ADVERTISEMENT

ಗುಸು ಗುಸು: ಮುನಿಯಪ್ಪಗೆ ‘ಸ್ವಾಮಿ’ ಬಣದ ಸಡ್ಡ್ಯಾಕೆ?

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2024, 20:49 IST
Last Updated 29 ಮಾರ್ಚ್ 2024, 20:49 IST
ಕೆ.ಎಚ್. ಮುನಿಯಪ್ಪ
ಕೆ.ಎಚ್. ಮುನಿಯಪ್ಪ   

ಕಳೆದ ಲೋಕಸಭಾ ಚುನಾವಣೆಯಲ್ಲಿ ಕೋಲಾರದಲ್ಲಿ ಸೋಲಿಸಿ ಕಳಿಸಿದರೂ ಮತ್ತೆ ಜಿಲ್ಲೆ ಮೇಲೆ ಹಿಡಿತ ಸಾಧಿಸಲು ಸಚಿವ ಕೆ.ಎಚ್. ಮುನಿಯಪ್ಪ ಹವಣಿಸುತ್ತಿರುವುದಕ್ಕೆ ಮಾಜಿ ಸಚಿವ ಕೆ.ಆರ್. ರಮೇಶ್‌ಕುಮಾರ್ (ಸ್ವಾಮಿ–ಸ್ವಾಮೊಳ್ಳು) ನೇತೃತ್ವದ ಬಣ ತಿರುಗಿಬಿದ್ದಿದೆ. ಮುನಿಯಪ್ಪ ಕಾಟ ತಪ್ಪಿತು ಎಂದುಕೊಳ್ಳುತ್ತಿರುವಾಗಲೇ ಅಳಿಯ ಚಿಕ್ಕಪೆದ್ದಣ್ಣನ ಮೂಲಕ, ಮತ್ತೆ ಇಣುಕಲು ಹೊರಟಿರುವುದಕ್ಕೆ ‘ಸ್ವಾಮಿ’ಯವರ ಬಣ ಸೆಟೆದು ನಿಂತಿದೆಯಂತೆ.  ಏಳು ಬಾರಿ ಕೋಲಾರದಲ್ಲಿ ಗೆದ್ದ ಮುನಿಯಪ್ಪ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದವರಿಗಿಂತ ಅನ್ಯರ ಬೆಂಬಲವನ್ನೇ ನೆಚ್ಚಿಕೊಂಡಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಗೆದ್ದ–ಸೋತ ಎದುರಾಳಿ ಪಕ್ಷದವರ ಜತೆ ಕೂಡಿಕೆ ಮಾಡಿಕೊಂಡು, ತಮ್ಮ ಕ್ಷೇತ್ರ ಭದ್ರ ಪಡಿಸಿಕೊಳ್ಳುತ್ತಿದ್ದರು. ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್‌ನಲ್ಲಿ ತಮಗೆ ಆಗದವರಿಗೆ ಟಿಕೆಟ್ ತಪ್ಪಿಸುವುದು, ಅದು ಸಾಧ್ಯವಾಗದೇ ಇದ್ದಲ್ಲಿ, ಲೋಕಸಭೆ ಚುನಾವಣೆಯಲ್ಲಿ ತಮಗೆ ನೆರವಾದವರಿಗೆ ಸಹಾಯ ಮಾಡಿ, ತಮ್ಮ ಪಕ್ಷದವರನ್ನೇ ಸೋಲಿಸುವುದು ಮುನಿಯಪ್ಪ ಅವರ ರಾಜಕಾರಣ ಎಂಬುದು ಕೋಲಾರದಲ್ಲಿ ರಹಸ್ಯವಾಗಿರುವ ‘ಚಿನ್ನ’ದಂಥ ಮಾತು. 

ಈ ಅಂಶವೇ ಮುನಿಯಪ್ಪ ಮೇಲೆ ಕಾಂಗ್ರೆಸ್‌ ನಾಯಕರು ಮುನಿಸಿಕೊಳ್ಳಲು ಕಾರಣ.  ಹೀಗಾಗಿ, 2019ರ ಚುನಾವಣೆಯಲ್ಲಿ ಮುನಿಯಪ್ಪರನ್ನು ಸೋಲಿಸಲೇಬೇಕು ಎಂದು ಪಣತೊಟ್ಟವರೆಲ್ಲ ಒಟ್ಟಾದರು; ಬೆಂಗಳೂರಿನ ಪಾಲಿಕೆ ಸದಸ್ಯರಾಗಿದ್ದ ಮುನಿಸ್ವಾಮಿ ಅವರನ್ನು ಕರೆತಂದು, ಮುನಿಯಪ್ಪಗೆ ಸೋಲುಣಿಸಿದ್ದರು. ಕೇಂದ್ರದ ರಾಜಕಾರಣ ಬಿಟ್ಟ ಮುನಿಯಪ್ಪ, ರಾಜ್ಯರಾಜಕಾರಣಕ್ಕೆ ಬಂದರು. ವಿಧಾನಸಭೆಗೆ ದೇವನಹಳ್ಳಿಯಲ್ಲಿ ಸ್ಪರ್ಧಿಸಿದ ಅವರು, ಕೋಲಾರದ ವಿವಿಧ ಕ್ಷೇತ್ರಗಳಲ್ಲಿ ಹಸ್ತಕ್ಷೇಪವನ್ನೂ ಮಾಡಿದರು. ಕೆಲವರು ಕಾಂಗ್ರೆಸ್‌ ಅಲೆ–ಸ್ವಂತ ಬಲದ ಮೇಲೆ ಗೆದ್ದರೆ, ಕೆಲವರು ಸೋತರು. ಅಳಿಯನಿಗೆ ಟಿಕೆಟ್ ಕೊಟ್ಟರೆ ಮತ್ತೆ ಮುನಿಯಪ್ಪ ಕೋಲಾರದ ಚಿನ್ನ ಬಿಡುವುದಿಲ್ಲ. ಅದಕ್ಕಾಗಿಯೇ ‘ಸ್ವಾಮಿ’ಯವರ ಬಣ ಈಗಲೇ ಎಚ್ಚೆತ್ತು ಯುದ್ಧಕ್ಕೆ ಅಣಿಯಾಗಿದೆಯಂತೆ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT