ದಾವಣಗೆರೆ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದರೆ ಧರ್ಮಸ್ಥಳದ ಮಂಜುನಾಥಸ್ವಾಮಿ ಸನ್ನಿಧಿಯಲ್ಲಿ ಪ್ರಮಾಣ ಮಾಡಲಿ ಎಂದು ಪಕ್ಷದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಪಂಥಾಹ್ವಾನ ನೀಡಿದರು.
‘ಬಿಜೆಪಿ ಅಭ್ಯರ್ಥಿಯಾಗಿದ್ದ ಗಾಯತ್ರಿ ಸಿದ್ದೇಶ್ವರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೆ ಪ್ರಮಾಣದ ಮೂಲಕ ಸಾಭೀತುಪಡಿಸಲಿ. ಧರ್ಮಸ್ಥಳದ ದೇವರ ಸನ್ನಿಧಿಗೆ ತೆರಳುವ ದಿನವನ್ನು ಅವರೇ ನಿಗದಿಪಡಿಸಲಿ. ಯಾರು ಪ್ರಾಮಾಣಿಕರು ಎಂಬುದು ಅಲ್ಲಿಯೇ ನಿರ್ಧಾರವಾಗಲಿ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.
‘ಬಿ.ಎಸ್.ಯಡಿಯೂರಪ್ಪ ಸೇರಿ ಪಕ್ಷದ ಹಲವು ಮುಖಂಡರನ್ನು ರೇಣುಕಾಚಾರ್ಯ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ವಿರುದ್ಧ ಧ್ವನಿ ಎತ್ತದ ಅವರು, ಎಷ್ಟು ಬಾರಿ ಕಾಂಗ್ರೆಸ್ ಬಾಗಿಲು ಬಡಿದಿದ್ದಾರೆ ಎಂಬುದಕ್ಕೆ ಸಾಕ್ಷ್ಯವಿದೆ. ಲೋಕಸಭಾ ಚುನಾವಣೆಯಲ್ಲಿ ದ್ರೋಹ ಬಗೆದವರನ್ನು ಪಕ್ಷದಿಂದ ಹೊರಹಾಕುವವರೆಗೂ ಬಿಡುವುದಿಲ್ಲ’ ಎಂದು ಹೇಳಿದರು.
‘ವಿಧಾನಸಭಾ ಚುನಾವಣೆ ಮುಗಿದ ಬಳಿಕ ರೇಣುಕಾಚಾರ್ಯ ಅವರು ಕಾಂಗ್ರೆಸ್ ಬಾಗಿಲು ಬಡಿದಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ಅನೇಕರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗುವುದು ವಿಳಂಬವಾಗಿದ್ದರೆ ರೇಣುಕಾಚಾರ್ಯ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದರು. ಅವರೊಬ್ಬ ಅವಕಾಶವಾದಿ ರಾಜಕಾರಣಿ’ ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ವೀರೇಶ್ ಹನಗವಾಡಿ ಆರೋಪಿಸಿದರು.
‘ಬೇಡ ಜಂಗಮ ಹೆಸರಿನ ಪರಿಶಿಷ್ಟ ಜಾತಿ ಪ್ರಮಾಣಪತ್ರ ಹುಟ್ಟಿದ್ದೇ ರೇಣುಕಾಚಾರ್ಯ ಮನೆಯಲ್ಲಿ. ಬಿಜೆಪಿ ಅಧಿಕೃತ ಅಭ್ಯರ್ಥಿ ವಿರುದ್ಧ ಕುಟುಂಬದ ಸದಸ್ಯರನ್ನು ಕಣಕ್ಕೆ ಇಳಿಸಿ ಪಕ್ಷಕ್ಕೆ ಮುಜುಗರವುಂಟು ಮಾಡಿದ್ದಾರೆ. ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಆಗಿರುವ ಹಿನ್ನಡೆಗೆ ಇದು ಕೂಡ ಕಾರಣವಾಗಿದೆ. ಪ್ರಚಾರದ ಗೀಳು, ಕೀಳು ಮಟ್ಟದ ರಾಜಕಾರಣದಿಂದ ಪಕ್ಷಕ್ಕೆ ಸಮಸ್ಯೆ ಆಗುತ್ತಿದೆ’ ಎಂದು ಆರೋಪಿಸಿದರು.
ಬಿಜೆಪಿ ಮುಖಂಡರಾದ ಶ್ರೀನಿವಾಸ್ ದಾಸ ಕರಿಯಪ್ಪ, ಕೆ.ವಿ.ಚನ್ನಪ್ಪ, ಜಗದೀಶ್, ರವಿಕುಮಾರ್, ರಾಜು ನೀಲಗುಂದ, ಹೊನ್ನಾಳಿ ಹನುಮಂತಪ್ಪ ಇದ್ದರು.
ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಒಳಪೆಟ್ಟಿನಿಂದ ಪಕ್ಷದ ಅಭ್ಯರ್ಥಿಗೆ ಸೋಲುಂಟಾಗಿದೆ. ಜಗಳೂರು ಕ್ಷೇತ್ರದಲ್ಲಿ ಪಕ್ಷಕ್ಕೆ ಕಡಿಮೆ ಮತ ಸಿಕ್ಕಿರುವುದಕ್ಕೆ ನಾನೇ ಹೊಣೆ ಹೊರುವೆ.-ಎಸ್.ವಿ.ರಾಮಚಂದ್ರಪ್ಪ, ಮಾಜಿ ಶಾಸಕ, ಜಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.