ಬೆಂಗಳೂರು: ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 25 ಅನ್ನು ಉಳಿಸಿಕೊಳ್ಳಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ನಾಯಕರು, ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಎರಡು ದಿನ ನಡೆದ ಕ್ಲಸ್ಟರ್‌ವಾರು ಸಭೆಗಳಲ್ಲಿ ಪಾಲ್ಗೊಂಡಿದ್ದ ಪ್ರಮುಖರು, ‘ಹಿಂದುತ್ವವಾದಿ ಉಗ್ರ ಕಟ್ಟಾಳು’ಗಳ ಸ್ಪರ್ಧೆಗೆ ಅಪಸ್ವರ ತೆಗೆದಿದ್ದಾರೆ.
ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸಮ್ಮುಖದಲ್ಲಿ ನಗರ ಹೊರವಲಯದ ರಮಾಡ ರೆಸಾರ್ಟ್‌ನಲ್ಲಿ ಈ ಸಭೆ ನಡೆಯಿತು. ಬುಧವಾರ 13 ಹಾಗೂ ಗುರುವಾರ 15 ಲೋಕಸಭಾ ಕ್ಷೇತ್ರಗಳಲ್ಲಿನ ಸದ್ಯದ ರಾಜಕೀಯ ಸ್ಥಿತಿ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಯಿತು. ಹಾಲಿ ಸಂಸದರು, ಆಕಾಂಕ್ಷಿಗಳು, ಹಾಲಿ–ಮಾಜಿ ಶಾಸಕರು ಪಾಲ್ಗೊಂಡು ತಮ್ಮ ಭಾವನೆಗಳನ್ನು ಹಂಚಿಕೊಂಡರು.
‘ಸಭೆಯ ಕೊನೆಯಲ್ಲಿ ಮಾತನಾಡಿದ ವಿಜಯೇಂದ್ರ ಅವರು, ‘ಸಲಹೆಗಳನ್ನಷ್ಟೇ ಇಲ್ಲಿ ಪಡೆದಿದ್ದೇವೆ. ಇದೇ ಅಂತಿಮವಲ್ಲ. ಪ್ರತಿಯೊಂದು ಕ್ಷೇತ್ರಕ್ಕೂ ವೀಕ್ಷಕರ ತಂಡ ಬರಲಿದೆ. ಅವರ ಮುಂದೆಯೂ ತಮ್ಮ ಅಭಿಪ್ರಾಯ ಹಾಗೂ ಹಕ್ಕು ಮಂಡಿಸಬಹುದು. ಎರಡು ದಿನ ನಡೆದ ಸಭೆಯ ಮಾಹಿತಿಯನ್ನು ಕ್ರೋಡೀಕರಿಸಿ ವರಿಷ್ಠರಿಗೆ ವರದಿ ಸಲ್ಲಿಸುತ್ತೇವೆ’ ಎಂದು ಮೂಲಗಳು ತಿಳಿಸಿವೆ.
‘ಕಟ್ಟಾಳು’ಗಳಿಗೆ ವಿರೋಧ
‘ಹಿಂದುತ್ವದ ಉಗ್ರ ಪ್ರತಿಪಾದಕರಿಗೆ ಮತ್ತೆ ಟಿಕೆಟ್ ನೀಡುವುದಕ್ಕೆ ಸಭೆಯಲ್ಲಿ ಕೆಲವರು ವಿರೋಧ ವ್ಯಕ್ತಪಡಿಸಿದರು. ಅದರಲ್ಲೂ ಉತ್ತರ ಕನ್ನಡದ ಅನಂತಕುಮಾರ ಹೆಗಡೆ, ದಕ್ಷಿಣ ಕನ್ನಡದ ನಳಿನ್ ಕುಮಾರ್ ಕಟೀಲ್, ಉಡುಪಿ–ಚಿಕ್ಕಮಗಳೂರಿನ ಶೋಭಾ ಕರಂದ್ಲಾಜೆ ಅವರ ಸ್ಪರ್ಧೆಗೆ ಕೆಲವರು ಅಪಸ್ವರ ಎತ್ತಿದರು’ ಎಂದು ಗೊತ್ತಾಗಿದೆ.
