ADVERTISEMENT

ಬಿಜೆಪಿಯಲ್ಲಿ ಮತ್ತೆ ಯಡಿಯೂರಪ್ಪ ಪರ್ವ: ಸಂತೋಷ್‌– ಜೋಶಿಗೆ ಹಿನ್ನಡೆ

ಬಿಎಸ್‌ವೈ ಮತ್ತು ಪುತ್ರ ರ ಅವರಿಗೆ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2024, 23:30 IST
Last Updated 2 ಫೆಬ್ರುವರಿ 2024, 23:30 IST
<div class="paragraphs"><p>ಬಿ.ಎಸ್‌. ಯಡಿಯೂರಪ್ಪ ಮತ್ತು ಬಿ.ವೈ. ವಿಜಯೇಂದ್ರ </p></div>

ಬಿ.ಎಸ್‌. ಯಡಿಯೂರಪ್ಪ ಮತ್ತು ಬಿ.ವೈ. ವಿಜಯೇಂದ್ರ

   

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ 20ಕ್ಕೂ ಹೆಚ್ಚು ಸ್ಥಾನ ಗೆಲ್ಲಲೇಬೇಕೆಂಬ ಬಿಜೆಪಿ ವರಿಷ್ಠರ ಅಪೇಕ್ಷೆ, ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಮಗ ಬಿ.ವೈ.ವಿಜಯೇಂದ್ರ ಅವರಿಗೆ ‘ಭೀಮಬಲ’ ತಂದುಕೊಟ್ಟಿದೆ.

ಬಿ.ಎಸ್‌. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುವ ಹೊತ್ತಿನಲ್ಲಿ, ವರಿಷ್ಠರ ಒಲವು ಗಳಿಸಿ ಬಿಜೆಪಿ ರಾಜ್ಯ ಘಟಕದ ಮೇಲೆ ಪ್ರಬಲ ಹಿಡಿತ ಸಾಧಿಸಿದ್ದ ಆ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹಾಗೂ ಕೇಂದ್ರದ ಸಚಿವ ಪ್ರಲ್ಹಾದ ಜೋಶಿ ಅವರ ಬಲ ಕುಸಿದಿದೆ. ವಿಧಾನಸಭೆಯ ಮುಖ್ಯ ಸಚೇತಕ ಹುದ್ದೆಯಾದರೂ ಸಿಗಲಿ ಎಂಬ ಕೊನೆಯಾಸೆಯಲ್ಲಿದ್ದ ವಿಜಯೇಂದ್ರ ಅವರಿಗೆ, ಲೋಕಸಭೆ ಚುನಾವಣೆ ಕಾರಣಕ್ಕೆ ಅಧ್ಯಕ್ಷ ಹುದ್ದೆಯನ್ನು ದಯಪಾಲಿಸಲಾಯಿತು. ಈ ಅವಕಾಶವನ್ನೇ ಚಿಮ್ಮುಹಲಗೆಯಾಗಿ ಮಾಡಿಕೊಂಡ ವಿಜಯೇಂದ್ರ, ತಮಗಿರುವ ಶಕ್ತಿ ಹಾಗೂ ಅಪ್ಪನ ಪ್ರಭಾವಳಿ ಬಳಸಿ ಪಕ್ಷ ಸಂಘಟನೆಯನ್ನು ತಮ್ಮ ಬಿಗಿಮುಷ್ಟಿಗೆ ತೆಗೆದುಕೊಂಡರು. ಅಲ್ಪಾವಧಿಯಲ್ಲಿ ಎಲ್ಲವೂ ಅಪ್ಪ–ಮಗನ ಮೂಗಿನ ನೇರಕ್ಕೆ ನಡೆಯತೊಡಗಿತು. ಹಿಂದೆ, ಹಿಡಿತ ಹೊಂದಿದ್ದವರು ದಿನೇ ದಿನೇ ತೆರೆಯ ಹಿಂದೆ ಸರಿಯತೊಡಗಿದ್ದು, ಸದ್ಯದ ವಿದ್ಯಮಾನ.

ADVERTISEMENT

‘ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದ ಸಂತೋಷ, ಜೋಶಿ ಜೋಡಿ ಫಲ ನೀಡಲಿಲ್ಲ.  ಇದರಿಂದ ಬೇಸತ್ತಿರುವ ಪ್ರಧಾನಿ ನರೇಂದ್ರ ಮೋದಿ– ಗೃಹ ಸಚಿವ ಅಮಿತ್‌ ಶಾ ಅವರು, ಕರ್ನಾಟಕಕ್ಕೆ ಸಂಬಂಧಿಸಿದಂತೆ ಸಲಹೆ, ಸೂಚನೆ ಮತ್ತು ನಿರ್ಣಯ ತೆಗೆದುಕೊಳ್ಳುವ ಜವಾಬ್ದಾರಿಗಳಿಂದಲೂ ಇವರಿಬ್ಬರನ್ನು ಮುಕ್ತಗೊಳಿಸಿದ್ದಾರೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

