ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಗುರುವಾರ (ಏಪ್ರಿಲ್ 18) ನಡೆಯಲಿದ್ದು, 14 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯವನ್ನು 2.68 ಕೋಟಿ ಮತದಾರರು ಬರೆಯಲಿದ್ದಾರೆ.
ಬುಧವಾರ ಮತದಾರರ ಮನೆ ಬಾಗಿಲಿಗೆ ತೆರಳಿದ ಅಭ್ಯರ್ಥಿಗಳು ಕೊನೆಕ್ಷಣದ ಯಾಚನೆ, ತಂತ್ರಗಾರಿಕೆ ನಡೆಸಿ ಜನರ ವಿಶ್ವಾಸ ಗೆಲ್ಲುವ ಪ್ರಯತ್ನ ಮಾಡಿದರು.
ಈ ಪೈಕಿ ಹಾಸನ, ಮಂಡ್ಯ, ತುಮಕೂರು, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರಗಳಲ್ಲಿ ತುರುಸಿನ ಪೈಪೋಟಿ ನಡೆದಿದೆ.
ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯೂ ಆಗಿದೆ.
ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್, ಕೇಂದ್ರ ಸಚಿವರಾದ ಡಿ.ವಿ. ಸದಾನಂದಗೌಡ, ಕರ್ನಾಟಕದ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಸಂಸದರಾದ ಎಂ. ವೀರಪ್ಪ ಮೊಯಿಲಿ, ಕೆ.ಎಚ್. ಮುನಿಯಪ್ಪ, ಬಿ.ಕೆ. ಹರಿಪ್ರಸಾದ್ ಅವರ ಭವಿಷ್ಯವೂ ನಿರ್ಧಾರವಾಗಲಿದೆ.
ಚಿತ್ರನಟ ಪ್ರಕಾಶ್ ರಾಜ್, ಯುವ ಮುಂದಾಳುಗಳಾದ ತೇಜಸ್ವಿ ಸೂರ್ಯ, ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ ಅವರ ಹಣೆಬರಹವನ್ನೂ ಮತದಾರರು ನಿರ್ಧರಿಸಲಿದ್ದಾರೆ.
2014ರ ಚುನಾವಣೆಯಲ್ಲಿ ರಾಜ್ಯದಲ್ಲಿ ಶೇ 67 ಮತದಾನವಾಗಿತ್ತು. ಬೆಂಗಳೂರಿನಲ್ಲಿ ಮತದಾನದ ಪ್ರಮಾಣ ಶೇ 60 ದಾಟಿರಲಿಲ್ಲ.
ಈ ಸಲ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಚುನಾವಣಾ ಆಯೋಗ ‘ಸ್ವೀಪ್’ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು, ಮತ ಪ್ರಮಾಣ ಹೆಚ್ಚುವ ವಿಶ್ವಾಸದಲ್ಲಿದೆ. ಬುಧವಾರದಿಂದ ಭಾನುವಾರದವರೆಗೆ ಸರಣಿ ರಜೆಗಳು ಬಂದಿದ್ದು, ಆಯೋಗದ ಆತಂಕಕ್ಕೆ ಕಾರಣವಾಗಿದೆ. ಕಡ್ಡಾಯವಾಗಿ ಮತದಾನ ಮಾಡಿ ಪ್ರವಾಸಕ್ಕೆ ತೆರಳುವಂತೆ ಆಯೋಗ ಹಾಗೂ ವಿವಿಧ ಸಂಘಟನೆಗಳು ಮನವಿ ಮಾಡಿವೆ.
