ಆರ್ಥಿಕ ವರ್ಷದಲ್ಲಿ ಸಾಲದ ಪ್ರಮಾಣ ₹60,334 ಕೋಟಿಯಷ್ಟು ಹೆಚ್ಚಲಿದ್ದು, ₹ 5,18,366 ಕೋಟಿ ತಲುಪಲಿದೆ ಎಂಬ ಅಂದಾಜು ವರದಿಯಲ್ಲಿದೆ.

ADVERTISEMENT

ಮುಂದಿನ ನಾಲ್ಕು ಆರ್ಥಿಕ ವರ್ಷಗಳಲ್ಲಿ ರಾಜ್ಯ ಸರ್ಕಾರದ ಒಟ್ಟು ಸಾಲದ ಮೊತ್ತದಲ್ಲಿ ₹ 2,80,468 ಕೋಟಿಯಷ್ಟು ಹೆಚ್ಚಳವಾಗಲಿದೆ. ಪ್ರಸಕ್ತ ವರ್ಷದಲ್ಲಿ ರಾಜ್ಯ ಸರ್ಕಾರದ ಒಟ್ಟು ಸಾಲದ ಮೊತ್ತವು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (ಜಿಎಸ್‌ಡಿಪಿ) ಶೇ 26.61ರಷ್ಟಿದೆ. ಮುಂದಿನ ವರ್ಷದಿಂದ ಗಣನೀಯ ಏರಿಕೆಯಾಗಲಿದ್ದು, 2025ರಲ್ಲಿ ರಾಜ್ಯ ಸರ್ಕಾರದ ಒಟ್ಟು ಸಾಲದ ಮೊತ್ತವು ರಾಜ್ಯದ ಆಗಿನ ಜಿಎಸ್‌ಡಿಯ ಶೇ 27.55ರಷ್ಟಾಗಲಿದೆ ಎಂದು ಆರ್ಥಿಕ ಇಲಾಖೆ ಅಂದಾಜಿಸಿದೆ.‌

ಈಗ ರಾಜ್ಯ ಸರ್ಕಾರವು ವಾರ್ಷಿಕ ₹ 27,161 ಕೋಟಿ ಬಡ್ಡಿ ಪಾವತಿಸುತ್ತಿದೆ. 2025–26ರ ವೇಳೆಗೆ ಸರ್ಕಾರವು ಪಡೆದ ಸಾಲದ ಮೇಲಿನ ಬಡ್ಡಿಯ ಮೊತ್ತ ₹ 42,789 ಕೋಟಿ ತಲುಪಲಿದೆ.

ಕುಸಿತದ ಆತಂಕ: ರಾಜ್ಯ ಸರ್ಕಾರದ ಒಟ್ಟು ಸಾಲದ ಪ್ರಮಾಣದಲ್ಲಿನ ಹೆಚ್ಚಳಕ್ಕೆ ಹೋಲಿಸಿದರೆ ವರಮಾನ ಸಂಗ್ರಹಣೆಯಲ್ಲಿನ ಏರಿಕೆ ಕಡಿಮೆ ಇರಲಿದೆ ಎಂದು ಅಂದಾಜಿನಲ್ಲಿ ಹೇಳಲಾಗಿದೆ. ಜಿಎಸ್‌ಡಿಪಿಗೆ ಹೋಲಿಸಿದರೆ ಸ್ವೀಕೃತಿಗಳ ಪ್ರಮಾಣವು ಕುಸಿಯುತ್ತಾ ಸಾಗಲಿದೆ.

2021–22ರ ಪರಿಷ್ಕೃತ ಅಂದಾಜಿನ ಪ್ರಕಾರ, ರಾಜ್ಯದ ರಾಜಸ್ವ ಸ್ವೀಕೃತಿಗಳ ಮೊತ್ತ ₹ 1,89,579 ಕೋಟಿ. 2022–23ರಲ್ಲಿ ರಾಜಸ್ವ ಸ್ವೀಕೃತಿಯಲ್ಲಿ ಕೇವಲ 309 ಕೋಟಿಯಷ್ಟು ಹೆಚ್ಚಳವಾಗಲಿದ್ದು, ₹ 1,89,888 ಕೋಟಿ ತಲುಪಲಿದೆ. 2025–26ರಲ್ಲಿ ರಾಜ್ಯದ ಒಟ್ಟು ರಾಜಸ್ವ ಸ್ವೀಕೃತಿಗಳ ಮೊತ್ತ ₹ 2,37,868 ಕೋಟಿ ತಲುಪಬಹುದು ಎಂದು ಆರ್ಥಿಕ ಇಲಾಖೆ ಹೇಳಿದೆ.

