ಬೆಂಗಳೂರು:‘ದಲಿತರನ್ನು ಒಡೆಯಬೇಡಿ. ಎಡಗೈ–ಬಲಗೈ ಅಂತ ಒಬ್ಬರ ಮೇಲೆ ಒಬ್ಬರನ್ನು ಎತ್ತಿಕಟ್ಟಿದರೆ ಯಾರಿಗೂ ಲಾಭವಿಲ್ಲ. ದಲಿತರನ್ನು ಒಡೆಯಲು ಹೋದರೆ ಕೊನೆಗೆ ನೀವು ಈ ಸಮಾಜವನ್ನು ಒಡೆದು, ಅವರಿಗೆ ಸಿಕ್ಕಿರುವ ಶಕ್ತಿಯನ್ನು ಕಳೆದುಕೊಳ್ಳುತ್ತೇವೆ' ಎಂದು ಹೈದರಾಬಾದ್ ಕರ್ನಾಟಕದ ಈ ಪ್ರಭಾವಿ ನಾಯಕ, ಲೋಕಸಭೆಯಲ್ಲಿ ಕಾಂಗ್ರೆಸ್‌ನ ದನಿಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.
ಖಡಕ್ ಮಾತುಗಳಿಂದ ಪ್ರಧಾನಿಯನ್ನು ನೇರಾನೇರ ತರಾಟೆಗೆ ತೆಗೆದುಕೊಳ್ಳುವ ಖರ್ಗೆ ಅವರ ಮೇಲೆ ಈ ಬಾರಿ ಕಾಂಗ್ರೆಸ್ ಭಾರೀ ನಿರೀಕ್ಷೆ ಇಟ್ಟುಕೊಂಡಿದೆ. ‘ಪ್ರಜಾವಾಣಿ’ ಕಚೇರಿಯಲ್ಲಿ ಗುರುವಾರ ನಡೆದ ‘ಪ್ರಜಾ ಮತ’ ಸಂವಾದದಲ್ಲಿ ಖರ್ಗೆ ಮಾತುಗಳ ಪೂರ್ಣ ಸಾರ ಇಲ್ಲಿದೆ.
ಪ್ರ.ವಾ: ದಲಿತರನ್ನು ಮುಖ್ಯಮಂತ್ರಿ ಮಾಡಲು ಆಗಲಿಲ್ಲ ಯಾಕೆ?
ಖರ್ಗೆ: ‘ನೀವು ನನ್ನನ್ನು ದಲಿತ ಅಂತಷ್ಟೇ ಅಂದುಕೊಳ್ತೀರಾ? ನಾನು ಮುಂಚೂಣಿ ನಾಯಕ. ದಲಿತರೇ ಮುಖ್ಯಮಂತ್ರಿಯಾಗಬೇಕು ಎನ್ನುವ ಮನಃಸ್ಥಿತಿಯೇ ತಪ್ಪು. ವ್ಯಕ್ತಿಯನ್ನು ಜಾತಿಯಿಂದ ನೋಡೋದು ಬಿಡಿ. ಅಗಲೇ ನಾವು ಯಶಸ್ವಿಯಾಗಲು ಸಾಧ್ಯ?
‘ಅವನು ದಲಿತ ಪಾಪ, ಅವಕಾಶ ಕೊಡಬೇಕಿತ್ತು’ ಅಂತಾರೆ. ಯಾಕೆ ಪಾಪ ಅನ್ನಬೇಕು. ದೇಶದಲ್ಲಿ ದಲಿತರು ಎಷ್ಟು ಕಡೆ ಆಡಳಿತ ನಡೆಸಿಲ್ಲ? ಇದು ನನಗೆ ಇರಿಸುಮುರಿಸಿನ ಪ್ರಶ್ನೆ.
‘ನನಗೆ ಮುಖ್ಯಮಂತ್ರಿಯಾಗುವ ಆಸೆ ಇದೆಯೇ ಇಲ್ಲವೇ ಅನ್ನೋದು ಬೇರೆ. ಅದರೆ ನಾನು ನಂಬುವ ಸಿದ್ಧಾಂತ–ಪಕ್ಷ ಉಳಿಯಬೇಕು ಎನ್ನುವುದು ಮುಖ್ಯ. ನಮ್ಮ ಪಕ್ಷ–ಸಿದ್ಧಾಂತವೇ ಇಲ್ಲದಿದ್ದರೆ ನನ್ನ ಆಸೆಗೆ ಏನು ಬೆಲೆ ಇರಲು ಸಾಧ್ಯ? ನನ್ನ ಐಡಿಯಾಗಳನ್ನು ಯಾರಾದರೂ ಅನುಷ್ಠಾನಕ್ಕೆ ತಂದರೆ ನನಗೆ ಅದೇ ದೊಡ್ಡ ತೃಪ್ತಿ.
‘ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಖರ್ಗೆ ಮಾಡುವ ವಿಚಾರ ಈ ಹಿಂದೆ ಪ್ರಸ್ತಾಪವಾಗಿತ್ತು. ಆದರೆ ಅದನ್ನು ಈಗ ಚರ್ಚಿಸುವುದು ಸರಿಯಲ್ಲ. ಈಗ ನಾವೆಲ್ಲರೂ ಕೂಡಿ ಚುನಾವಣೆಗೆ ಹೋಗಬೇಕಿದೆ.
‘ದಲಿತರನ್ನು ಒಡೆಯಬೇಡಿ. ಎಡಗೈ–ಬಲಗೈ ಅಂತ ಒಬ್ಬರ ಮೇಲೆ ಒಬ್ಬರನ್ನು ಎತ್ತಿಕಟ್ಟಿದರೆ ಯಾರಿಗೂ ಲಾಭವಿಲ್ಲ. ಯಾರಿಗೆ ಅನ್ಯಾಯವಾಗಿದೆ? ಯಾವ್ಯಾವ ರಾಜಕೀಯ ಪಕ್ಷಗಳಲ್ಲಿ ನಿಮಗೆ ಮನ್ನಣೆ ಇದೆ ಗಮನಿಸಿಕೊಳ್ಳಿ. ಆದರೆ ಜಗಳ ಹಚ್ಚುವುದು ತಪ್ಪು. ದಲಿತರನ್ನು ಒಡೆಯಲು ಹೋದರೆ ಕೊನೆಗೆ ನೀವು ಈ ಸಮಾಜವನ್ನು ಒಡೆದು, ಅವರಿಗೆ ಸಿಕ್ಕಿರುವ ಶಕ್ತಿಯನ್ನು ಕಳೆದುಕೊಳ್ಳುತ್ತೇವೆ.
‘ಯೋಧರು ಮತ್ತು ಸರ್ಜಿಕಲ್ ಸ್ಟ್ರೈಕ್ ಮೇಲೆ ಓಟು ಕೇಳಿಲ್ಲ’
‘ಉದ್ಯೋಗ ಖಾತ್ರಿಯಂಥ ಉತ್ತಮ ಕಾರ್ಯಕ್ರಮ ನಾವು ಜಾರಿ ಮಾಡಿದ್ವಿ. ಬಡವರಿಗೆ ಶಕ್ತಿ ಕೊಡಬೇಕು ಅಂತ ತಂದಿದ್ದು ನಾವು. ಇದರಲ್ಲಿ ಜಾತಿ ಪ್ರಶ್ನೆ ಎಲ್ಲಿದೆ? ಆಹಾರ ಭದ್ರತೆ, ಶಿಕ್ಷಣ ಹಕ್ಕು, ಮಾಹಿತಿ ಹಕ್ಕು ಒಳ್ಳೆಯ ಯೋಜನೆಗಳು ಅಲ್ವಾ? ಆದರೆ, ಈ ಸರ್ಕಾರ ಮಾಹಿತಿ ಆಯುಕ್ತರನ್ನೇ ಇವರು ನೇಮಿಸ್ತಿಲ್ಲ. ಉದ್ಯೋಗ ಖಾತ್ರಿಯ ಕೆಲಸಗಳಿಗೆ ಹಣ ಬಿಡುಗಡೆ ಮಾಡ್ತಿಲ್ಲ. ಚುನಾವಣೆಯಲ್ಲಿ ಇದನ್ನೆಲ್ಲಾ ಹೇಳ್ತೀವಿ. ಇವರ ವೈಫಲ್ಯಗಳನ್ನೇ ಮುಂದಿಟ್ಟು ಮತ ಕೇಳ್ತೀವಿ.
