ADVERTISEMENT

ಮಂಡ್ಯದಲ್ಲಿ ಜೆಡಿಎಸ್ ಸಾಮಾನ್ಯ ಕಾರ್ಯಕರ್ತ ನಿಂತರೂ ಗೆಲ್ಲುತ್ತೇವೆ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2024, 9:27 IST
Last Updated 11 ಜನವರಿ 2024, 9:27 IST
ಎಚ್‌. ಡಿ. ಕುಮಾರಸ್ವಾಮಿ
ಎಚ್‌. ಡಿ. ಕುಮಾರಸ್ವಾಮಿ   

ಚಿಕ್ಕಮಗಳೂರು: ‘ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಜೆಡಿಎಸ್‌ನ ಒಬ್ಬ ಸಾಮಾನ್ಯ ಕಾರ್ಯಕರ್ತ ಸ್ಪರ್ಧೆ ಮಾಡಿದರೂ ಗೆಲ್ಲುವ ವಾತಾವರಣ ಇದೆ' ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಎರಡು ದಿನಗಳಿಂದ ಇಲ್ಲಿನ ರೆಸಾರ್ಟ್ ಒಂದರಲ್ಲಿ ವಾಸ್ತವ್ಯ ಹೂಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

'ಕಳೆದ ಬಾರಿಯ ಚುನಾವಣೆ ಬೇರೆಯೇ ಇತ್ತು. ರೈತ ಸಂಘ, ಬಿಜೆಪಿ, ಕಾಂಗ್ರೆಸ್ ಎಲ್ಲರೂ ಪಕ್ಷೇತರ ಅಭ್ಯರ್ಥಿ ಪರ ಮತ ಹಾಕಿದ್ದರು. ಜೆಡಿಎಸ್ ಬಿಟ್ಟು ಎರಡು-ಮೂರು ಪರ್ಸೆಂಟ್ ಮತದಾರರು ಮಾತ್ರವೇ ನಮ್ಮ ಪರ ಇದ್ದರು. ಈಗ ವಾತಾವರಣ ಬದಲಾಗಿದೆ‌' ಎಂದರು.

ADVERTISEMENT

'ಬಿಜೆಪಿ ಜೊತೆ ಹೊಂದಾಣಿಕೆ ಆಗಿರುವುದರಿಂದ ಈ ಬಾರಿ ನಾವೇ ಚುನಾವಣೆಯಲ್ಲಿ ಗೆಲ್ಲುತ್ತೇವೆ. ಸದ್ಯಕ್ಕೆ ಯಾರು ಅಭ್ಯರ್ಥಿ ಎಂಬ ತೀರ್ಮಾನ ಆಗಿಲ್ಲ‌. ಮತ್ತೊಂದು ಸುತ್ತಿನ ಮಾತುಕತೆ ಬಳಿಕ ತೀರ್ಮಾನ ಆಗಲಿದೆ' ಎಂದು ತಿಳಿಸಿದರು.

'ಎರಡು ದಿನಗಳ ರೆಸಾರ್ಟ್ ವಾಸ್ತವ್ಯದ ವೇಳೆ ಮಂಡ್ಯ ಅಷ್ಟೇ ಅಲ್ಲ, ರಾಜ್ಯದ ರಾಜಕೀಯದ ಬಗ್ಗೆ ಚರ್ಚೆ ಆಗಿದೆ. ನಮ್ಮ ಅಭ್ಯರ್ಥಿಗಳು ಬಿಜೆಪಿ ಪಕ್ಷದವರ ವಿಶ್ವಾಸವನ್ನು ಹೇಗೆ ಪಡೆಯಬೇಕು. ಅವರು ನಮ್ಮ ಕಾರ್ಯಕರ್ತರ ವಿಶ್ವಾಸವನ್ನು ಹೇಗೆ ಪಡೆಯಬೇಕು ಎಂಬ ಚರ್ಚೆಗಳೂ ಆಗಿವೆ‌. ಮಂಡ್ಯ, ಮೈಸೂರು ಹಾಗೂ ಹಾಸನದ ಬಗ್ಗೆಯೂ ಮಾತನಾಡಿದ್ದೇವೆ' ಎಂದರು.

'ಮೈತ್ರಿಯಿಂದ ವರ್ಚಸ್ಸು ಹೆಚ್ಚಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸೂ ಇದೆ‌. ರಾಮ ಮಂದಿರ ಉದ್ಘಾಟನೆ ವಿಷಯ ಮುಂಚೂಣಿಯಲ್ಲಿದೆ. ಸ್ಥಿರ ಸರ್ಕಾರ ಬರಬೇಕು ಎಂಬ ಆಶಯ ದೇಶದ ಜನರಿಗಿದೆ‌‌. ಎರಡೂ ಪಕ್ಷಗಳಿಗೂ ನಮ್ಮ ನಮ್ಮ ಶಕ್ತಿ ಏನು ಎಂಬುದು ಗೊತ್ತಿದೆ' ಎಂದು ಸ್ಪಷ್ಟಪಡಿಸಿದರು.

'ಕಾಂಗ್ರೆಸ್‌ನಲ್ಲಿ ಮೂರು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಚರ್ಚೆಯಾಗುತ್ತಿದೆ. ಯಾರದೋ ದುಡ್ಡಿನಲ್ಲಿ ಯಲ್ಲಮ್ಮನ ಜಾತ್ರೆ ಮಾಡುತ್ತಿದೆ. 30-35 ಜನರಿಗೂ ಉಪಮುಖ್ಯಮಂತ್ರಿ ಸ್ಥಾನ ನೀಡುವುದು ಒಳ್ಳೆಯದು. ಆಗ ಪ್ರತಿನಿತ್ಯ ಈ ಗೊಂದಲ ಇರುವುದಿಲ್ಲ' ಎಂದು ವ್ಯಂಗ್ಯವಾಡಿದರು.

'ಗ್ಯಾರಂಟಿ ನೋಡಿಕೊಳ್ಳಲು ಒಬ್ಬ ಅಧ್ಯಕ್ಷ, ಅದಕ್ಕೆ ವರ್ಷಕ್ಕೆ ₹16 ಕೋಟಿ ಖರ್ಚಂತೆ, ಐವರು ಉಪಾಧ್ಯಕ್ಷರಂತೆ, ದುಡ್ಡು ಯಾರದು' ಎಂದು ಪ್ರಶ್ನಿಸಿದರು.

'ಕಾಂಗ್ರೆಸ್ ಸದ್ಯದ ಪರಿಸ್ಥಿತಿ ನನಗೆ ಅರ್ಥವಾಗಿದೆ. ಚುನಾವಣೆ ಫಲಿತಾಂಶದ ಬಳಿಕ ಎಲ್ಲವೂ ಗೊತ್ತಾಗಲಿದೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.