2019ರ ಲೋಕಸಭೆ ಚುನಾವಣೆ ವೇಳೆ, ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿದ್ದ ಯಡಿಯೂರಪ್ಪ ಅವರಿಗೆ ರಾಜ್ಯದ ಹೊಣೆ ನೀಡಲಾಗಿತ್ತು. 28 ಲೋಕಸಭಾ ಕ್ಷೇತ್ರಗಳ ಪೈಕಿ 25 ಅನ್ನು ಬಿಜೆಪಿ ಗೆದ್ದಿತ್ತು. ಯಡಿಯೂರಪ್ಪ ಅವರನ್ನು ಕುರ್ಚಿಯಿಂದ ಇಳಿಸಿದ ಬಳಿಕ ಅವರನ್ನು, ಅಕ್ಷರಶಃ ಮೂಲೆಗುಂಪು ಮಾಡಲಾಗಿತ್ತು. ಪಕ್ಷದ ಸಂಘಟನೆಗಾಗಿ ರಾಜ್ಯ ಪ್ರವಾಸ ಮಾಡಲು ಅನೇಕ ಬಾರಿ ಮುಂದಾದರೂ ಅವಕಾಶವನ್ನೇ ಕೊಟ್ಟಿರಲಿಲ್ಲ. ಹೀಗಾಗಿ, ಯಡಿಯೂರಪ್ಪ ಕೂಡ ಮೌನಕ್ಕೆ ಶರಣಾಗಿದ್ದರು. ವಿಧಾನಸಭೆ ಚುನಾವಣೆಗೆ ದಿನಗಣನೆಗೆ ಆರಂಭವಾದಾಗ, ಮತ್ತೆ ಯಡಿಯೂರಪ್ಪ ಅವರಿಗೆ ಸ್ವಲ್ಪ ಮಟ್ಟಿನ ಪ್ರಾಶಸ್ತ್ಯ ನೀಡಲಾಯಿತು. ಆದರೆ, ಅದೇನೂ ಫಲ ಕೊಡಲಿಲ್ಲ. ಅವರನ್ನು ದೂರ ಇಟ್ಟರೆ, ಲೋಕಸಭೆ ಚುನಾವಣೆಯಲ್ಲಿ ಗೆಲುವು ಕಷ್ಟ ಎಂದರಿತ ಆ ಪಕ್ಷದ ವರಿಷ್ಠರು, ಮತ್ತೆ ಅವರ ಮೊರೆ ಹೋಗಿದ್ದಾರೆ. 

ಯಡಿಯೂರಪ್ಪ– ವಿಜಯೇಂದ್ರ ಅವರಿಗೆ ಮುಕ್ತ ಅವಕಾಶ ನೀಡಿದ್ದಾರೆ. ಇವರಿಬ್ಬರ ಮೊದಲ ‘ಬೇಟೆ’ಯೇ ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿಗೆ ಮರಳಿ ಸೇರಿಸಿದ ಕಾರ್ಯಾಚರಣೆ. ಶೆಟ್ಟರ್ ವಾಪಸ್ ಬರುವುದನ್ನು ತಡೆಯಲು ಜೋಶಿ ಅವರು ಕೊನೆಯ ಹಂತದವರೆಗೂ ತಮ್ಮದೇ ಆದ ರೀತಿಯಲ್ಲಿ ಪ್ರಯತ್ನ ನಡೆಸಿದರು. ಆದರೆ, ಅದು ಫಲ ನೀಡಲಿಲ್ಲ. ಶೆಟ್ಟರ್ ಹೊರಹೋಗಿದ್ದರಿಂದ ಆದ ನಷ್ಟ ಮತ್ತು ಈಗ ಕರೆತರುವುದರಿಂದ ಆಗುವ ಪ್ರಯೋಜನಗಳನ್ನು ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರು ಮನವರಿಕೆ ಮಾಡಿದಾಗ ವರಿಷ್ಠರು ಒಪ್ಪಿಗೆ ಸೂಚಿಸಿದರು’ ಎಂದು ಮೂಲಗಳು ತಿಳಿಸಿವೆ.

