ADVERTISEMENT

ದೋಸ್ತಿ ಪಕ್ಷಗಳ ಭಿನ್ನಹಾದಿ

ವಿಶ್ವನಾಥ್‌ ಪಕ್ಷದ ಹೊಸ ಸಾರಥಿ * ಸ್ಥಳೀಯ ಸಂಸ್ಥೆ: ಜೆಡಿಎಸ್‌ ಸ್ವತಂತ್ರ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2018, 19:54 IST
Last Updated 5 ಆಗಸ್ಟ್ 2018, 19:54 IST
ಅಡಗೂರು ಎಚ್‌. ವಿಶ್ವನಾಥ್
ಅಡಗೂರು ಎಚ್‌. ವಿಶ್ವನಾಥ್   

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜಿಲ್ಲಾ ಮಟ್ಟದಲ್ಲೇ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್‌ ತೀರ್ಮಾನಿಸಿದ ಬೆನ್ನಲ್ಲೇ, ಮೈತ್ರಿ ಸರ್ಕಾರದ ಪಾಲುದಾರ ಪಕ್ಷ ಜೆಡಿಎಸ್‌ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದೆ. ಆ ಮೂಲಕ ಇದೇ 29ರಂದು ನಡೆಯುವ ಚುನಾವಣೆಯಲ್ಲಿ ದೋಸ್ತಿ ಪಕ್ಷಗಳು ಪರಸ್ಪರ ಕಾದಾಡಲಿವೆ.

ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಮುಖಂಡರ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು. ಧರ್ಮಸಿಂಗ್‌ ಮುಖ್ಯಮಂತ್ರಿಯಾಗಿದ್ದಾಗ ಮೈತ್ರಿಕೂಟದ ಪಕ್ಷಗಳು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದವು. ‘ಈ ಚುನಾವಣೆಯಲ್ಲಿ ಮೈತ್ರಿ ಬೇಡವೇ ಬೇಡ. ಇದರಿಂದ ಪಕ್ಷಕ್ಕೆ ನಷ್ಟವೇ ಹೆಚ್ಚು’ ಎಂದು ಜೆಡಿಎಸ್‌ ಮುಖಂಡರು ಈ ಹಿಂದೆಯೇ ಹೇಳಿದ್ದರು.

ಮೈತ್ರಿ ಹಾಗೂ ಹೊಂದಾಣಿಕೆಯ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಕಾಂಗ್ರೆಸ್‌ ಆಯಾ ಜಿಲ್ಲಾ ಮುಖಂಡರಿಗೇ ನೀಡಿದೆ ಎಂದು ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಶನಿವಾರ ತಿಳಿಸಿದ್ದರು. ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ದೇವೇಗೌಡರ ಜತೆಗೆ ಶನಿವಾರ ಸಮಾಲೋಚನೆ ನಡೆಸಿದ್ದರು. ಅದರ ಬೆನ್ನಲ್ಲೇ, ದೋಸ್ತಿ ಪಕ್ಷದ ತೀರ್ಮಾನ ಹೊರ ಬಿದ್ದಿದೆ.

ADVERTISEMENT

‘ಸ್ವತಂತ್ರವಾಗಿ ಸ್ಪರ್ಧೆ ಮಾಡಬೇಕು ಎಂಬುದು ಕಾಂಗ್ರೆಸ್‌ ನಾಯಕರ ಅಭಿಲಾಷೆಯೂ ಆಗಿದೆ. ಸಂಘರ್ಷಕ್ಕೆ ಅವಕಾಶ ಇಲ್ಲದಂತೆ ಹೋರಾಟ ನಡೆಸುತ್ತೇವೆ. ಸ್ವತಂತ್ರ ಸ್ಪರ್ಧೆಯಿಂದ ಮೈತ್ರಿ ಸರ್ಕಾರಕ್ಕೆ ಯಾವುದೇ ತೊಂದರೆ ಆಗುವುದಿಲ್ಲ’ ಎಂದು ದೇವೇಗೌಡ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಜತೆಗೆ ಮೈತ್ರಿ ಮಾಡಿಕೊಳ್ಳುತ್ತೇವೆ’ ಎಂದು ಸ್ಪಷ್ಟಪಡಿಸಿದರು. ‘ಕೆಲವು ಕ್ಷೇತ್ರಗಳಲ್ಲಿ ಹೊಂದಾಣಿಕೆ ಬಗ್ಗೆ ಇನ್ನಷ್ಟು ಚರ್ಚೆ ನಡೆಯಬೇಕಿದೆ. ಕಾಂಗ್ರೆಸ್‌ ರಾಷ್ಟ್ರೀಯ ಮುಖಂಡರ ಜತೆಗೆ ಚರ್ಚೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರುತ್ತೇವೆ. ಈ ವೇಳೆ ರಾಜ್ಯ ನಾಯಕರ ಭಾವನೆಗಳಿಗೂ ಬೆಲೆ ನೀಡಬೇಕಿದೆ’ ಎಂದರು.