ಮಳೆಗೆ ಮುನ್ನ ಮತ ಹಾಕಿ: ದಕ್ಷಿಣ ಒಳನಾಡಿನಲ್ಲಿ ಮಧ್ಯಾಹ್ನದ 3 ಗಂಟೆ ಬಳಿಕ ಸಾಧಾರಣ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅದಕ್ಕೂ ಮುನ್ನವೇ ಮತಗಟ್ಟೆಗೆ ತೆರಳಿ ತಮ್ಮ ಹಕ್ಕು ಚಲಾಯಿಸಬೇಕು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಡ್ಡಾಯ ರಜೆ ನೀಡದಿದ್ದರೆ ಕ್ರಮ
‘ಮತದಾನದ ಹಿನ್ನೆಲೆಯಲ್ಲಿ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ರಜೆ ಘೋಷಿಸಲಾಗಿದೆ. ಖಾಸಗಿ ಉದ್ಯೋಗಿಗಳಿಗೆ ರಜೆ ನೀಡಲು ಕಂಪನಿಗಳು ನಿರಾಕರಿಸಿರುವುದು ಗಮನಕ್ಕೆ ಬಂದರೆ ಸಂಬಂಧಪಟ್ಟ ಜಿಲ್ಲೆಯ ಚುನಾವಣಾಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್ ತಿಳಿಸಿದರು.
‘ಅನಿವಾಸಿ ಭಾರತೀಯರು (ಎನ್‌ಆರ್‌ಐ) ಆನ್‌ಲೈನ್‌ನಲ್ಲೇ ಮತ ಹಾಕಬಹುದು ಹಾಗೂ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಮತ ಹಾಕಬಹುದು ಎಂಬ ಸುಳ್ಳು ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವುದು ಗಮನಕ್ಕೆ ಬಂದಿದೆ. ಈ ರೀತಿಯ ಯಾವುದೇ ಅವಕಾಶ ಇಲ್ಲ. ಮತದಾರರು ಮತಗಟ್ಟೆಗೆ ಬಂದೇ ಮತ ಹಾಕಬೇಕು’ ಎಂದರು.
ಬಿಜೆಪಿ ಪ್ರಚಾರದ ಅಂಶಗಳು
*ರಾಷ್ಟ್ರೀಯತೆ
*ದೇಶದ ಭದ್ರತೆ
*ಕಾಂಗ್ರೆಸ್–ಜೆಡಿಎಸ್ ಶೇ 20 ಕಮಿಷನ್ ಸರ್ಕಾರ
*ವಂಶೋದಯ–ಅಂತ್ಯೋದಯ
ಜೆಡಿಎಸ್–ಕಾಂಗ್ರೆಸ್ ಮೈತ್ರಿಕೂಟದ ಪ್ರಚಾರದ ಅಂಶಗಳು
*ರಫೇಲ್ ಹಗರಣ
*ಸೇನಾ ಸಾಧನೆಯನ್ನು ರಾಜಕೀಯಕ್ಕೆ ಬಳಕೆ
*ಮೈತ್ರಿಯಿಂದ ರಾಜ್ಯದ ಅಭಿವೃದ್ಧಿ
*ರೈತರ ಸಾಲ ಮನ್ನಾ, ಬಡವರ ಬಂಧು, ಆರೋಗ್ಯ ಕರ್ನಾಟಕ, ಮಾತೃಶ್ರೀ ಯೋಜನೆ, ಕಾಂಪಿಟ್ ವಿತ್ ಚೈನಾ, ಬೆಂಗಳೂರಿಗೆ ಹೊಸ ರೂಪ...
**
ಯಾವುದೇ ಹೆದರಿಕೆ ಇಲ್ಲದೆ ಮತ ಹಾಕಲು ಮುಕ್ತ ಅವಕಾಶಗಳನ್ನು ಕಲ್ಪಿಸಲಾಗಿದೆ. ನಿಮ್ಮ ಹಕ್ಕು ಚಲಾಯಿಸಿ.
-ಸಂಜೀವ್‌ಕುಮಾರ್, ಮುಖ್ಯ ಚುನಾವಣಾಧಿಕಾರಿ
**
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜೆಗೆ ಸಿಕ್ಕಿರುವ ಅದ್ಭುತ ಆಯುಧ ಮತ ಹಕ್ಕು. ಅದನ್ನು ಚಲಾಯಿಸದಿದ್ದರೆ ನಮಗೆ ಪ್ರಶ್ನಿಸುವ ಹಕ್ಕು ಇರುವುದಿಲ್ಲ.
-ಗಣೇಶ್, ಚಿತ್ರ ನಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.