ADVERTISEMENT

ಪರಿಷತ್‌ನಲ್ಲಿ ಲೋಕಸಭಾ ಚುನಾವಣೆ ಚರ್ಚೆ!

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2024, 20:07 IST
Last Updated 21 ಫೆಬ್ರುವರಿ 2024, 20:07 IST
ಪ‍ರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಆಯ್ಕೆಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ ಕಾಂಗ್ರೆಸ್‌ನ ಪುಟ್ಟಣ್ಣ ಅವರನ್ನು ಸಭಾಪತಿ ಬಸವರಾಜ ಹೊರಟ್ಟಿ ಅಭಿನಂದಿಸಿದರು
–ಪ್ರಜಾವಾಣಿ ಚಿತ್ರ
ಪ‍ರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಆಯ್ಕೆಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ ಕಾಂಗ್ರೆಸ್‌ನ ಪುಟ್ಟಣ್ಣ ಅವರನ್ನು ಸಭಾಪತಿ ಬಸವರಾಜ ಹೊರಟ್ಟಿ ಅಭಿನಂದಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಲೋಕಸಭಾ ಚುನಾವಣೆ ಕುರಿತು ವಿಧಾನ ಪರಿಷತ್‌ನಲ್ಲಿ ಬುಧವಾರ ಸ್ವಾರಸ್ಯಕರ ಚರ್ಚೆ ನಡೆಯಿತು.

ಕಲಾಪ ಆರಂಭವಾಗುತ್ತಿದಂತೆ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲವು ಪಡೆದ ಪುಟ್ಟಣ್ಣ ಅವರು ಪ್ರಮಾಣವಚನ ಸ್ವೀಕರಿಸಿದರು. ಆ ಸಮಯದಲ್ಲಿ ಉಪಸ್ಥಿತರಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ–ಜೆಡಿಎಸ್‌ ಮೈತ್ರಿಗೆ ಮೊದಲ ಪ್ರಯತ್ನದಲ್ಲೇ ಸೋಲಾಗಿದೆ. ಪುಟ್ಟಣ್ಣ ಗೆಲುವು ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದರು.

‘ಮೈತ್ರಿಯ ಸೋಲು ಇದೇ ಕೊನೆ. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳು 28ಕ್ಕೆ 28 ಸ್ಥಾನವನ್ನೂ ಗೆಲ್ಲಲಿವೆ’ ಎಂದು ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. 

ADVERTISEMENT

‘ಸಾಧ್ಯವೇ ಇಲ್ಲ. ಸ್ವಲ್ಪವಾದರೂ ಸತ್ಯಕ್ಕೆ ಹತ್ತಿರವಾದ ಮಾತು ಹೇಳಿ. ಕಾಂಗ್ರೆಸ್‌ ಈ ಬಾರಿ 20 ಸ್ಥಾನಗಳಲ್ಲಿ ಗೆಲುವು ಪಡೆಯಲಿದೆ’ ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡರು. ‘ನಿಮ್ಮ ದೃಷ್ಟಿ ಬೀಳದ ಆ ಎಂಟು ಕ್ಷೇತ್ರಗಳು ಯಾವುವು ಹೇಳಿ’ ಎಂದು ಬಿಜೆಪಿಯ ತೇಜಸ್ವಿನಿ ಗೌಡ ಕೋರಿದರು. 

‘ಅದೆಲ್ಲ ಬಿಡಿ, ನಾನು ಸತ್ಯಕ್ಕೆ ಹತ್ತಿರವಾದ ಮಾತು ಹೇಳಿರುವೆ. ಚುನಾವಣೆಯ ಫಲಿತಾಂಶ ಬಂದ ನಂತರ ಗೊತ್ತಾಗುತ್ತದೆ. ಪುಟ್ಟಣ್ಣ ಐದನೇ ಬಾರಿ ಗೆದ್ದಿದ್ದಾರೆ. ಇನ್ನಷ್ಟು ಅವಧಿ ಗೆದ್ದು ಸಭಾಪತಿ ಬಸವರಾಜ ಹೊರಟ್ಟಿ ಅವರ ದಾಖಲೆ ಸರಿಗಟ್ಟಲಿ’ ಎಂದು ಸಿದ್ದರಾಮಯ್ಯ ಹಾರೈಸಿದರು.

ವಿರೋಧ ಪಕ್ಷದ ಮುಖ್ಯ ಸಚೇತಕ ಎನ್‌.ರವಿಕುಮಾರ್, ‘ಹೊರಟ್ಟಿ ಅವರು ಬಿಜೆಪಿಯಿಂದ ಸ್ಪರ್ಧಿಸಿ ಇನ್ನೂ ಎರಡು ಅವಧಿ ಗೆಲುವು ಪಡೆಯಲಿ’ ಎಂದರು. ಅದಕ್ಕೆ ಸಿದ್ದರಾಮಯ್ಯ, ‘ಹೊರಟ್ಟಿ ಅವರು ಯಾವ ಪಕ್ಷದಿಂದ ಗೆದ್ದರೂ, ಪಕ್ಷಾತೀತವಾಗಿದ್ದಾರೆ. ಸಭಾಪತಿ ಸ್ಥಾನಕ್ಕೆ ಗೌರವ ತಂದಿದ್ದಾರೆ. ಅವರ ದಾಖಲೆ ಮುರಿಯಲು ಸದ್ಯಕ್ಕೆ ಯಾರಿಗೂ ಸಾಧ್ಯವಿಲ್ಲ’ ಎಂದರು.

ನೂತನ ಸದಸ್ಯ ಪುಟ್ಟಣ್ಣ ಮಾತನಾಡಿ, ‘ಉಪ ಚುನಾವಣೆ ಫಲಿತಾಂಶ ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದು  ಮೈತ್ರಿ ಪಕ್ಷಗಳೇ ಹೇಳಿದ್ದವು. ಬಿಜೆಪಿ ಸದಸ್ಯನಾಗಿದ್ದಾಗ ನಮ್ಮದೇ ಪಕ್ಷ ಇದ್ದರೂ, ಅನುದಾನಿತ ಶಾಲಾ ಶಿಕ್ಷಕರ ಸಮಸ್ಯೆಗಳ ಕುರಿತು ಒಂದು ಸಭೆ ಆಯೋಜಿಸಲು ಸಾಧ್ಯವಾಗಲಿಲ್ಲ. ಇದರಿಂದ ಬೇಸರಗೊಂಡು ಪಕ್ಷ ತ್ಯಜಿಸಿದೆ’ ಎಂದು ಪಕ್ಷಾಂತರಕ್ಕೆ ಸಮರ್ಥನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.