ವಿಶ್ವನಾಥ್‌ ಸಾರಥಿ: ಪಕ್ಷದ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಹುಣಸೂರಿನ ಶಾಸಕ ಅಡಗೂರು ಎಚ್‌. ವಿಶ್ವನಾಥ್ ಅವರನ್ನು ಆಯ್ಕೆ ಮಾಡಲಾಯಿತು. ಎಚ್‌.ಡಿ.ಕುಮಾರಸ್ವಾಮಿ ಪಕ್ಷದ ಧ್ವಜ ನೀಡಿ ವಿಶ್ವನಾಥ್‌ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

‘ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎಂಬ ಸಿದ್ಧಾಂತ ನಮ್ಮ ಪಕ್ಷದಲ್ಲಿದೆ. ಮುಖ್ಯಮಂತ್ರಿ ಸ್ಥಾನದ ಜತೆಗೆ ರಾಜ್ಯ ಘಟಕದ ಅಧ್ಯಕ್ಷ ಸ್ಥಾನವನ್ನು ನಿಭಾಯಿಸುವುದು ಕಷ್ಟ ಎಂದು ಕುಮಾರಸ್ವಾಮಿ ನಾಲ್ಕೈದು ಸಲ ಹೇಳಿದ್ದರು. ಹೀಗಾಗಿ, ಹೋರಾಟಗಾರ ಹಾಗೂ ಅನುಭವಿ ವಿಶ್ವನಾಥ್‌ ಅವರನ್ನು ಆಯ್ಕೆ ಮಾಡಲಾಯಿತು’ ಎಂದು ದೇವೇಗೌಡ ತಿಳಿಸಿದರು.

ಹೊಸ ಮುಖಗಳಿಗೆ ಆದ್ಯತೆ: ‘ವಿವಿಧ ಘಟಕಗಳ ಪದಾಧಿಕಾರಿಗಳ ಬದಲಾವಣೆ ಮಾಡಬೇಕಿದೆ. ಹಲವು ಜಿಲ್ಲೆಗಳ ಘಟಕಗಳು ನಿಷ್ಕ್ರಿಯವಾಗಿವೆ. ನೇಮಕದ ವೇಳೆ ಯುವಕರಿಗೆ, ಹಿಂದುಳಿದವರಿಗೆ ಹಾಗೂ ಮಹಿಳೆಯರಿಗೆ ಆದ್ಯತೆ ನೀಡುತ್ತೇವೆ. 10 ದಿನಗಳಲ್ಲಿ ಸಭೆ ನಡೆಸಿ ಈ ಬಗ್ಗೆ ಚರ್ಚೆ ನಡೆಸುತ್ತೇವೆ’ ಎಂದರು.

‘ಇದೇ 11ರಿಂದ ನಾನು ಹಾಗೂ ರಾಜ್ಯ ಘಟಕದ ಅಧ್ಯಕ್ಷರು ಜಿಲ್ಲೆಗಳಿಗೆ ಪ್ರವಾಸ ಮಾಡುತ್ತೇವೆ. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಘಟಕಗಳ ಪುನರ್ರಚನೆ ಮಾಡುತ್ತೇವೆ’ ಎಂದರು.

ಕುಮಾರ ಬಜೆಟ್‌– ಕಿರು ಪುಸ್ತಕ

‘ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕಕ್ಕೆ ಬಜೆಟ್‌ನಲ್ಲಿ ಅನ್ಯಾಯ ಮಾಡಿದ್ದಾರೆ ಎಂದು ರಾಜಕೀಯ ಪಕ್ಷವೊಂದು ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ. ಸಿದ್ದರಾಮಯ್ಯ ಬಜೆಟ್‌ನಲ್ಲಿದ್ದ ಅಂಶಗಳೇನು, ಕುಮಾರಸ್ವಾಮಿ ಅವರು ಬಜೆಟ್‌ನಲ್ಲಿ ಯಾವ ಜಿಲ್ಲೆಗೆ ಎಷ್ಟು ಕೊಡುಗೆ ನೀಡಿದ್ದಾರೆ ಎಂಬ ವಿವರಗಳುಳ್ಳ ಕಿರುಪುಸ್ತಕವನ್ನು ವಿಶ್ವನಾಥ್‌ ನೇತೃತ್ವದ ಸಮಿತಿ 10ರೊಳಗೆ ಸಿದ್ಧಪಡಿಸಲಿದೆ. ಸ್ಥಳೀಯ ಸಂಸ್ಥೆಯ ಚುನಾವಣೆಯ ವೇಳೆಗೆ ಇದನ್ನು ಮನೆ ಮನೆಗೆ ಹಂಚಲಾಗುವುದು. ಯಾರ ಕೊಡುಗೆ ಎಷ್ಟು ಎಂಬುದನ್ನು ಜನರೇ ತೀರ್ಮಾನ ಮಾಡಲಿ’ ಎಂದು ದೇವೇಗೌಡ ತಿಳಿಸಿದರು.

‘ಉತ್ತರ ಕರ್ನಾಟಕದ ಕುರಿತ ಚರ್ಚೆಗೆ ವಿಧಾನಮಂಡಲದ ಅಧಿವೇಶನದಲ್ಲಿ ಎರಡು ದಿನಗಳನ್ನು ಮೀಸಲಿಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಆರೋಪ ಮಾಡುವವರು ಅಲ್ಲಿ ಚರ್ಚೆ ಮಾಡಲಿ. ಕೃಷ್ಣಾ ಮೇಲ್ದಂಡೆ ಯೋಜನೆಗೆ ₹20 ಸಾವಿರ ಕೋಟಿ ಮಂಜೂರಾಗಲು ಕಾರಣ ಯಾರು ಎಂಬುದು ಗೊತ್ತಿರಲಿ. ಸುಮ್ಮನೆ ಆರೋಪ ಮಾಡಲು ನಾಚಿಕೆಯಾಗುವುದಿಲ್ಲವೇ’ ಎಂದು ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.