ಹುಬ್ಬಳ್ಳಿ: ‘ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವುದಕ್ಕಿಂತ ಕಾಲು ಚಾಚಿದಷ್ಟೂ ಹಾಸಿಗೆ ಹಾಸು ಎನ್ನುವಷ್ಟು ಕಾಲ ಬದಲಾಗಿದೆ. ನವೋದ್ಯಮಿಗಳ ಆಕಾಂಕ್ಷೆಯೂ ಹೀಗೇ ಇದೆ’ ಎಂದು ಸಂಸದ ಶಿವಕುಮಾರ ಉದಾಸಿ ವಿಶ್ಲೇಷಿಸಿದರು.
‘ಉತ್ತರ ಕರ್ನಾಟಕದ ಅಭಿವೃದ್ಧಿ ಮತ್ತು ಕಾರ್ಯಸೂಚಿ’ ವಿಷಯ ಕುರಿತು ನಡೆದ ಮೊದಲ ಸಂವಾದದಲ್ಲಿ ಮಾತನಾಡಿದ ಅವರು, ‘ಮಾರುಕಟ್ಟೆ ಆಧಾರಿತ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನವೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ’ ಎಂದು ಪ್ರತಿಪಾದಿಸಿದರು.
‘ಮುಂದಿನ 10 ವರ್ಷಗಳಲ್ಲಿ ಬೆಂಗಳೂರು ನಂತರ ಪ್ರಮುಖ ನಗರಗಳ ಚಿತ್ರಣ ಗಮನಾರ್ಹವಾಗಿ ಬದಲಾಗಲಿದೆ. ಹುಬ್ಬಳ್ಳಿ–ಧಾರವಾಡದಲ್ಲಿ ₹1,000 ಕೋಟಿಗೂ ಹೆಚ್ಚು ಹೂಡಿಕೆಗೆ ಈಗಾಗಲೆ ಒಪ್ಪಂದವಾಗಿದೆ. ವಿಮಾನ ನಿಲ್ದಾಣ, ಬಂದರುಗಳ ಅಭಿವೃದ್ಧಿಯಿಂದ ಕೈಗಾರಿಕಾ ಸುಸ್ಥಿರತೆಯ ಭರವಸೆ ಮೂಡುತ್ತದೆ. ಕರ್ನಾಟಕ ನವೋದ್ಯಮದ ಹಬ್ ಆಗಿದೆ. ಹೂಡಿಕೆದಾರರಿಗೆ ಹೆಚ್ಚುವರಿ ಪ್ರದೇಶ ಅಗತ್ಯವಿರುವುದರಿಂದ ಇತರೆ ನಗರಗಳತ್ತ ಗಮನಹರಿಸುತ್ತಿದ್ದಾರೆ’ ಎಂದು ಲೆಕ್ಕಪರಿಶೋಧಕ ಶೇಷಗಿರಿ ಕುಲ್ಕರ್ಣಿ ಹೇಳಿದರು.
‘ಜನರ ಆರೋಗ್ಯ, ಸಮಾಜದ ಸ್ವಾಸ್ಥ್ಯ ಕಾಪಾಡುವ ದೃಷ್ಟಿಯಿಂದ ನಮ್ಮ ಕ್ಲಿನಿಕ್ ಉತ್ತಮ ಪರಿಕಲ್ಪನೆಯಾಗಿದೆ. ವಿಕೇಂದ್ರೀಕರಣದ ಆಧಾರದಲ್ಲಿ ಇಂತಹ ಯೋಜನೆಯನ್ನು ಶೀಘ್ರ ಅನುಷ್ಠಾನ ಮಾಡಿದ ಏಕೈಕ ರಾಜ್ಯ ಕರ್ನಾಟಕವಾಗಿದೆ. ಇದು ರಾಜ್ಯದ ವೇಗದ ಆಡಳಿತಕ್ಕೆ ಸಾಕ್ಷಿಯಾಗಿದೆ’ಎಂದು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಡಾ. ಪಾಂಡುರಂಗ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರು.
‘ರಾಜ್ಯದ ಸರ್ವಾಂಗೀಣ ಅಭಿವೃದ್ದಿಯಲ್ಲಿ ಸ್ತ್ರೀ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಇದರಿಂದ ಸಾಮಾಜಿಕ ಅಭಿವೃದ್ಧಿಯೂ ಸಾಧ್ಯ. ತಾಯಿಗೆ ಶಿಕ್ಷಣ, ಉತ್ತಮ ವಸತಿ, ನೀರು, ಆಹಾರ ನೀಡುವುದರಿಂದ ಅಪೌಷ್ಟಿಕತೆಗೆ ಶಾಶ್ವತ ಪರಿಹಾರ ಸಾಧ್ಯ’ ಎಂದು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಡಾ. ತುಳಸಿಮಾಲಾ ಅಭಿಪ್ರಾಯಪಟ್ಟರು.
*
ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಹೂಡಿಕೆಯ ಅಗತ್ಯವಿದೆ. ಈ ಉದ್ದೇಶದಿಂದಲೆ ರಾಜ್ಯ ಸರ್ಕಾರ ಬೆಂಗಳೂರಿನಾಚೆ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಿದೆ
-ಶೇಷಗಿರಿ ಕುಲ್ಕರ್ಣಿ, ಲೆಕ್ಕಪರಿಶೋಧಕ
*
ಹುಬ್ಬಳ್ಳಿ ಈ ಮೊದಲು ಜವಳಿ ಪಾರ್ಕ್ ಆಗಿತ್ತು. ಇಲ್ಲಿಗೆ ಬಂದವರಿಗೆ ಏನಾದರೂ ಕೆಲಸ ಸಿಗುತ್ತದೆಂಬ ಭರವಸೆ ಇತ್ತು. ಜವಳಿ ಪಾರ್ಕ್ ಸ್ಥಾಪನೆಯಿಂದ ಈ ಇತಿಹಾಸ ಮರುಸೃಷಿಯಾಗಲಿದೆ.
-ಡಾ. ಪಾಂಡುರಂಗ ಪಾಟೀಲ, ಮಾಜಿ ಮೇಯರ್, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ
*
ಮಹಿಳೆಯರಿಗೂ ಡಿಜಿಟಲೀಕೃತ ಶಿಕ್ಷಣ ದೊರೆತಲ್ಲಿ, ಅವರಲ್ಲಿ ಕೌಶಲ, ಆತ್ಮವಿಶ್ವಾಸ ವೃದ್ಧಿಸು ತ್ತದೆ. ಇದರಿಂದ ರಾಜ್ಯದ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಲು ಸಾಧ್ಯವಾಗುತ್ತದೆ.
-ಡಾ. ತುಳಸಿಮಾಲಾ, ಕುಲಪತಿ, ಅಕ್ಕಮಹಾದೇವಿ ಮಹಿಳಾ ವಿ.ವಿ, ವಿಜಯಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.