ಕೊಪ್ಪಳ: ಕರಡಿ ಮತ್ತು ಹಿಟ್ನಾಳ ಕುಟುಂಬಗಳ ಕದನವೆಂದೇ ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆ ಬಿಂಬಿತ ವಾಗಿದೆ. ಕೊನೆಯ ಗಳಿಗೆಯಲ್ಲಿ ಟಿಕೆಟ್ ಪಡೆದ ಸಂಸದ ಕರಡಿ ಸಂಗಣ್ಣ ಅವರು ನರೇಂದ್ರ ಮೋದಿ ಅಲೆ ನೆಚ್ಚಿಕೊಂಡಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ್ ಅವರು ಸಿದ್ದರಾಮಯ್ಯ ಅವರ ನಾಮಬಲ ತಮ್ಮನ್ನು ದಡ ಸೇರಿಸುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ.
ಕಳೆದ ಚುನಾವಣೆಯಲ್ಲಿ ಕರಡಿ ಸಂಗಣ್ಣರಿಗೆ ಬಸವರಾಜ ಹಿಟ್ನಾಳ ಎದುರಾಳಿಯಾಗಿದ್ದರು. ಈಗ ಅವರ ಪುತ್ರ ರಾಜಶೇಖರ ಎದುರಾಳಿ. ಕಳೆದ ಬಾರಿಯ ಸೋಲಿಗೆ ಸೇಡು ತೀರಿಸಿಕೊಳ್ಳಬೇಕೆಂಬುದು ಹಿಟ್ನಾಳ ಕುಟುಂಬದ ತವಕ.
ಸಂಗಣ್ಣ ಅವರಿಗೆ ಕೊನೇ ಕ್ಷಣದವ ರೆಗೂ ಟಿಕೆಟ್ ಸಿಗುವ ಖಾತರಿ ಇರಲಿಲ್ಲ. ಕ್ಷೇತ್ರದಲ್ಲಿ ಇವರಿಗೆ ವಿರೋಧ ಇಲ್ಲದಿದ್ದರೂ ಟಿಕೆಟ್ ಸಿಗುವುದು ತಡವಾಗಿದ್ದು,ಪಕ್ಷದ ಕಾರ್ಯಕರ್ತರಲ್ಲಿ ಗೊಂದಲಕ್ಕೂ ಕಾರಣವಾಗಿತ್ತು. ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಒತ್ತಾಸೆಯಿಂದ ಟಿಕೆಟ್ ದೊರಕಿಸಿಕೊಂಡರು.
ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಬಸನಗೌಡ ಬಾದರ್ಲಿ ಅವರು ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಸಿದ್ದರು. ಅಂತಿಮವಾಗಿ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿರುವ ಹಿಟ್ನಾಳ್ ಕುಟುಂಬದ ರಾಜಶೇಖರ ಅವರಿಗೇ ಮಣೆ ಹಾಕಲಾಯಿತು.
ರಾಜಶೇಖರ ಅವರು ಜಿಲ್ಲಾ ಪಂಚಾ ಯಿತಿ ಸದಸ್ಯರು. ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಅವರ ಸಹೋದರ ಕೆ.ರಾಘವೇಂದ್ರ ಹಿಟ್ನಾಳ ಕೊಪ್ಪಳ ಕ್ಷೇತ್ರದ ಶಾಸಕರು. ಎಲ್ಲ ಅಧಿಕಾರ ಒಂದೇ ಕುಟುಂಬದಲ್ಲಿ ಏಕೆ ಎಂಬ ಅಸಮಾಧಾನವೂ ಕಾಂಗ್ರೆಸ್‌ನ ಲ್ಲಿದೆ. ಆದರೂ, ಸಿದ್ದರಾಮಯ್ಯ ಕಾರಣ ಕ್ಕಾಗಿ ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಲಾಗುತ್ತಿದೆ.
ನಾಮಪತ್ರ ಸಲ್ಲಿಸುವ ವೇಳೆ ಕಾಂಗ್ರೆಸ್ ಶಕ್ತಿ ಪ್ರದರ್ಶನ ಮಾಡಿತು. ಸಿದ್ದರಾಮಯ್ಯ ಸೇರಿದಂತೆ ಘಟಾನುಘಟಿ ನಾಯಕರು ಬಂದು ಪ್ರಚಾರ ಮಾಡಿ, ಬಿಜೆಪಿಗೆ ಸೆಡ್ಡು ಹೊಡೆದರು. ಬಿಜೆಪಿಯವರು ಮೋದಿ ಅವರನ್ನು ಗಂಗಾವತಿಗೆ ಕರೆ ತಂದು ‘ಮೋದಿ ಹವಾ’ ಎಬ್ಬಿಸಿದ್ದಾರೆ.
ಕಾಂಗ್ರೆಸ್‌ನ ಮೈತ್ರಿ ಪಕ್ಷವಾದ ಜೆಡಿಎಸ್‌ಗೆ ಗಂಗಾವತಿ ಹಾಗೂ ಸಿಂಧನೂರು ಬಿಟ್ಟರೆ ಬೇರೆಲ್ಲೂ ನೆಲೆ ಇಲ್ಲ. ಹೀಗಾಗಿಆ ಪಕ್ಷದ ಮುಖಂಡರನ್ನು ಕಾಂಗ್ರೆಸ್ ನಾಯಕರು ಹೆಚ್ಚಾಗಿ ನೆಚ್ಚಿ ಕೊಂಡಿಲ್ಲ. ಮೈತ್ರಿ ಅಭ್ಯರ್ಥಿ ಪರವಾಗಿ ಸಿಂಧನೂರು ಶಾಸಕ ಹಾಗೂ ಸಚಿವ ವೆಂಕಟರಾವ್ ನಾಡಗೌಡ ಸಕ್ರಿಯವಾಗಿ ಪ್ರಚಾರ ನಡೆಸುತ್ತಿದ್ದಾರೆ.
ವ್ಯಕ್ತಿಗತ ಟೀಕೆ ಇಲ್ಲದೆ ಸಿದ್ದರಾಮಯ್ಯ ಹಾಗೂ ಮೋದಿ ನಡುವಿನ ಚುನಾವಣೆ ಎನ್ನುವ ರೀತಿಯಲ್ಲಿ ಪ್ರಚಾರ ನಡೆ ಯುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಕುರುಬ ಸಮಾಜಕ್ಕೆ ಸೇರಿದ್ದು, ಆ ಸಮಾಜದವರು ಸಂಘಟಿತರಾಗಿದ್ದಾರೆ.ಜೊತೆಗೆ ಮುಸ್ಲಿಂ, ಹಿಂದುಳಿದ, ದಲಿತರ ಬೆಂಬಲದಿಂದ ತಮ್ಮ ಗೆಲುವು ಸುಲಭವಾಗಲಿದೆ ಎಂಬ ಲೆಕ್ಕಾಚಾರ ಕಾಂಗ್ರೆಸ್ಸಿಗರದ್ದು.
ಕರಡಿ ಸಂಗಣ್ಣ ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಲಿಂಗಾಯತ ಸಮಾಜದ ಒಳಪಂಗಡಗಳು, ಬ್ರಾಹ್ಮಣ, ಪರಿಶಿಷ್ಟ ವರ್ಗದ ವಾಲ್ಮೀಕಿ, ಎಡಗೈ ಸಮುದಾಯದವರು ತಮ್ಮನ್ನು ಬೆಂಬಲಿ ಸುವರು ಎಂಬ ವಿಶ್ವಾಸ ಹೊಂದಿದ್ದಾರೆ. ಅನೇಕ ಸಣ್ಣ, ಸಣ್ಣ ಸಮಾಜಗಳು ಕ್ಷೇತ್ರ ದಲ್ಲಿ ನಿರ್ಣಾಯಕವಾಗಿದ್ದು, ಅವರನ್ನು ಒಲಿಸಿಕೊಳ್ಳಲು ಎರಡೂ ಪಕ್ಷಗಳು ಕಸರತ್ತು ನಡೆಸುತ್ತಿವೆ.
ರಡ್ಡಿ ಲಿಂಗಾಯತರು ಕ್ಷೇತ್ರದಲ್ಲಿ ನಿರ್ಣಾಯಕರಾಗಿದ್ದು, ಅವರ ಚಿತ್ತ ಯಾರತ್ತ ಎಂಬುದು ಈವರೆಗೂ ಸ್ಪಷ್ಟವಾಗಿಲ್ಲ.
ಕಾಂಗ್ರೆಸ್ ಟಿಕೆಟ್ ಲಿಂಗಾಯತ ಇಲ್ಲವೇ ಮುಸ್ಲಿಂ ಸಮುದಾಯಕ್ಕೆ ದೊರೆಯುವ ಸಾಧ್ಯತೆ ಇತ್ತು. ಏಕಾಏಕಿ ರಾಜಶೇಖರ ಹಿಟ್ನಾಳ್‌ಗೆ ಟಿಕೆಟ್ ದೊರೆತಿದ್ದರಿಂದ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಅವರನ್ನು ಸಮಾಧಾನಪಡಿಸಿದ ಸಿದ್ದರಾಮಯ್ಯ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ಸೂಚನೆ ನೀಡಿದ್ದರಿಂದ ಇಬ್ಬರೂ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಚುನಾವಣೆ ನಂತರ ರಾಜ್ಯದ ಸಮ್ಮಿಶ್ರ ಸರ್ಕಾರ ಏನಾಗುತ್ತದೆ ಎನ್ನುವ ಆತಂಕ ಕಾಂಗ್ರೆಸ್‌ನ ಕೆಲವರಲ್ಲಿದೆ. ತಮ್ಮ ರಾಜಕೀಯ ಭವಿಷ್ಯದ ದೃಷ್ಟಿಯಿಂದ (ಸರ್ಕಾರ ಇದ್ದರೆ ಸ್ಥಾನಮಾನಕ್ಕಾಗಿ, ಸೋತರೆ ಮರಳಿ ಟಿಕೆಟ್‌ಗಾಗಿ) ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ, ಮಾಜಿ ಸಚಿವರಾದ ಬಸವರಾಜ ರಾಯರಡ್ಡಿ, ಇಕ್ಬಾಲ್ ಅನ್ಸಾರಿ, ಶಿವರಾಜ ತಂಗಡಗಿ, ಹಂಪನಗೌಡ ಬಾದರ್ಲಿ ಅವರಿಗೆ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕಾದ ಅನಿವಾರ್ಯತೆ ಇದೆ. ಈ ವಿಷಯದಲ್ಲಿ ಸಿದ್ದರಾಮಯ್ಯ ಅವರೇ ಖಡಕ್ ಸೂಚನೆಯನ್ನೂ ನೀಡಿದ್ದಾರೆ ಎಂದು ಆ ಪಕ್ಷದವರು ಹೇಳುತ್ತಿದ್ದಾರೆ.
ಇದನ್ನೂ ಓದಿ:ಗೆಲುವಿಗೆ ನಾಗದೇವನಿಗೆ ಮೊರೆ-ಸಂಸದರಿಂದ ವಿಶೇಷ ಪೂಜೆ
ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಇಲ್ಲದೇ ಇದ್ದರೂ ಕಾಂಗ್ರೆಸ್ ಪಕ್ಷದ ಜಾತಿ ಸಮೀಕರಣದ ಭಯ ಇದೆ. ಕುರುಬ, ಹಿಂದುಳಿದ ವರ್ಗಗಳ ಮತಗಳು ಹೆಚ್ಚಾಗಿ ಕಾಂಗ್ರೆಸ್‌ಗೆ ಹೋಗುವುದನ್ನು ತಪ್ಪಿಸಲು ಎಲ್ಲ ರೀತಿಯ ಯತ್ನವನ್ನು ಆ ಪಕ್ಷದವರು ಮಾಡುತ್ತಿದ್ದಾರೆ.
