ADVERTISEMENT

LS polls 2024 | ಮುಗಿದ ಮೊದಲ ಹಂತ: ಇನ್ನು ಉತ್ತರದತ್ತ ಚಿತ್ತ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2024, 23:50 IST
Last Updated 26 ಏಪ್ರಿಲ್ 2024, 23:50 IST
   

ಬೆಂಗಳೂರು: ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಶುಕ್ರವಾರ ಮತದಾನ ಮುಗಿದಿದ್ದು, ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಶುಕ್ರವಾರದಿಂದಲೇ ಚುನಾವಣಾ ಪ್ರಚಾರದ ಕಾವು ಏರಿದೆ. ಎಲ್ಲ ಘಟಾನುಘಟಿ ನಾಯಕರು ಮಲೆನಾಡು, ಕರಾವಳಿ ಮತ್ತು ಉತ್ತರದತ್ತ ಮುಖ ಮಾಡಲಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಹಲವು ಮಂದಿ ಸಚಿವರು, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ, ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ, ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಮೂರೂ ಪಕ್ಷಗಳ ಪ್ರಮುಖ ನಾಯಕರು ಇದುವರೆಗೆ ದಕ್ಷಿಣ ಪಥದಲ್ಲೇ ಮೊಕ್ಕಾಂ ಮಾಡಿ, ಪ್ರಚಾರಕ್ಕೆ ಬಿರುಸು ತಂದಿದ್ದರು. 

ಮೈಸೂರು ಮತ್ತು ಚಾಮರಾಜನಗರ ಕ್ಷೇತ್ರಗಳಲ್ಲಿ ಯಶ ಸಾಧಿಸುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರತಿಷ್ಠೆಯಾಗಿದ್ದರೆ, ತಮ್ಮ ಡಿ.ಕೆ. ಸುರೇಶ್ ಅವರನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗೆಲ್ಲಿಸಿಕೊಳ್ಳಬೇಕಾದ ಒತ್ತಡದಲ್ಲಿ ಶಿವಕುಮಾರ್‌ ಇದ್ದರು. ಅದರ ಜತೆಗೆ, ಒಕ್ಕಲಿಗ ನಾಯಕರೆಂಬ ಉಮೇದಿನಲ್ಲಿರುವ ಅವರಿಗೆ ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲೇಬೇಕಾದ ಸವಾಲು ಕೂಡ ಹೆಗಲೇರಿತ್ತು.

ADVERTISEMENT

ಮಂಡ್ಯದಲ್ಲಿ ಸ್ವತಃ ಯಶ ಸಾಧಿಸುವ ಜತೆಗೆ ಪಕ್ಷದ ಇತರ ಇಬ್ಬರನ್ನು ಗೆಲುವಿನ ದಡ ಮುಟ್ಟಿಸುವ ಜವಾಬ್ದಾರಿ ಕುಮಾರಸ್ವಾಮಿ ಅವರ ಮೇಲಿತ್ತು. ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಬಾಮೈದ ಡಾ.ಸಿ.ಎನ್‌. ಮಂಜುನಾಥ್‌ ಅವರನ್ನೂ ಗೆಲ್ಲಿಸಬೇಕಾದ ಹೊಣೆಯೂ ಇತ್ತು. ಹಾಸನದಲ್ಲಿ ಮೊಮ್ಮಗನ ಭವಿಷ್ಯ ಖಾತ್ರಿ ಪಡಿಸುವ ಜತೆಗೆ, ಪಕ್ಷದ ಅಭ್ಯರ್ಥಿಗಳು ಮತ್ತು ಅಳಿಯನ ಗೆಲುವು ಖಾತರಿಪಡಿಸುವ ಜತೆಗೆ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೂ ಮತ ಸೆಳೆಯಬೇಕಾದ ಹೊಣೆ ದೇವೇಗೌಡರ ಮೇಲಿತ್ತು.

ಮಿತ್ರಪಕ್ಷ ಜೆಡಿಎಸ್‌ನ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವುದರ ಜತೆಗೆ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದ ಕ್ಷೇತ್ರಗಳು ಕೈತಪ್ಪದಂತೆ ತಡೆಯುವ ಸವಾಲು ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಮೇಲಿತ್ತು. ಮಕ್ಕಳನ್ನು ಚುನಾವಣಾ ಕಣಕ್ಕಿಳಿಸಿದ್ದ ರಾಜ್ಯದ ಸಚಿವರಾದ ರಾಮಲಿಂಗಾ ರೆಡ್ಡಿ ಮತ್ತು ಡಾ.ಎಚ್‌.ಸಿ. ಮಹದೇವಪ್ಪ ಇಬ್ಬರಿಗೂ ಈ ಚುನಾವಣೆ ದೊಡ್ಡ ಸವಾಲಾಗಿತ್ತು.

ಚುನಾವಣಾ ಪ್ರಚಾರ ಆರಂಭವಾದ ದಿನಗಳಿಂದಲೂ ಮೂರೂ ಪಕ್ಷಗಳ ಬಹುತೇಕ ನಾಯಕರು ಮೊದಲ ಹಂತದಲ್ಲಿ ಮತದಾನ ನಡೆದಿರುವ 14 ಕ್ಷೇತ್ರಗಳ ಸುತ್ತವೇ ಗಿರಕಿ ಹೊಡೆಯುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎರಡೂ ಪಕ್ಷಗಳ ರಾಷ್ಟ್ರೀಯ ನಾಯಕರು ಕೂಡ ಮೊದಲ ಹಂತದ ಕ್ಷೇತ್ರಗಳತ್ತ ಗಮನ ಕೇಂದ್ರೀಕರಿಸಿದ್ದರು.

ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಶುಕ್ರವಾರದಿಂದಲೇ ಎರಡನೇ ಹಂತದ ಕ್ಷೇತ್ರಗಳಲ್ಲಿ ಪ್ರಚಾರ ಆರಂಭಿಸಿದ್ದಾರೆ.  ಮೋದಿ, ಅಮಿತ್‌ ಶಾ ಕೂಡ ಈ ಕ್ಷೇತ್ರಗಳಲ್ಲಿ ಮತಬೇಟೆಗೆ ಸಜ್ಜಾಗಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇನ್ನು ಒಂಬತ್ತು ದಿನ ಮಲೆನಾಡು, ಉತ್ತರ ಮತ್ತು ಕಲ್ಯಾಣ ಕರ್ನಾಟಕದತ್ತ ತಮ್ಮ ಗಮನ ಕೇಂದ್ರೀಕರಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.