ADVERTISEMENT

ಹಿರಿ – ಕಿರಿಯರ ಮಧ್ಯೆ ‘ಭಿನ್ನ’ ಅಭಿಪ್ರಾಯ

ಕೆಪಿಸಿಸಿ ಅಧ್ಯಕ್ಷ ಗಾದಿಗೆ ತೀವ್ರಗೊಂಡ ಲಾಬಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2018, 16:43 IST
Last Updated 21 ಜೂನ್ 2018, 16:43 IST

ಬೆಂಗಳೂರು: ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಸರ್ಕಾರದ ಸಂಪುಟದಲ್ಲಿ ಸ್ಥಾನ ಸಿಗದ ಕಾಂಗ್ರೆಸ್‌ ಶಾಸಕರ ಅತೃಪ್ತಿ ಬೂದಿ ಮುಚ್ಚಿದ ಕೆಂಡದಂತಿರುವ ಮಧ್ಯೆಯೇ, ಕೆಪಿಸಿಸಿ ಅಧ್ಯಕ್ಷ ಗಾದಿಯ ಪೈಪೋಟಿ ಮುನ್ನೆಲೆಗೆ ಬಂದಿದೆ.

2019ರ ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಂಘಟಿಸುವ ಮಹತ್ವದ ಹೊಣೆಗಾರಿಕೆ ಹೊಸ ಅಧ್ಯಕ್ಷರ ಪಾಲಿಗೆ ಬರಲಿದೆ. ಹೀಗಾಗಿ, ಆ ಜವಾಬ್ದಾರಿಯನ್ನು ಯಾರ ಹೆಗಲಿಗೆ ಹೊರಿಸಬೇಕು ಎಂಬ ವಿಷಯದಲ್ಲಿ ಪಕ್ಷದ ಹಿರಿ– ಕಿರಿಯ ತಲೆಮಾರಿನ ನಾಯಕರ ಮಧ್ಯೆ ‘ಭಿನ್ನ’ ಅಭಿಪ್ರಾಯ ವ್ಯಕ್ತವಾಗಿದೆ.

ಯುವ ನಾಯಕತ್ವವನ್ನು ಪ್ರತಿಪಾದಿಸುತ್ತಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌, ಅಂಥ ನಾಯಕನೊಬ್ಬನ ಹುಡುಕಾಟದಲ್ಲಿದ್ದಾರೆ. ಆ ಸೂಚನೆ ಸಿಕ್ಕಿದ ಬೆನ್ನಲ್ಲೆ ಕಾರ್ಯೋನ್ಮುಖರಾದ ಪಕ್ಷದ ಕೆಲವು ನಾಯಕರು, ಅನುಭವ ಮತ್ತು ಹಿರಿತನ ಪರಿಗಣಿಸಿ ಜವಾಬ್ದಾರಿ ನೀಡಬೇಕು ಎಂದು ವರಿಷ್ಠರ ಮುಂದೆ ಹಕ್ಕೊತ್ತಾಯ ಮಂಡಿಸಿದ್ದಾರೆ.

ADVERTISEMENT

ಕಾರ್ಯಾಧ್ಯಕ್ಷರಾಗಿರುವ ದಿನೇಶ್‌ ಗುಂಡೂರಾವ್‌ ಮತ್ತು ಕೃಷ್ಣ ಬೈರೇಗೌಡ ಪೈಕಿ ಒಬ್ಬರನ್ನು ಅಧ್ಯಕ್ಷರನ್ನಾಗಿ ನೇಮಿಸಲು ರಾಹುಲ್‌ ಗಾಂಧಿ ಚಿಂತನೆ ನಡೆಸಿದ್ದರು ಎನ್ನಲಾಗಿದೆ. ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಈ ಇಬ್ಬರನ್ನೂ ದೆಹಲಿಗೆ ಕರೆಸಿಕೊಂಡಿದ್ದ ರಾಹುಲ್‌, ಪಕ್ಷದಲ್ಲಿನ ಬೆಳವಣಿಗೆಗಳ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆಯೂ ಚರ್ಚಿಸಿದ್ದರು. ಕೃಷ್ಣ ಬೈರೇಗೌಡ ಸಂಪುಟ ಸೇರಿರುವುದರಿಂದ ಈ ರೇಸ್‌ನಿಂದ ಹೊರಗಿದ್ದಾರೆ.