‘ನೀವು (ಬಿಜೆಪಿ) ಜನರನ್ನು ಭಾವನಾತ್ಮಕ ಶೋಷಣೆ ಮಾಡ್ತಿದ್ದೀರಿ. ಇದು ಜನರಿಗೆ ಮೋಸ ಮಾಡಿದಂತೆ. ನೀವು ಎಷ್ಟೇ ಕಥೆ ಹೇಳಿದ್ರೂ ಜನರು ನಿರುದ್ಯೋಗ, ಜಿಡಿಪಿ, ನೋಟು ಅಮಾನ್ಯದ ಪರಿಣಾಮಗಳನ್ನು ಅರ್ಥ ಮಾಡಿಕೊಳ್ತಾರೆ. ಮತ ಹಾಕುವಾಗ ಯೋಚಿಸ್ತಾರೆ. ಕೆಲವು ಸಮಯ ಕೆಲವು ವಿಚಾರಗಳನ್ನು ಹೇಳಿಕೊಂಡು ಹೋಗ್ತಾರೆ. ನಮ್ಮ ಮಾತನ್ನು ಜನರು ಒಪ್ಪಿಕೊಳ್ತಾರೆ ಅಂತ ನನ್ನ ಅಭಿಪ್ರಾಯ.
‘ಯೋಧರು ಮತ್ತು ಸರ್ಜಿಕಲ್ ಸ್ಟ್ರೈಕ್ ಮೇಲೆ ಓಟು ಕೇಳಿಲ್ಲ. ನಾವು ಮಾಡಿರುವ ಅಭಿವೃದ್ಧಿ ಕೆಲಸಗಳ ಮೇಲೆ ಮತ ಕೇಳುತ್ತೇವೆ.
‘ಪಾಕಿಸ್ತಾನದ ವಿಚಾರಕ್ಕೆ ಬರೋಣ. ಪಾಕಿಸ್ತಾನವನ್ನು ಮೂರು ಬಾರಿ ಸೋಲಿಸಿದ್ದೇವೆ. ಆದರೆ ಅದನ್ನು ಭಾವನಾತ್ಮಕವಾಗಿ ಜನರ ಮುಂದಿಟ್ಟು ಮತ ಕೇಳಲಿಲ್ಲ. ನಾವು ಕೇಳಿದ್ದು ನಾವು ಏನೇನು ಅಭಿವೃದ್ಧಿ ಮಾಡಿದ್ದೇವೆ. ಅದನ್ನೇ ಹೇಳಿಕೊಂಡು ಬಂದ್ವಿ.
‘ನಿಮ್ಮ ವಿಚಾರ ಎಷ್ಟೇ ಒಳ್ಳೇದಿರಬಹುದು ಆದರೆ ಅನುಷ್ಠಾನಕ್ಕೆ ತರದಿದ್ರೆ ಪ್ರಯೋಜವಿಲ್ಲ. ಅನುಷ್ಠಾನಕ್ಕೆ ತಂದದ್ದನ್ನು ಜನರಿಗೆ ಅರ್ಥ ಮಾಡಿಸದಿದ್ದರೆ ಕಷ್ಟ. ನಮ್ಮ ಸಮಸ್ಯೆ ಇದು. ನಮ್ಮ ವಿಚಾರ ಚೆನ್ನಾಗಿದೆ. ಸಾಕಷ್ಟು ಕಾರ್ಯಕ್ರಮ ಜಾರಿ ಮಾಡಿದ್ದೇವೆ. ಅದರೆ ಮಾರ್ಕೆಟಿಂಗ್ ಸರಿಯಾಗಿ ಮಾಡಲಿಲ್ಲ.
‘ನಮ್ಮದು ಸೈದ್ಧಾಂತಿಕ ಹೋರಾಟ, ಭಾವನಾತ್ಮಕ ಹೋರಾಟ ಅಲ್ಲ. ನಿಮಗೆ ಕೋಮುವಾದಿ ಆರ್‌ಎಸ್‌ಎಸ್ ವಿಚಾರ ಬೇಕೋ? ಅಥವಾ ಜಾತ್ಯತೀಯ ತತ್ವ ಬೇಕೋ ಅಂತ ಕೇಳ್ತಿದ್ದೀವಿ. ಇದರಲ್ಲಿ ಖರ್ಗೆ–ದೇವೇಗೌಡರ ಮೇಲುಗೈ–ಕೆಳಕೈ ವಿಚಾರ ಅಪ್ರಸ್ತುತ.