ಇದೇ ಹಾದಿಯಲ್ಲಿ ನಡೆದಿರುವ ವಿಜಯೇಂದ್ರ, ಸಂತೋಷ್–ಜೋಶಿ ಕಾರಣಕ್ಕೆ ಪಕ್ಷದಿಂದ ಹೊರಹೋದವರನ್ನು ಮರಳಿ ಕರೆತರುವ ಯತ್ನವನ್ನು ಬಿರುಸಿನಿಂದ ನಡೆಸಿದ್ದಾರೆ. ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಪಕ್ಷದಿಂದ ಹೊರನಡೆದಾಗ, ಬಿಜೆಪಿ ಲಿಂಗಾಯತ ವಿರೋಧಿ ಎಂದು ಬಿಂಬಿಸುವ ಯತ್ನ ಬಲವಾಗಿ ನಡೆದಿತ್ತು. ಅದನ್ನು ಹೋಗಲಾಡಿಸಿ, ಬಿಜೆಪಿ ಬೆನ್ನಿಗೆ ನಿಂತಿದ್ದ ಲಿಂಗಾಯತ ಮತಗಳನ್ನು ಮತ್ತೆ ಸೆಳೆಯುವ ಪ್ರಯತ್ನವನ್ನು ವಿಜಯೇಂದ್ರ ಮಾಡುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಯಡಿಯೂರಪ್ಪ ಅವರನ್ನು ಹಿಂದೆ ಸರಿಸಿದ ಬಳಿಕ ಸಂತೋಷ್–ಜೋಶಿ ಬಣ ಮೇಲುಗೈ ಸಾಧಿಸಿತ್ತು. ಹಿಂದೆ ಯಡಿಯೂರಪ್ಪ ಜತೆ ಗುರುತಿಸಿಕೊಂಡಿದ್ದ ಅನೇಕರು, ಏಕಾಏಕಿ ಗುಂಪು ಬದಲಾಯಿಸಿದ್ದರು. ‘ಆಪರೇಷನ್ ಕಮಲ’ದಡಿ ಕಾಂಗ್ರೆಸ್, ಜೆಡಿಎಸ್‌ನಿಂದ ಬಂದವರು, ಸಂತೋಷ್ ಸುತ್ತಲೇ ಗಿರಕಿ ಹೊಡೆಯುತ್ತಿದ್ದರು. ಈ ಪೈಕಿ ಕೆಲವರು ಲೋಕಸಭೆ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಅವರೆಲ್ಲರಿಗೂ ಟಿಕೆಟ್ ಸಿಗದೇ ಇರುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.

ಜಗದೀಶ ಶೆಟ್ಟರ್‌ಗೆ ಧಾರವಾಡ ಟಿಕೆಟ್

‍ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿದ್ದಕ್ಕೆ ಪ್ರತೀಕಾರ ತೀರಿಸಲು ಮುಂದಾಗಿರುವ ಜಗದೀಶ ಶೆಟ್ಟರ್, ಪ್ರಲ್ಹಾದ ಜೋಶಿ ಪ್ರತಿನಿಧಿಸುತ್ತಿರುವ ಧಾರವಾಡ ಲೋಕಸಭಾ ಕ್ಷೇತ್ರದಿಂದಲೇ ಕಣಕ್ಕೆ ಇಳಿಯುವ ಹಟ ತೊಟ್ಟಿದ್ದಾರೆ.

ಪಕ್ಷದ ಅಧ್ಯಕ್ಷ, ಸಭಾಧ್ಯಕ್ಷ, ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದ ಶೆಟ್ಟರ್ ಅವರಿಗೆ ವಿಧಾನಸಭೆ ಟಿಕೆಟ್ ತಪ್ಪಿಸಲಾಗಿತ್ತು. ಈಗ ಶಾಸಕರಾಗಿರುವ ಮಹೇಶ್ ಟೆಂಗಿನಕಾಯಿ ಅವರಿಗೆ ಟಿಕೆಟ್ ಕೊಡಿಸಲು, ಸಂತೋಷ್ ಈ ಕೆಲಸ ಮಾಡಿದ್ದಾರೆ ಎಂದು ಶೆಟ್ಟರ್ ಆಪಾದಿಸಿದ್ದರು. ಅಲ್ಲದೇ, ಪಕ್ಷದಿಂದ ಹೊರನಡೆದಿದ್ದರು. 

ಶೆಟ್ಟರ್ ವಾಪಸ್ ಕರೆತರುವ ಮಾತುಕತೆ ಶಾಂಗ್ರಿಲಾ ಹೋಟೆಲ್‌ನಲ್ಲಿ ನಡೆದಾಗ, ‘ಲೋಕಸಭೆ ಟಿಕೆಟ್ ಕೊಟ್ಟರಷ್ಟೇ ಯೋಚನೆ ಮಾಡುವೆ’ ಎಂದು ಅವರು ಖಚಿತವಾಗಿ ತಿಳಿಸಿದ್ದರು. ಹಿಂದೆ ಅವಮಾನ ಮಾಡಿದವರಿಗೆ ಟಿಕೆಟ್ ತಪ್ಪಿಸುವುದು, ತಾವು ಲೋಕಸಭೆಗೆ ಹೋಗುವುದು ಇದರ ಹಿಂದಿನ ಲೆಕ್ಕಾಚಾರವಾಗಿತ್ತು. ವರಿಷ್ಠರ ಜತೆ ನಡೆದ ಮಾತುಕತೆ ವೇಳೆ, ಇದಕ್ಕೆ ಸಮ್ಮತಿ ಸಿಕ್ಕಿದೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.