ಕಾಂಗ್ರೆಸ್ ಪಕ್ಷವು ಮುಸ್ಲಿಮರನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂಬ ಅಸಮಾಧಾನವೂ ಇದೆ. ನೋಟಾ ಒತ್ತುವಂತೆ ಕೆಲವರು ಸೂಚನೆ ನೀಡಿದ್ದರೂ ಅದು ಕಾರ್ಯಸಾಧು ಆಗುವುದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿದ್ದು ಬಿಟ್ಟರೆ ಸಮಾಜದ ಮುಖಂಡರು ಮೌನ ವಹಿಸಿದ್ದಾರೆ. ಪರ್ಯಾಯ ಇಲ್ಲದೇ ಇರುವುದರಿಂದ ಅನಿವಾರ್ಯವಾಗಿ ಕಾಂಗ್ರೆಸ್ ಬೆಂಬಲಿಸಲೇಬೇಕಾಗಿದೆ ಎನ್ನುವುದು ಸಮಾಜದ ಮುಖಂಡರ ಮಾತು.
ಇಬ್ಬರೂ ಅಭ್ಯರ್ಥಿಗಳು ತಮ್ಮ ವರ್ಚಸ್ಸಿಗಿಂತ ಹೆಚ್ಚಾಗಿ ಜಾತಿ ಮತಗಳು, ಪಕ್ಷದ ವೋಟ್ ಬ್ಯಾಂಕ್‌ಗಳನ್ನು ನಂಬಿಕೊಂಡಿದ್ದಾರೆ.
*
ಮೋದಿ ಅಲೆಯಿಂದ ದಡ ಸೇರಲಿ ದ್ದೇವೆ. ಭ್ರಷ್ಟಾಚಾರರಹಿತ ಆಡಳಿತ ನೀಡಿದ್ದೇವೆ. ಕ್ಷೇತ್ರದಾದ್ಯಂತ ಯುವ ಮತದಾರರು, ಮಹಿಳೆಯರು ಬಿಜೆಪಿ ಬೆಂಬಲಿಸಲಿದ್ದು, ಗೆಲುವು ನಮ್ಮದೇ.
-ಸಂಗಣ್ಣ ಕರಡಿ, ಬಿಜೆಪಿ ಅಭ್ಯರ್ಥಿ
*
ಕ್ಷೇತ್ರದಲ್ಲಿ ನೂರಾರು ಉದ್ದಿಮೆಗಳಿ ದ್ದರೂ ಪ್ರೋತ್ಸಾಹ ನೀಡಿಲ್ಲ.ಸಂಸದರು ಕ್ಷೇತ್ರಕ್ಕೆ ಹೇಳಿಕೊಳ್ಳುವಂತಹ ಯೋಜನೆ ತಂದಿಲ್ಲ. ಅವರ ವೈಫಲ್ಯವೇ ನಮ್ಮ ಗೆಲುವಿನ ಮಾನದಂಡವಾಗಲಿದೆ.
-ರಾಜಶೇಖರ ಹಿಟ್ನಾಳ್, ಕಾಂಗ್ರೆಸ್ ಅಭ್ಯರ್ಥಿ
*
ಸುಳ್ಳು ಹೇಳಿ ಜನರ ದಾರಿ ತಪ್ಪಿಸುವ ನಾಯಕರು ಬೇಡ. ಅಭಿವೃದ್ಧಿ ಮೂಲಕ ಜನರ ಬವಣೆ ನೀಗಿಸುವ ಜನ ನಾಯಕರು ಹಾಗೂ ನೀರಾವರಿಗೆ ಆದ್ಯತೆ ನೀಡುವವರು ಬೇಕು.
-ಬಸವರಾಜ ಹಡಪದ, ಯಲಬುರ್ಗಾ
*
ಉತ್ತಮ ನಾಯಕನನ್ನು, ಬಡವರ ಕನಸು ನನಸಾಗಿಸುವವರನ್ನು ಗೆಲ್ಲಿಸ ಬೇಕು. ಜಾತಿ, ಹಣದ ಆಸೆಗೆ ಆಡಳಿತವನ್ನು ಇನ್ನೊಬ್ಬರ ಕೈಗೆ ಒಪ್ಪಿಸಿ ನಮ್ಮ ಜವಾಬ್ದಾರಿ ತಪ್ಪಿಸಿಕೊಳ್ಳಬಾರದು.
-ಮಮ್ತಾಜ್ ಬೇಗಂ, ಕೊಪ್ಪಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.