‘ತುಮಕೂರು ಕ್ಷೇತ್ರ ನಾವೇ ಪಡೆದುಕೊಳ್ಳಲು ಪ್ರಯತ್ನ ಮಾಡ್ತೀವಿ’
‘ನಾನು ಮಹಾರಾಷ್ಟ್ರ ಸೆಲೆಕ್ಷನ್ ಸಮಿತಿಯಲ್ಲಿದ್ದೆ. ತುಮಕೂರನ್ನು ಕಾಂಗ್ರೆಸ್ ಬಿಟ್ಟುಕೊಟ್ಟ ಬಗ್ಗೆ ಏನೂ ಹೇಳೋಕೆ ಆಗಲ್ಲ. ಸಮಿತಿಯಲ್ಲಿರೋರ ಜೊತೆಗೆ ಮಾತನಾಡಿ ಏನಾಯಿತು ಅಂತ ತಿಳಿದುಕೊಳ್ಳುವೆ. ನಾವೇ ಪಡೆದುಕೊಳ್ಳಲು ಪ್ರಯತ್ನ ಮಾಡ್ತೀವಿ. ಅವರು ಒಪ್ಪದಿದ್ರೆ ಮುಂದಿನದ್ದು ನೋಡೋಣ.
‘ಈಗ ಸಮ್ಮಿಶ್ರ ಸರ್ಕಾರ, ಮೈತ್ರಿಕೂಟ ಒಗ್ಗೂಡಿ ಚುನಾವಣೆಗೆ ಹೋಗ್ತಿದ್ದೀವಿ. ಭಿನ್ನಮತದ ಮಾತು ಬೇಡ.
‘ಕಲಬುರ್ಗಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ’
‘ಮೋದಿ– ಅಮಿತ್ ಶಾ ಕಲಬುರ್ಗಿಗೆ ಎಷ್ಟು ಸಲ ಬೇಕಾದ್ರೂ ಬರಲಿ. ನಾನು ಕಲಬುರ್ಗಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಕೇಂದ್ರೀಯ ವಿವಿ ಬರುವಂತೆ ಮಾಡಿದೆ. ನಾವು ಮೆಡಿಕಲ್, ಡೆಂಟಲ್, ನರ್ಸಿಂಗ್, ಪ್ಯಾರಾ ಮೆಡಿಕಲ್ ಕಾಲೇಜು ಕಲಬುರ್ಗಿಯಲ್ಲಿದೆ. ರಾಜಾಜಿನಗರದಲ್ಲಿರುವ ಇಎಸ್‌ಐ ಆಸ್ಪತ್ರೆಯನ್ನು ನಾನು ಸಚಿವನಾಗಿದ್ದಾಗಲೇ ಶುರು ಮಾಡಿದ್ದೆ. ಅದನ್ನು ಮೋದಿ ಮತ್ತೊಮ್ಮೆ ಉದ್ಘಾಟಿಸಿದರು.
‘ನಾನು ರೈಲ್ವೆ ಸಚಿವನಾಗಿದ್ದಾಗ 27 ಹೊಸ ರೈಲುಗಳನ್ನು ಶುರು ಮಾಡಿದ್ದೆ. ಎಲ್ಲಿಯಾದರೂ ನಾವು ಡಂಗೂರ ಹೊಡೆದುಕೊಂಡಿದ್ದೇವೆಯೇ?
ಹೊಟ್ಟೆಕಿಚ್ಚಿಗೆ ಔಷಧಿ ಇಲ್ಲ
‘ಜಗತ್ತಿನಲ್ಲಿ ಎಲ್ಲದಕ್ಕೂ ಔಷಧಿ ಇದೆ. ಆದರೆ ಹೊಟ್ಟೆಕಿಚ್ಚಿಗೆ ಔಷಧಿ ಇಲ್ಲ. ನಿಮಗೆ ಗೊತ್ತಿದ್ರೆ ದಯವಿಟ್ಟು ತಿಳಿಸಿ. ಅವರಿಗೆ (ಬಿಜೆಪಿ) ಕೊಡ್ತೀನಿ.
‘ರಾಷ್ಟ್ರಪತಿಗಳು ಭಾಷಣವನ್ನು ‘ದಯೆಯೇ ಧರ್ಮದ ಮೂಲವಯ್ಯ‘ ಅಂತ ಶುರು ಮಾಡಿದ್ದರು. ಆಗ ಬಸವಣ್ಣ ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಅಂತ ಹೇಳಿದ್ದಾರೆ ಅಂತ ಮೋದಿ ಅವರಿಗೆ ಹೇಳಿದೆ. ಅವರು 25 ವರ್ಷಗಳ ಹಿಂದೆ ನೀವು ನಿಮ್ಮ ಪಕ್ಷದವರಿಗೆ ಹೇಳಬೇಕು ಅಂದ್ರು. ‘ಹೌದು, ಆಗ ನಾನೂ ಇರಲಿಲ್ಲ–ನೀವೂ ಇರಲಿಲ್ಲ. ಈಗ ನೀವು ಇದ್ದೀರಿ ಹೇಳ್ತಿದ್ದೀನಿ ಅಂದೆ.
ಮಾತೆ ಮಹಾದೇವಿ ನಿಧನಕ್ಕೆ ಖರ್ಗೆ ಸಂತಾಪ
ಲಿಂಗಾಯತ ಧರ್ಮದ ಪ್ರಮುಖ ನಾಯಕರಾದ ಮಾತೆ ಮಹಾದೇವಿ ನಿಧನಕ್ಕೆ ಮಲ್ಲಿಕಾರ್ಜುನ ಖರ್ಗೆ ಇದೇ ವೇಳೆ ಸಂತಾಪ ವ್ಯಕ್ತಪಡಿಸಿದರು.
‘ಮಾತೆ ಮಹಾದೇವಿ ಅವರು ಅನೇಕರ ಟೀಕೆ–ಟಿಪ್ಪಣಿ ಸಹಿಸಿಕೊಂಡು ಬಸವಣ್ಣನ ಮಾರ್ಗದಲ್ಲಿ ನಡೆದವರು. ಅವರಿಗೆ ನನ್ನ ಹೃತ್ಪೂರ್ವಕ ಗೌರವ ಸಲ್ಲಿಸುತ್ತೇನೆ’ ಎಂದರು.
ತಮ್ಮ ರಾಜಕೀಯ ಆರಂಭ ಕುರಿತು ಅವಲೋಕಿಸಿ ಖರ್ಗೆ
ಸಂವಾದದ ಆರಂಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ರಾಜಕೀಯ ಪ್ರವೇಶ ಕುರಿತು ಅವಲೋಕಿಸಿದ ಒಂದೆರಡು ಮಾತುಗಳು ಇಲ್ಲಿವೆ.
‘ನಾನು ನುಡಿದಂತೆ ನಡೆಯಬೇಕು ಎನ್ನುವವ. ಕೇವಲ ಹುದ್ದೆಗಳಿಗೆ ಅಥವಾ ರಾಜಕೀಯ ಉನ್ನತ ಸ್ಥಾನಮಾನಗಳಿಗಾಗಿ ಹೋರಾಡುವುದಕ್ಕಿಂತ ನಂಬಿದ ತತ್ವಗಳನ್ನು ಹೇಗೆ ಜಾರಿಗೆ ತರಬಹುದು. ಅದಕ್ಕೆ ಹೇಗೆ ನಾವು ನಮ್ಮದೇ ಆದ ಕೊಡುಗೆ ಕೊಡಬಹುದು ಎನ್ನುವ ದೃಷ್ಟಿಕೋನದಿಂದ ರಾಜಕೀಯಕ್ಕೆ ಬಂದೆ.
‘ಪ್ರಜಾತಂತ್ರ ಮತ್ತು ಬರುವ ಚುನಾವಣೆಗೆ ವಿಶೇಷವಾಗಿ ಸಂಬಂಧಿಸಿದ ಸಂವಾದ ಇದು. ಕೆಲವು ತತ್ವಗಳಿಗಾಗಿ ಹೋರಾಡುವ ಉದ್ದೇಶದಿಂದ ನಾನು ರಾಜಕೀಯಕ್ಕೆ ಬಂದೆ.
