ಹೊಸಪೇಟೆ: ‘ಬರಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷದ ನಿಷ್ಠಾವಂತರಿಗೆ, ಅದರಲ್ಲೂ ಗೆಲ್ಲುವ ಸಾಮರ್ಥ್ಯ ಹೊಂದಿದವರಿಗೆ ಟಿಕೆಟ್ ಕೊಡಲಾಗುವುದು’ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ ತಿಳಿಸಿದರು.
ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚುನಾವಣೆಯಲ್ಲಿ ಮಹಿಳಾ ಕಾರ್ಯಕರ್ತೆಯರಿಗೆ ಹೆಚ್ಚಿನ ಟಿಕೆಟ್ ಕೊಡಬೇಕೆಂದು ಪಕ್ಷಕ್ಕೆ ಬೇಡಿಕೆ ಸಲ್ಲಿಸಲಾಗುವುದು. ಹೊಸಪೇಟೆ ನಗರಸಭೆಯ 35 ವಾರ್ಡುಗಳ ಪೈಕಿ 18 ಮಹಿಳೆಯರಿಗೆ ಮೀಸಲಾಗಿರುವುದು ಒಳ್ಳೆಯ ಸಂಗತಿ. ಉತ್ತಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು’ ಎಂದು ಮಾಹಿತಿ ನೀಡಿದರು.
‘ಕೇಂದ್ರದಲ್ಲಿ ಮನಮೋಹನ್ ಸಿಂಗ್ ಅವರ ಸರ್ಕಾರವಿದ್ದಾಗ ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲು ಕಲ್ಪಿಸುವ ಮಸೂದೆಗೆ ಅಂದಿನ ವಿರೋಧ ಪಕ್ಷ ಬಿಜೆಪಿ ಬೆಂಬಲ ನೀಡಿರಲಿಲ್ಲ. ಈಗ ಪ್ರಧಾನಿ ‘ಬೇಟಿ ಬಚಾವೋ ಬೇಟಿ ಪಡಾವೋ’ ಎಂದು ಹೇಳುತ್ತಾರೆ. ಮಹಿಳೆಯರ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ. ನಾಲ್ಕೂವರೆ ವರ್ಷಗಳಲ್ಲಿ ಮಹಿಳಾ ಮೀಸಲಾತಿ ಕುರಿತು ಪ್ರಧಾನಿ ಒಮ್ಮೆಯೂ ಮಾತನಾಡಿಲ್ಲ. ಮಹಿಳೆಯರ ಸರ್ವತೋಮುಖ ಬೆಳವಣಿಗೆ ಬಗ್ಗೆ ಅವರು ಎಷ್ಟು ಗಂಭೀರವಾಗಿದ್ದಾರೆ ಎನ್ನುವುದನ್ನು ಇದು ತೋರಿಸುತ್ತದೆ’ ಎಂದು ಹೇಳಿದರು.
‘ಈ ದೇಶದಲ್ಲಿ ಇಂದಿರಾ ಗಾಂಧಿಯವರು ಬಿಟ್ಟರೆ ಬೇರೆ ಯಾವ ಪ್ರಧಾನಿ ಕೂಡ ದೇಶಕ್ಕೆ ಒಳ್ಳೆಯ ಆಡಳಿತ ಕೊಟ್ಟಿಲ್ಲ. ಕಾಂಗ್ರೆಸ್ ಮೊದಲಿನಿಂದಲೂ ಮಹಿಳೆಯರಿಗೆ ಎಲ್ಲ ರಂಗಗಳಲ್ಲಿ ಅವಕಾಶ ಕಲ್ಪಿಸಿದೆ. ಜತೆಗೆ ಪಕ್ಷದಲ್ಲೂ ಉತ್ತಮ ಸ್ಥಾನ ಕೊಟ್ಟಿದೆ. ಪಕ್ಷದ ಮಹಿಳಾ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿರುವವರಿಗೆ ಬರುವ ತಿಂಗಳು ಬೆಂಗಳೂರಿನಲ್ಲಿ ಕಾರ್ಯಾಗಾರ ಹಮ್ಮಿಕೊಂಡಿದ್ದು, ಅವರಿಗೆ ಪಕ್ಷ ಸಂಘಟನೆ ಕುರಿತು ತರಬೇತಿ ಕೊಡಲಾಗುವುದು. ಇದಾದ ಬಳಿಕ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಹಮ್ಮಿಕೊಳ್ಳಲಾಗುವುದು’ ಎಂದು ವಿವರಿಸಿದರು.
ಬಳ್ಳಾರಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಆಶಾಲತಾ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಮಾಜಿ ಹೇಮಣ್ಣ, ಟಿಂಕರ್ ರಫೀಕ್, ಪಕ್ಷದ ಪ್ರಧಾನ ಕಾರ್ಯದರ್ಶಿ ನಿಂಬಗಲ್ ರಾಮಕೃಷ್ಣ, ಮುಖಂಡರಾದ ಮುನ್ನಿ, ಕವಿತಾ, ಭಾಗ್ಯಲಕ್ಷ್ಮಿ ಭರಾಡೆಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.