ಪ್ರಸಕ್ತ ಆರ್ಥಿಕ ವರ್ಷ ರಾಜಸ್ವ ಸ್ವೀಕೃತಿಗಳ ಒಟ್ಟು ಪ್ರಮಾಣವು ಜಿಎಸ್‌ಡಿಪಿಯ ಶೇ 11.01ರಷ್ಟಿದೆ. 2022–23ರಲ್ಲಿ ಅದು ಶೇ 10.07ಕ್ಕೆ ಕುಸಿಯಲಿದೆ. 2025–26ರಲ್ಲಿ ಇನ್ನೂ ಕುಸಿತ ಕಾಣಲಿದ್ದು, ಶೇ 8.87ಕ್ಕೆ ತಲುಪಲಿದೆ ಎಂಬ ಅಂದಾಜಿದೆ.

ವೇತನ, ಪಿಂಚಣಿ ವೆಚ್ಚ ಹೆಚ್ಚಳ: ರಾಜ್ಯ ಸರ್ಕಾರವು ನೌಕರರ ವೇತನ ಮತ್ತು ಪಿಂಚಣಿಗಳಿಗಾಗಿ ಮಾಡುವ ವೆಚ್ಚದಲ್ಲಿ 2023–24ನೇ ಆರ್ಥಿಕ ವರ್ಷದಿಂದ ಗಣನೀಯ ಹೆಚ್ಚಳ ಆಗಲಿದೆ ಎಂಬ ಅಂಶ ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿದೆ. ಇದು, ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಯ ಸುಳಿವು ನೀಡಿದೆ.

ಈಗ ವೇತನಕ್ಕಾಗಿ ₹ 38,430 ಕೋಟಿ ಮತ್ತು ನಿವೃತ್ತಿ ವೇತನಕ್ಕಾಗಿ ₹ 23,413 ಕೋಟಿ ವ್ಯಯಿಸಲಾಗುತ್ತಿದೆ. 2022–23ರಲ್ಲಿ ಈ ಮೊತ್ತಗಳು ಅನುಕ್ರಮವಾಗಿ ₹ 41,288 ಕೋಟಿ ಮತ್ತು ₹ 24,016 ಕೋಟಿ ಇರಲಿವೆ. 2023–24ರಲ್ಲಿ ವೇತನಕ್ಕಾಗಿ ₹ 56,942 ಕೋಟಿ ಮತ್ತು ನಿವೃತ್ತಿ ವೇತನಕ್ಕಾಗಿ ₹ 26,178 ಕೋಟಿ ವೆಚ್ಚವಾಗಲಿದೆ ಎಂಬ ಉಲ್ಲೇಖ ವರದಿಯಲ್ಲಿದೆ.

ಕೇಂದ್ರದಂತೆ ಆಸ್ತಿ ನಗದೀಕರಣ

‘ಸರ್ಕಾರಿ ಸ್ವತ್ತುಗಳ ಆಸ್ತಿ ನಗದೀಕರಣದ ಮೂಲಕ ಮುಂದಿನ ದಿನಗಳಲ್ಲಿ ಸರ್ಕಾರದ ಸ್ವೀಕೃತಿಗಳನ್ನು ಹೆಚ್ಚಿಸಿಕೊಳ್ಳಬಹುದು ಎಂಬ ಪ್ರಸ್ತಾವವನ್ನು ಸಮಿತಿಯು ಒಪ್ಪಿಕೊಂಡಿದೆ. ಹೂಡಿಕೆ ಹಿಂತೆಗೆತದಿಂದ ರಾಜಸ್ವ

ಹೆಚ್ಚಿಸಿಕೊಳ್ಳುವ ಹಲವು ಆಯ್ಕೆಗಳನ್ನೂ ಗಮನಿಸಲಾಗಿದೆ’ ಎಂದು ಮಧ್ಯಮಾವಧಿ ವಿತ್ತೀಯ ಯೋಜನೆ ಹೇಳಿದೆ.

ರಾಜ್ಯ ಸರ್ಕಾರದ ಸಾಲದ ಮೊತ್ತ

2021–22

₹ 1,89,579 ಕೋಟಿ

2022–23

₹ 1,89,888 ಕೋಟಿ

2025–26

2,37,868 ಕೋಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.