‘ನಂತರದ ದಿನಗಳಲ್ಲಿ ಕಾಂಗ್ರೆಸ್ ಒಡೆಯಿತು. ಇಂದಿರಾ ಗಾಂಧಿ ಅವರು 10 ಅಂಶಗಳ ಕಾರ್ಯಕ್ರಮ ಅನುಷ್ಠಾನಕ್ಕೆ ಬಂತು. ಇಂದಿರಾ ಅವರು 20 ಅಂಶಗಳಿಗಿಂತ ಮೊದಲು ಇದನ್ನು ತಂದಿದ್ದರು. 1970ರ ದಶಕದಲ್ಲಿ ಇದು ಹೆಚ್ಚು ಚರ್ಚೆಗೆ ಬಂತು.
‘ಮಹಾನುಭಾವರ ತತ್ವಗಳ ಆಧಾರದ ಮೇಲೆ ಸಮಾಜ ಕಟ್ಟಿದರೆ ಒಳ್ಳೆಯದು ಅನ್ನಿಸಿತು. ಗುಲ್ಬರ್ಗಾದಲ್ಲಿ 1964–65ರಲ್ಲಿ ನಾನಾಗ ವಿದ್ಯಾರ್ಥಿ ನಾಯಕನಾಗಿದ್ದೆ. ನಂತರ ಎರಡೇ ವರ್ಷಗಳಲ್ಲಿ ಅಂದರೆ 72ರಲ್ಲಿ ಎಂಎಲ್‌ಎ ಆದೆ. ನಂತರ ಇಲ್ಲಿಯವರೆಗೆ ರಾಜಕೀಯ ಮಾಡಿಕೊಂಡೇ ಬಂದಿದ್ದೇನೆ. ನಾನು ನಂಬಿದ ತತ್ವಗಳನ್ನು ಆದಷ್ಟು ಅನುಷ್ಠಾನಕ್ಕೆ ತರಲು ಯತ್ನಿಸುತ್ತಿದ್ದೇನೆ. ರಾಜ್ಯ ಮತ್ತು ಕೇಂದ್ರದಲ್ಲಿ ಹಲವು ಇಲಾಖೆಗಳನ್ನು ನಿರ್ವಹಿಸಿದ್ದೇನೆ.
‘ಪ್ರಗತಿಪರ ತತ್ವಗಳು, ವಿಚಾರಗಳು ಮತ್ತು ಕಾರ್ಯಕ್ರಮಗಳನ್ನು ನೋಡಿದ ಮೇಲೆ ರಾಜಕೀಯದಲ್ಲಿ ಹೆಚ್ಚಿನ ಶಕ್ತಿ ಪಡೆಯಲು ಸಂಘಟನೆ ಬಹಳ ಮುಖ್ಯ ಅಂತ, ನಾನು ಸ್ವತಂತ್ರ ವಿಚಾರಧಾರೆಯವನಾಗಿದ್ದರೂ 1969ರಲ್ಲಿ ಕಾಂಗ್ರೆಸ್ ಗುಲ್ಬರ್ಗಾ ಜಿಲ್ಲಾ ಘಟಕದ ಅಧ್ಯಕ್ಷನಾದೆ.
ಕಾರ್ಮಿಕ, ಸಮಾಜ ಕಲ್ಯಾಣ ಮತ್ತು ರೈಲ್ವೆ ಇಲಾಖೆಗಳನ್ನು ಕೇಂದ್ರದಲ್ಲಿ ನಿರ್ವಹಿಸಿದ್ದೇನೆ. ನನಗೆ ಯಾವುದೇ ಜವಾಬ್ದಾರಿ ಕೊಟ್ಟರೂ ಹೊಸ ಯೋಜನೆ ತರಲು ಯತ್ನಿಸಿದ್ದೇನೆ. ಕೇವಲ ಕುರ್ಚಿಗಾಗಿ ನಾನು ಹೋರಾಡಲಿಲ್ಲ. ಆಗ ನಿಜಲಿಂಗಪ್ಪನಂಥ ನಾಯಕರು ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ವೀರೇಂದ್ರ ಪಾಟೀಲರಂಥ ಹಿರಿಯರು ಮುಖ್ಯಮಂತ್ರಿ ಆಗಿದ್ದರು. ನಾನು ಮಾತ್ರ ಇಂದಿರಾ ಜೊತೆಗೆ ಗಟ್ಟಿಯಾಗಿ ನಿಂತೆ ಎಂದು ಹಿಂದಿನ ಸಂಗತಿಗಳನ್ನು ಖರ್ಗೆ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.