ಬೆಂಗಳೂರು: ಜಗದೀಶ ಶೆಟ್ಟರ್ ಅವರು ಬಿಜೆಪಿಗೆ ಮರಳಿದ ಬೆನ್ನಲ್ಲೇ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಮತ್ತು ಕಲ್ಯಾಣರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷ ಹಾಗೂ ಶಾಸಕ ಜನಾರ್ದನ ರೆಡ್ಡಿ ಅವರೂ ಸದ್ಯದಲ್ಲೇ ಬಿಜೆಪಿಗೆ ವಾಪಾಸಾಗಲಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ.
ಈ ಮಧ್ಯೆ, ಲಕ್ಷ್ಮಣ ಸವದಿಯವರು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಗುರುವಾರ ಭೇಟಿ ಮಾಡಿ ಮಾತುಕತೆ ನಡೆಸಿದರು. ಆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸವದಿ, ‘ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ. ಬಿಜೆಪಿ ಸೇರುತ್ತೇನೆ ಎನ್ನುವುದು ಕೇವಲ ಊಹಾಪೋಹ’ ಎಂದು ಹೇಳಿದರು.
ಜಗದೀಶ ಶೆಟ್ಟರ್ ಅವರು ಬಿಜೆಪಿ ಸೇರುತ್ತಾರೆ ಎಂದು ವಾರದ ಹಿಂದೆ ಮಾಧ್ಯಮಗಳಲ್ಲಿ ಪ್ರಕಟವಾದಾಗ, ‘ಇದು ಸುಳ್ಳು, ಬಿಜೆಪಿಯವರು ಸುಖಾಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಶೆಟ್ಟರ್ ಹೇಳಿದ್ದರು.
ರಹಸ್ಯ ಕಾರ್ಯಾಚರಣೆ:
ಬಿ.ವೈ.ವಿಜಯೇಂದ್ರ ಅಧ್ಯಕ್ಷರಾದ ಬೆನ್ನಲ್ಲೇ ಪಕ್ಷ ಬಿಟ್ಟು ಹೋದವರನ್ನು ಮರಳಿ ಕರೆತರುವ ವಿಚಾರಕ್ಕೆ ಚಾಲನೆ ಸಿಕ್ಕಿತ್ತು. ವರಿಷ್ಠರ ಅನುಮತಿ ಪಡೆದುಕೊಂಡೇ ಇದಕ್ಕೆ ಪೂರಕವಾಗಿ ‘ಆಪರೇಷನ್’ ಆರಂಭಿಸಲಾಯಿತು. ಶೆಟ್ಟರ್ ಅವರನ್ನು ಕರೆತರುವುದಕ್ಕೆ ಮೊದಲ ಆದ್ಯತೆ ನೀಡಲಾಯಿತು. ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಶೆಟ್ಟರ್ ಜತೆ ಮಾತುಕತೆ ನಡೆಸಿ, ಮನವೊಲಿಸಿದರು. ಇಬ್ಬರೂ ನಾಯಕರು ಮುಂಬೈನಲ್ಲಿ ಎರಡು ಬಾರಿ ಭೇಟಿ ಮಾಡಿದ್ದರು ಎಂದು ಮೂಲಗಳು ಹೇಳಿವೆ.
ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಅವರನ್ನು ವರಿಷ್ಠರು ದೆಹಲಿಗೆ ಕರೆಸಿಕೊಂಡರು. ಶೆಟ್ಟರ್ ಅವರೂ ಬುಧವಾರವೇ ದೆಹಲಿಗೆ ತೆರಳಿದರು. ಅಮಿತ್ ಶಾ ಬುಧವಾರ ದೆಹಲಿಯಲ್ಲಿ ಇಲ್ಲದ ಕಾರಣ ಗುರುವಾರ ಶಾ ಮತ್ತು ಶೆಟ್ಟರ್ ಭೇಟಿ ನಡೆಯಿತು. ಶೆಟ್ಟರ್ ಅವರ ಈ ನಡೆ ಕಾಂಗ್ರೆಸ್‌ನಲ್ಲೂ ಅಚ್ಚರಿ ಮೂಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಶೆಟ್ಟರ್ ಸೇರ್ಪಡೆಯ ಸುಳಿವಿರಲಿಲ್ಲ. ಮುಂದಿನ ಸರದಿ ಲಕ್ಷ್ಮಣ ಸವದಿ ಮತ್ತು ಜನಾರ್ದನ ರೆಡ್ಡಿ ಅವರದು ಎಂಬ ಚರ್ಚೆ ಬಿಜೆಪಿಯಲ್ಲಿ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.