‘ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಚರ್ಚೆ ಬಂದಾಗ, ಐದು ವರ್ಷ ಕ್ಷೇತ್ರದಲ್ಲಿ ಕಾಣಿಸಿಕೊಳ್ಳದೇ ಇದ್ದವರು ಚುನಾವಣೆ ಹೊತ್ತಿಗೆ ದಿಢೀರನೇ ಪ್ರತ್ಯಕ್ಷರಾಗಿದ್ದಾರೆ. ಹಿಂದುತ್ವ ಮತ್ತು ಮೋದಿ ಅಲೆಯಷ್ಟೇ ಅಲ್ಲಿ ನೆರವಿಗೆ ಬಾರದು. ಕೇಂದ್ರ ಸರ್ಕಾರದ ಯಾವುದೇ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲು ಸಂಸದರು ಆಸಕ್ತಿಯನ್ನೇ ತೋರಿಲ್ಲ. ವಿಧಾನಸಭೆ ಚುನಾವಣೆ ಗಮನಿಸಿದರೆ ಹಿಂದುತ್ವಕ್ಕಿಂತ ಅಹಿಂದ ಮತಗಳು ಕೆಲಸ ಮಾಡಿರುವುದು ಕಂಡಿದೆ. ಹೀಗಾಗಿ ಅನಂತಕುಮಾರ ಹೆಗಡೆಯವರಿಗೆ ಟಿಕೆಟ್ ನೀಡಬೇಡಿ’ ಎಂದು ಕೆಲವರು ಪ್ರತಿಪಾದಿಸಿದರು. ಹಿಂದುತ್ವ ಪ್ರತಿಪಾದಕರಿಗೆ ಟಿಕೆಟ್ ತಪ್ಪಿಸಿದರೆ ಬೇರೆಯದೇ ಸಂದೇಶ ಹೋಗುತ್ತದೆ. ಕ್ಷೇತ್ರದಲ್ಲಿ ಹೆಗಡೆಯವರಷ್ಟು ಪ್ರಭಾವಿಗಳು ಯಾರೂ ಇಲ್ಲ ಎಂದು ಅವರ ಬೆಂಬಲಿಗರ ಅಭಿಪ್ರಾಯ ಹೇಳಿದರು’ ಎಂದು ತಿಳಿದುಬಂದಿದೆ.
‘ಉಡುಪಿ ಸಂಸದೆ ಹಾಗೂ ಕೇಂದ್ರ ಸಚಿವ ಶೋಭಾ ಅವರು ಕ್ಷೇತ್ರಕ್ಕೆ ಬಂದಿಲ್ಲ. ಆನೆ ಹಾವಳಿ, ಮಳೆ ಹಾನಿ, ಅಡಿಕೆ ಬೆಳೆಗಾರರ ಸಮಸ್ಯೆಯ ಬಗ್ಗೆ ಯಾವತ್ತೂ ಸ್ಪಂದಿಸಿಲ್ಲ. ಕ್ಷೇತ್ರದಲ್ಲಿ ಉತ್ತಮ ವಾತಾವರಣ ಇಲ್ಲ. ಕಾಂಗ್ರೆಸ್‌ನಿಂದ ಜಯಪ್ರಕಾಶ್ ಹೆಗ್ಡೆ ಕಣಕ್ಕೆ ಇಳಿದರೆ ಗೆಲುವು ಸಾಧ್ಯವೇ ಇಲ್ಲ’ ಎಂಬ ಅಭಿಪ್ರಾಯ ಬಂದಿತು ಎಂದು ಗೊತ್ತಾಗಿದೆ.
‘ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯ ಬಗ್ಗೆ ಆಕ್ಷೇಪವಿಲ್ಲ. ಜೈಶಂಕರ್ ಸ್ಪರ್ಧಿಸಿದರೆ ಅವರಿಗೆ ಟಿಕೆಟ್ ತಪ್ಪಲಿದೆ. ಒಂದು ವೇಳೆ, ಹಿಂದೆ ಟಿಕೆಟ್ ನಿರಾಕರಿಸಲಾಗಿದ್ದ ತೇಜಸ್ವಿನಿ ಅನಂತಕುಮಾರ್ ಅವರಿಗೆ ಕೊಟ್ಟರೆ ತೇಜಸ್ವಿ ಸೂರ್ಯಗಿಂತ ಹೆಚ್ಚಿನ ಮತಗಳಲ್ಲಿ ಸಲೀಸಿನಿಂದ ಗೆಲುವು ಸಾಧ್ಯ ಎಂಬ ಅಭಿಪ್ರಾಯ ಪಕ್ಷದ ವೇದಿಕೆಗಳಲ್ಲಿ ಚರ್ಚೆ ನಡೆದಿದೆ. ಆದರೆ, ಎರಡು ದಿನಗಳ ಸಭೆಯಲ್ಲಿ ಈ ಬಗ್ಗೆ ಅಭಿಪ್ರಾಯ ಬಂದಿಲ್ಲ’ ಎಂದು ಮುಖಂಡರೊಬ್ಬರು ತಿಳಿಸಿದರು.