ಆದರೆ, ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ದಿನೇಶ್ ಗುಂಡೂರಾವ್‌ ಇನ್ನೂ ಕಿರಿಯ ಎನ್ನುವುದು ಪಕ್ಷದ ಕೆಲವು ಹಿರಿಯರ ತಕರಾರು. ಮಹತ್ವದ ಹುದ್ದೆ ನಿಭಾಯಿಸಲು ಅವರ ಬಳಿ ಅನುಭವ ಇಲ್ಲ ಎನ್ನುವುದು ಆರೋಪ. ಹೀಗಾಗಿ, ಹಿರಿಯರೊಬ್ಬರನ್ನು ನೇಮಿಸ
ಬೇಕು ಎಂಬುವುದು ಅವರ ಬೇಡಿಕೆ.

ಈ ಮಾತುಗಳಿಗೆ ಪ್ರತಿಕ್ರಿಯಿಸಿರುವ ದಿನೇಶ್‌, ‘ಪಕ್ಷದ ಕಾರ್ಯಾಧ್ಯಕ್ಷ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿಲ್ಲವೇ. ಶಾಸಕ, ಸಚಿವನಾಗಿಯೂ ಕೆಲಸ ಮಾಡಿದ್ದೇನೆ’ ಎಂದು ತಿರುಗೇಟು ನೀಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಗಾದಿ ಮೇಲೆ ಸಂಸದರಾದ ಕೆ.ಎಚ್‌. ಮುನಿಯಪ್ಪ, ಬಿ.ಕೆ. ಹರಿಪ್ರಸಾದ್‌ ಕಣ್ಣು ಬಿದ್ದಿದೆ. ಈಗಾಗಲೇ ಲಾಬಿ ಆರಂಭಿಸಿದ್ದಾರೆ.

ಸಚಿವಾಕಾಂಕ್ಷಿಗಳ ಚಟುವಟಿಕೆ ಬಿರುಸು

ಜಿ. ಪರಮೇಶ್ವರ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅತೃಪ್ತ ಶಾಸಕ ಬಿ.ಸಿ. ಪಾಟೀಲ, ‘ನನ್ನ ಬೇಡಿಕೆ ಸಚಿವ ಸ್ಥಾನವೇ ಹೊರತು ನಿಗಮ ಮಂಡಳಿ ಅಲ್ಲ. ಸಚಿವ ಸ್ಥಾನ ಕೊಡುವುದಾದರೆ ಕೊಡಲಿ, ನಿಗಮ ಮಂಡಳಿ ಬೇಡ’ ಎಂದು ಹೇಳಿದರು.

‘ಬಾಕಿ ಇರುವ ಆರು ಸಚಿವ ಸ್ಥಾನಗಳಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಸ್ಥಾನ ಸಿಗುವ ವಿಶ್ವಾಸ ಇದೆ. ಜಾತಿವಾರು, ವಿಭಾಗವಾರು ಆಧಾರದಲ್ಲಿ ನನ್ನನ್ನು ಪರಿಗಣಿಸುವ ನಿರೀಕ್ಷೆ ಇದೆ’ ಎಂದರು.

ಎರಡನೇ ಹಂತದಲ್ಲಿ ಸ್ಥಾನ ಸಿಗಲ್ಲ: ‘ಎರಡು ವರ್ಷಗಳ ಬಳಿಕ ಸಚಿವ ಸ್ಥಾನದ ಭರವಸೆ ಸಿಕ್ಕಿದೆ. ಆರು ಸ್ಥಾನಗಳ ಪೈಕಿ ನಾಲ್ಕನ್ನು ಪಕ್ಷದ ವರಿಷ್ಠರು ಆದಷ್ಟು ಬೇಗ ತುಂಬುವ ಸಾಧ್ಯತೆ ಇದೆ. ಎರಡನೇ ಹಂತದ ವಿಸ್ತರಣೆಯಲ್ಲಿ ಸ್ಥಾನ ಸಿಗಲ್ಲ ಎಂದು ವರಿಷ್ಠರು ಸ್ಪಷ್ಟವಾಗಿ ಹೇಳಿದ್ದಾರೆ’ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

**

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ, ಬೇಡಿಕೆ ಇಟ್ಟಿಲ್ಲ. ವರಿಷ್ಠರ ತೀರ್ಮಾನಕ್ಕೆ ಬದ್ಧ. ಕೊಟ್ವರೆ ನಿಭಾಯಿಸುತ್ತೇನೆ
– ದಿನೇಶ್ ಗುಂಡೂರಾವ್, ಕೆಪಿಸಿಸಿ, ಕಾರ್ಯಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.