ಸಂಸದರಾದ ಪಿ.ಸಿ.ಗದ್ದಿಗೌಡರ್, ಉಮೇಶ ಜಾಧವ್, ಮಂಗಳಾ ಅಂಗಡಿ, ರಮೇಶ ಜಿಗಜಿಣಗಿ, ಜಿ.ಎಂ. ಸಿದ್ದೇಶ್ವರ, ಜಿ.ಎಸ್. ಬಸವರಾಜು, ದೇವೇಂದ್ರಪ್ಪ, ರಾಜಾ ಅಮರೇಶ್ವರ ನಾಯಕ ಅವರ ಬಗ್ಗೆ ಪೂರ್ಣ ಒಲವು ವ್ಯಕ್ತವಾಗಿಲ್ಲ. ಸಿದ್ದೇಶ್ವರಗೆ ನೀಡದೇ ಇದ್ದರೆ ಅವರ ಪುತ್ರನಿಗೆ ಟಿಕೆಟ್ ನೀಡುವುದು ಸೂಕ್ತ ಎಂಬ ಅಭಿಮತ ಬಂದಿತು ಎಂದು ಗೊತ್ತಾಗಿದೆ.
ಟಿಕೆಟ್ ನೀಡಿದರೆ ಸ್ಪರ್ಧಿಸುವುದಾಗಿ ಗದ್ದಿಗೌಡರ್ ಹೇಳಿದ್ದಾರೆ. ಅಲ್ಲಿಂದ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಕಣಕ್ಕೆ ಇಳಿಸುವ ಬಗ್ಗೆ ಯಡಿಯೂರಪ್ಪ ಒಲವು ಹೊಂದಿದ್ದಾರೆ ಎಂದು ಹೇಳಲಾಗಿದೆ. ಮಾಜಿ ಸಚಿವ ಮುರುಗೇಶ ನಿರಾಣಿ ಅವರಿಗೆ ಟಿಕೆಟ್ ನೀಡುವ ಬಗ್ಗೆ ಚರ್ಚೆಯಾಗಿದೆ. ರಾಜಾ ಅಮೇಶ್ವರ ನಾಯಕ ಬಗ್ಗೆ ಸಾಕಷ್ಟು ವಿರೋಧವಿದ್ದು, ಅವರ ಬದಲು ಮಾಜಿ ಶಾಸಕ ರಾಜೂಗೌಡ ಅವರಿಗೆ ಟಿಕೆಟ್ ಕೊಡುವ ಕುರಿತು ಒಲವು ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.
ರಾಜಕೀಯದಿಂದ ದೂರ ಉಳಿಯುವುದಾಗಿ ಹೇಳಿರುವ ಕೇಂದ್ರ ಸಚಿವ ನಾರಾಯಣಸ್ವಾಮಿ ಅವರನ್ನು ಮತ್ತೆ ಚಿತ್ರದುರ್ಗದಿಂದಲೇ ಕಣಕ್ಕೆ ಇಳಿಸುವ ಬಗ್ಗೆ ಚರ್ಚೆಯಾಗಿದೆ ಎಂದು ಗೊತ್ತಾಗಿದೆ.
ಅಣ್ಣನಿಗೆ ಖಚಿತಪಡಿಸಿಲ್ಲ– ವಿಜಯೇಂದ್ರ
‘ಟಿಕೆಟ್ ನೀಡುವುದು ಖಚಿತಪಡಿಸಿದರೆ ತಯಾರಿ ನಡೆಸುವುದಾಗಿ ಸಂಸದರೊಬ್ಬರು ಸಭೆಯಲ್ಲಿ ಕೇಳಿಕೊಂಡರು. ಅದಕ್ಕೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಅಣ್ಣನಿಗೆ (ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ) ಟಿಕೆಟ್ ಖಚಿತಪಡಿಸುವ ಸ್ಥಿತಿಯಲ್ಲಿ ನಾನಿಲ್ಲ. ಏನಿದ್ದರೂ ವರಿಷ್ಠರ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ಹೇಳಿದರು’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.